ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಸ್ಟಾಡೋಮ್’ ಬೋಗಿಗಳಲ್ಲಿ ಪ್ರಯಾಣ: ಪ್ರಕೃತಿಯ ರಮಣೀಯ ನೋಟದ ಪುಳಕ!

Last Updated 11 ಜುಲೈ 2021, 20:15 IST
ಅಕ್ಷರ ಗಾತ್ರ

ಮಂಗಳೂರು: ದೃಷ್ಟಿ ಹಾಯಿಸಿದಷ್ಟು ದೂರದವರೆಗೂ ಹಸಿರ ಹೊನಲು, ಕ್ಯಾನ್ವಾಸ್‌ನಲ್ಲಿ ಮೈದಳೆದ ಚಿತ್ರಗಳಂತೆ ಕಾಣುವ ಪ್ರಕೃತಿ ಸೊಬಗು, ಧುತ್ತನೆ ಎದುರಾಗುವ ಕತ್ತಲೆಯ ಸುರಂಗ, ಮತ್ತೆ ಮೈಚಾಚಿದ ನಿಸರ್ಗ, ಗಾಜಿನ ಕಿಟಕಿಗೆ ಬಂದು ಮುತ್ತಿಕ್ಕುವ ತುಂತುರು ಹನಿ, ಮೋಡ ಮತ್ತು ಮಳೆಯ ಪರದೆಯಾಟ, ಕಡಿದಾದ ಗುಡ್ಡದ ನಡುವೆ ಬಳುಕುತ್ತಾ ಇಳಿದು ಬರುವ ಹಾಲ್ನೊರೆಯ ಸುಂದರಿಯರು...

ಮಂಗಳೂರಿನಿಂದ ಭಾನುವಾರ ಬೆಳಿಗ್ಗೆ ವಿಸ್ಟಾಡೋಮ್ ಬೋಗಿಯಲ್ಲಿ ಪ್ರಯಾಣಿಸಿದವರ ಅನುಭವವಿದು. ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿಸ್ಟಾಡೋಮ್ ಬೋಗಿಯನ್ನು ಪರಿಚಯಿಸಿದೆ. ಮಂಗಳೂರು-ಯಶವಂತಪುರ ರೈಲಿಗೆ ಅಳವಡಿಸಿದ ಎರಡು ಬೋಗಿಗಳ ಸಂಚಾರಕ್ಕೆ ಮಂಗಳೂರಿನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿದರು.

‘ವಿಸ್ಟಾಡೋಮ್ ಬೋಗಿ ಇರುವ ರೈಲಿನ ಪ್ರಯಾಣ ಅವಿಸ್ಮರಣೀಯ. ಗಾಜಿನ ಹೊದಿಕೆಯ ಬೋಗಿಯಲ್ಲಿ ಕುಳಿತು ಹಸಿರಿನ ನಡುವೆ ಸಾಗುವಾಗ ಸಿಗುವ ಖುಷಿಯೇ ದಿವ್ಯ ಅನುಭೂತಿ’ ಎಂದರು ಚಿಕ್ಕಮಗಳೂರಿನ ಲೋಕೇಶ್. ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿರುವ ಅವರು, ವಿಸ್ಟಾಡೋಮ್ ಪ್ರಯಾಣದ ಅನುಭವ ಪಡೆಯಲೆಂದೇ ಮಂಗಳೂರಿಗೆ ಬಂದು, ಹಾಸನ ತನಕ ಪ್ರಯಾಣಿಸಿದರು.

ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ 12 ವಿದ್ಯಾರ್ಥಿಗಳು ಸುಬ್ರಹ್ಮಣ್ಯದಿಂದ ಸಕಲೇಶಪುರದವರೆಗೆ ಪ್ರಯಾಣಿಸಿ, ಪಶ್ಚಿಮಘಟ್ಟದ ಸೊಬಗನ್ನು ಕಣ್ತುಂಬಿಕೊಂಡು ವಾಪಸಾದರು.

ವಿಸ್ಟಾಡೋಮ್‌ ಹವಾನಿಯಂತ್ರಿತ ಬೋಗಿಗಳಲ್ಲಿ ತಲಾ 44 ಆಸನಗಳಿದ್ದು, 75 ಸೀಟುಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿದ್ದರು. ಮೊದಲ ಪ್ರಯಾಣಕ್ಕೆ ರೈಲ್ವೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಯೂ ಪ್ರಯಾಣಿಕರಿಗೆ ಸಾಥ್ ನೀಡಿದರು. ಮಂಗಳೂರಿನಿಂದ ರೈಲು ಹೊರಡುತ್ತಿದ್ದಂತೆ ಪ್ರಯಾಣಿಕರು, 180 ಡಿಗ್ರಿ ತಿರುಗಬಹುದಾದ ಆಸನವನ್ನು ತಮಗೆ ಅನುಕೂಲವಾಗುವಂತೆ ಜೋಡಿಸಿಕೊಂಡು, ರಮಣೀಯ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದರು. ಸುಬ್ರಹ್ಮಣ್ಯ ರೈಲು ನಿಲ್ದಾಣ ದಾಟುತ್ತಿದ್ದಂತೆ ಪಶ್ಚಿಮಘಟ್ಟದ ಸೊಬಗನ್ನು ಕಂಡು ರೋಮಾಂಚನಗೊಂಡರು.

ಗಾಜಿನ ಕಿಟಕಿಯ ಹಿಂದೆ, ಬೋಗಿಗಳ ಬಾಗಿಲಿನಲ್ಲಿ ನಿಂತು ಪೈಪೋಟಿಗೆ ಬಿದ್ದವರಂತೆ ಅಪೂರ್ವ ದೃಶ್ಯ ವೀಕ್ಷಿಸಿದರು. ಝರಿ–ತೊರೆಗಳನ್ನು ಕಂಡು ಕೇಕೆ ಹಾಕಿದರು. ಸುಬ್ರಹ್ಮಣ್ಯ ದಿಂದ ಸಕಲೇಶಪುರದವರೆಗೆ ಸುಮಾರು 57 ಸುರಂಗ ಮಾರ್ಗಗಳಿದ್ದು, ಅವುಗಳಲ್ಲಿ ರೈಲು ಸಾಗುತ್ತಿದ್ದಂತೆ ಕಗ್ಗತ್ತಲ ಅನುಭವ. ಮಂಜಿನಿಂದ ಮರೆಯಾಗಿದ್ದ ದೂರದ ಬೆಟ್ಟಗಳು ಕಣ್ಣಿಗೆ ಹಬ್ಬ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT