ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಅಧಿಕಾರಿ ಸೇರಿ ಇಬ್ಬರಿಗೆ ಜೈಲು

ಹತ್ತು ವರ್ಷಗಳ ಹಿಂದಿನ ಕೆಐಎಡಿಬಿ ಭೂ ಹಗರಣ
Last Updated 19 ಏಪ್ರಿಲ್ 2021, 17:21 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ಹತ್ತು ವರ್ಷಗಳ ಹಿಂದೆ ನಡೆದಿದ್ದ ಭೂ ಹಗರಣದಲ್ಲಿ ನಿವೃತ್ತ ಕೆಎಎಸ್‌ ಅಧಿಕಾರಿ ಮತ್ತು ಖಾಸಗಿ ವ್ಯಕ್ತಿಯೊಬ್ಬರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಬಿ. ಚಿಕ್ಕಬೆಟ್ಟಯ್ಯ ಮತ್ತು ಹೊರಮಾವು ನಿವಾಸಿ ಮುನಿರಾಜು ಶಿಕ್ಷೆಗೊಳಗಾದವರು. ಇಬ್ಬರಿಗೂ ಕ್ರಮವಾಗಿ ₹ 2.10 ಲಕ್ಷ ಮತ್ತು ₹ 2 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಪಾರ್ಕ್‌ಗಳ ನಿರ್ಮಾಣಕ್ಕೆ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾದ ಮೊದಲ ಪ್ರಕರಣವಿದು.

ಕೆಐಎಡಿಬಿ 2006ರಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಅರೆಬಿನ್ನಮಂಗಲದ ಸರ್ವೆ ನಂಬರ್‌ 74/2ರಲ್ಲಿ 2 ಎಕರೆ 10 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಮುನಿಕೃಷ್ಣ ಎಂಬುವವರು ಈ ಜಮೀನಿನ ಮಾಲೀಕರು. ಆದರೆ, ಮುನಿರಾಜು ಸದರಿ ಜಮೀನಿನ ಮಾಲೀಕ ಎಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಅವುಗಳ ಆಧಾರದಲ್ಲಿ ₹ 1.39 ಕೋಟಿ ಪರಿಹಾರವನ್ನೂ ಪಾವತಿಸಲಾಗಿತ್ತು.

2010ರಲ್ಲಿ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ.ಸಿ. ಲಕ್ಷ್ಮೀನಾರಾಯಣ, ಎಫ್‌ಐಆರ್‌ ದಾಖಲಿಸಿದ್ದರು. ನಂತರ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಕೆ. ರವಿಶಂಕರ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

15 ಸಾಕ್ಷಿಗಳ ವಿಚಾರಣೆ ನಡೆಸಿದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್‌ ಕೆ., 42 ದಾಖಲೆಗಳನ್ನೂ ಪರಿಶೀಲನೆ ನಡೆಸಿದ್ದರು. ಏಪ್ರಿಲ್‌ 6ರಂದು ಅಂತಿಮ ಆದೇಶ ಪ್ರಕಟಿಸಿದ್ದು, ‘ಚಿಕ್ಕಬೆಟ್ಟಯ್ಯ ಮತ್ತು ಮುನಿರಾಜು ದೋಷಿಗಳು’ ಎಂದು ಸಾರಿದ್ದಾರೆ. ಇಬ್ಬರಿಗೂ ತಲಾ ಎರಡು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT