ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ರಾಜ್ಯದಲ್ಲಿ ಮೃತರ ಸಂಖ್ಯೆ 7 ಸಾವಿರದತ್ತ

Last Updated 10 ಸೆಪ್ಟೆಂಬರ್ 2020, 18:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಲ್ಲಿ ಮತ್ತೆ 129 ಮಂದಿ ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 7 ಸಾವಿರದತ್ತ (6,937) ದಾಪುಗಾಲು ಇರಿಸಿದೆ.

ರಾಜ್ಯದಲ್ಲಿ ಮಾರ್ಚ್‌ 10ರಂದು ಪ್ರಥಮ ಕೋವಿಡ್ ‍ಮರಣ ಪ್ರಕರಣ ವರದಿಯಾಗಿತ್ತು. ಅದಾಗಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ (ಜೂ.30) ಮೃತರ ಸಂಖ್ಯೆ 246ಕ್ಕೆ ತಲುಪಿತ್ತು. ಬಳಿಕ ಏರುಗತಿ ಪಡೆದು, ಜುಲೈ ಅಂತ್ಯಕ್ಕೆ 2,314 ಪ್ರಕರಣಗಳು ವರದಿಯಾಗಿದ್ದವು.ಆಗಸ್ಟ್ ‌ತಿಂಗಳಲ್ಲಿ 3,388 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿತ್ತು. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 109 ಮರಣ ಪ್ರಕರಣಗಳು ಪತ್ತೆಯಾಗಿದ್ದವು. ಈ ತಿಂಗಳ 10 ದಿನಗಳಲ್ಲಿ 1,235 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ಮೊದಲ ಪ್ರಕರಣ ವರದಿಯಾಗಿ ಆರು ತಿಂಗಳಾಗುವಷ್ಟರಲ್ಲಿ ಮೃತರ ಸಂಖ್ಯೆ 7 ಸಾವಿರದ ಗಡಿ ಸಮೀಪಿಸಿದೆ.

ರಾಜ್ಯದಲ್ಲಿ ಹೊಸದಾಗಿ 9,217 ಮಂದಿ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4.30 ಲಕ್ಷಕ್ಕೆ ಏರಿಕೆಯಾಗಿದೆ. ಈ ತಿಂಗಳಲ್ಲಿ 88,524 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದ್ದು, ಪ್ರತಿನಿತ್ಯ ಸರಾಸರಿ 8,852 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 11.94ರಷ್ಟಿದೆ. ಒಂದೇ ದಿನ 54,709 ಕೋವಿಡ್ ಪರೀಕ್ಷೆ ನಡೆಸ
ಲಾಗಿದೆ.

4.84 ಲಕ್ಷ ಮಂದಿ ಕ್ವಾರಂಟೈನ್: ಕಳೆದ 14 ದಿನಗಳಲ್ಲಿ ಕೊರೊನಾ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದ 6.02 ಲಕ್ಷ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 5.32 ಲಕ್ಷ ಮಂದಿ ಯನ್ನು ಪತ್ತೆ ಮಾಡಲಾಗಿದೆ. 4.84 ಲಕ್ಷ ಮಂದಿ ಸದ್ಯ ಮನೆ ಕ್ವಾರಂಟೈನ್‌ನಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ 1,672 ಮಂದಿ ಸೇರಿದಂತೆ ರಾಜ್ಯದಲ್ಲಿ ಮತ್ತೆ 7,021 ಮಂದಿ ಚೇತರಿಸಿಕೊಂಡಿದ್ದಾರೆ.
ಈವರೆಗೆ ಗುಣಮುಖರಾದವರ ಸಂಖ್ಯೆ 3.22 ಲಕ್ಷಕ್ಕೆ ತಲುಪಿದೆ. ಲಕ್ಷಕ್ಕೂ ಅಧಿಕ ಸೋಂಕಿತರು ಸದ್ಯ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT