ಕಸ್ತೂರಿ ರಂಗನ್ ವರದಿ: ಎನ್‌ಜಿಟಿ ಮುಂದೆ ಮಧ್ಯಂತರ ಅರ್ಜಿ
ಬೆಂಗಳೂರು: ರಾಜ್ಯದ ಪಶ್ಚಿಮಘಟ್ಟ ಪ್ರದೇಶದ 1,533 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯಕ್ಕೆ ಸೇರ್ಪಡೆ ಮಾಡಿರುವ ಡಾ.ಕೆ.ಕಸ್ತೂರಿ ರಂಗನ್ ವರದಿಯ ಸಂಬಂಧ ರಾಷ್ಟ್ರೀಯ ಹಸಿರು ಪೀಠದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಅರಣ್ಯ ಮತ್ತು ಕಾನೂನು ಸಚಿವರ ಜತೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಎಲ್ಲ 1,533 ಗ್ರಾಮಗಳ ಹಿತವನ್ನು ಕಾಯಲಿದ್ದು, ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಆದ್ದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ವರದಿ ಜಾರಿಗೆ ಡಿ.31 ರೊಳಗೆ ಅಧಿಸೂಚನೆ ಹೊರಡಿಸಲು ನ್ಯಾಯಾಲಯ ಗಡುವು ನೀಡಿದೆ. ಇದರಿಂದ ಮಲೆನಾಡು ಭಾಗದ ಜನರು ಆತಂಕಿತರಾಗಿದ್ದಾರೆ. ಒಕ್ಕಲೆಬ್ಬಿಸುತ್ತಾರೆ ಎಂಬ ಭೀತಿಯೂ ಮೂಡಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್, ಬಿಜೆಪಿಯ ಆರಗ ಜ್ಞಾನೇಂದ್ರ, ಕೆ.ಜಿ.ಬೋಪಯ್ಯ, ಕುಮಾರ್ ಬಂಗಾರಪ್ಪ ಮತ್ತು ಎಂ.ಪಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಸುರೇಶ್‌ಕುಮಾರ್, ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಒಟ್ಟು ನಾಲ್ಕು ಬಾರಿ ಕರಡು ಅಧಿಸೂಚನೆ ಹೊರಡಿಸಿದೆ. 2018 ರ ಅಕ್ಟೋಬರ್ 3 ರಂದು ನಾಲ್ಕನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ರದ್ದುಪಡಿಸುವಂತೆ ಮುಖ್ಯಮಂತ್ರಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದು, ಅತಿ ಶೀಘ್ರವೇ ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ಕಳಿಸಲಿದೆ ಎಂದು ಹೇಳಿದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವರದಿ ಜಾರಿ ಆಗುತ್ತದೆ ಎಂಬ ಕಾರಣಕ್ಕೆ ಆತಂಕಿತರಾಗಿರುವ ಗ್ರಾಮಸ್ಥರು, ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸಿದ್ದಾರೆ. ಅವರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸಂದೇಶ ನೀಡಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್, ‘ಜನರ ಸಮಸ್ಯೆಗಳನ್ನು ದೂರ ಮಾಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಾಗ, ಇಂತಹ ಸಂಕಷ್ಟಗಳ ಪರಿಹರಿಸಲು ಸಾಧ್ಯವಿದೆ. ಆದ್ದರಿಂದ ಚುನಾವಣೆ ಬಹಿಷ್ಕರಿಸದೇ ಆ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು’ ಎಂದು ಮನವಿ ಮಾಡಿದರು.
ಸುನಿಲ್‌ಕುಮಾರ್ ಮಾತನಾಡಿ, ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆ ವಿರೋಧ ಇಲ್ಲ. ಅದರ ಹೆಸರಲ್ಲಿ ಜನರಿಗೆ ತೊಂದರೆ ಆಗಬಾರದು. ಮೂಲಸೌಕರ್ಯ, ರಸ್ತೆ, ವಿದ್ಯುತ್ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಬೇಕು. ಕೃಷಿ ಚಟುವಟಿಕೆಗೆ ತೊಂದರೆ ಆಗಬಾರದು ಮತ್ತು ಗ್ರಾಮಸ್ಥರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.