ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ವೇದಿಕೆಯಲ್ಲಿ ರಾಜಣ್ಣ-ಪರಮೇಶ್ವರ್: ಶಿರಾ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ

Last Updated 2 ಅಕ್ಟೋಬರ್ 2020, 6:57 IST
ಅಕ್ಷರ ಗಾತ್ರ

ತುಮಕೂರು: ಪರಸ್ಪರ ವಿರುದ್ಧ ಧ್ರುವದ ರೀತಿಯಲ್ಲಿ ಇದ್ದ ಶಾಸಕ ಜಿ. ಪರಮೇಶ್ವರ ಹಾಗೂ ಕೆ.ಎನ್. ರಾಜಣ್ಣ ಬಹಳ ದಿನಗಳ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಈ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಆಯಿತು.

ವಿಧಾನಸಭೆ ಚುನಾವಣೆ ತರುವಾಯ ಈ ಇಬ್ಬರು ನಾಯಕರು ಪರಸ್ಪರ ಯಾವುದೇ ಮಾತುಕತೆ ನಡೆಸಿರಲಿಲ್ಲ. ಪರಮೇಶ್ವರ ಉಪಮುಖ್ಯಮಂತ್ರಿ ಆಗಿದ್ದಾಗ ರಾಜಣ್ಣ ಪದೇ ಪದೇ ಪರಮೇಶ್ವರ ಅವರನ್ನು ಝೀರೊ ಟ್ರಾಫಿಕ್ ಮಂತ್ರಿ ಎಂದು ಟೀಕಿಸುತ್ತಿದ್ದರು. ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ, ಬೆಂಬಲಿಗರ ಬೀದಿ ಜಗಳ ಕೆಪಿಸಿಸಿಗೆ ಬಗೆಹರಿಸಲು ಸಾಧ್ಯವಾಗಿರಲಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಜಿ. ಪರಮೇಶ್ವರ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಹೋಗಿ ರೇಪ್ ಪಾರ್ಟಿ ಆಗಿದೆ. ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶವೇ ತಲೆತಗ್ಗಿಸಬೇಕಾಗಿದೆ. ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಸಮುದಾಯಕ್ಕೆ ರಕ್ಷಣೆ ಇಲ್ಲ. ಉತ್ತರ ಪ್ರದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಂಧನವು ನಾವು ಯಾವ ನಾಡಿನಲ್ಲಿ ಇದ್ದೇವೆ ಎನ್ನುವುದನ್ನು ಕೇಳಿಕೊಳ್ಳಬೇಕಾಗಿದೆ. ಇದನ್ನು ನಾವು ಇಲ್ಲಿಗೆ ಬಿಡುವುದಿಲ್ಲ ಎಂದರು.

ಜಯಚಂದ್ರ ಕಳೆದ ಚುನಾವಣೆಯಲ್ಲಿ ಸೋಲಬಾರದಿತ್ತು. ಅವರು ಆ ಕ್ಷೇತ್ರಕ್ಕೆ ಅಪಾರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಚುನಾವಣೆ ರಂಗೇರುತ್ತಿದೆ. ಚುನಾವಣೆಯಲ್ಲಿ ಜಯಚಂದ್ರ ಗೆಲುವು ನಿಶ್ಚಿತ. ರಾಜ್ಯದಲ್ಲಿ ಭ್ರಷ್ಟರ ಆಡಳಿತ ಇದೆ ಎಂದು ದೂರಿದರು.

ಭಾರತಕ್ಕೆ ಮಾತ್ರ ಕೋವಿಡ್ ಬಂದಿದ್ದರೆ ಅದಕ್ಕೂ ಕಾಂಗ್ರೆಸ್ ಕಾರಣ ಎನ್ನುತ್ತಿದ್ದರು. ಸ್ಯಾನಿಟೈಸರ್ ಖರೀದಿ, ಮಾಸ್ಕ್ ಖರೀದಿಯಲ್ಲಿ ಬಿಜೆಪಿ ಸರ್ಕಾರ ಹಣ ಲೂಟಿ ಮಾಡಿದೆ. ಬಿಜೆಪಿಗೆ ಮಾನ ಮರ್ಯಾದೆ ಇಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮರೆತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ ಎನ್ನುವರು ಆದರೆ ಜಿಎಸ್‌ಟಿ ಪಾಲು, ನೆರೆ ಪರಿಹಾರಕ್ಕೆ ಹಣ ನೀಡಿಲ್ಲ. ಈ ಎಲ್ಲ ವಿಚಾರಗಳನ್ನು ಶಿರಾ ಚುನಾವಣೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಶಿರಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲತ್ತೇವೆ. ಇದು ಖಚಿತ. ಜೆಡಿಎಸ್‌ನವರು ಬೇಕಾದಾಗ ನಮ್ಮನ್ನು ಒಳ್ಳೆಯವರು ಎನ್ನುವರು ಬೇಡ ಆದಾಗ ಕೆಟ್ಟವರು ಎನ್ನುತ್ತಾರೆ ಎಂದರು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್, ಕುಮಾರ ಸ್ವಾಮಿ ಅವರನ್ನು ಮುಖ್ಯ ಮಂತ್ರಿ ಮಾಡಿದ್ದು ಕಾಂಗ್ರೆಸ್. ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕು ಎಂದು ಜೆಡಿಎಸ್ ಜತೆ ಹೋಗಿದ್ದೆವು. ನಮ್ಮ ನಡುವೆ ಒಗ್ಗಟ್ಡು ಇದ್ದೇ ಇದೆ. ಯಾವುದೇ ಒಗ್ಗಟ್ಟು ಬ್ರೇಕ್ ಆಗಿಲ್ಲ. ರಾಜಕಾರಣದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಸ್ವಾಭಾವಿಕ. ನಾವು ಎಲ್ಲ ಒಟ್ಟಾಗಿದ್ದೇನೆ. ಶಿರಾದಲ್ಲಿ ಗೆಲ್ಲುತ್ತೇವೆ ಎಂದು ಪರಮೇಶ್ವರ ತಿಳಿಸಿದರು.

ದೇಶಕ್ಕೆ ಕಾಂಗ್ರೆಸ್ ಅಗತ್ಯ: ಕೆ.ಎನ್.ರಾಜಣ್ಣ

ಶಿರಾ ಚುನಾವಣೆಯಲ್ಲಿ ನಾವು ಒಗ್ಗಟ್ಟಾಗಿಯೇ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ದೇಶಕ್ಕೆ ಅಗತ್ಯವಾಗಿದೆ. ಗಾಂಧಿ ಕುಟುಂಬದ ನಾಯಕತ್ವ ಪಕ್ಷಕ್ಕೆ ಅನಿವಾರ್ಯ. ಜಯಚಂದ್ರ ಅವರನ್ನು ಗೆಲ್ಲುಸುತ್ತೆವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ಕಾಂಗ್ರೆಸ್ ಪಕ್ಷ ದೊಡ್ಡದು. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಇದ್ದ ಪರಿಸ್ಥಿತಿ ಈಗ ಇಲ್ಲ. ಕಾಂಗ್ರೆಸ್ ಮುಂದೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ತೋರಿಸಬೇಕಾಗಿದೆ. ಶಿರಾ ಕ್ಷೇತ್ರವು ಬದಲಾವಣೆಯ ದಿಕ್ಸೂಚಿ ಆಗಲಿದೆ ಎಂದರು.

ಜಯಚಂದ್ರ ಅವರಿಗೆ ಒಳ ಏಟು ಹೊರ ಏಟು ಏನೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮದೆಲ್ಲ ಗೆಲ್ಲುವ ಏಟು ಅಷ್ಟೇ. ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಈ ದಿನ ನಾವು ಒಗ್ಗಟ್ಟಿನ ಮಂತ್ರ ಜಪಿಸುತ್ತೇವೆ ಎಂದರು.

ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ಮನದಲ್ಲಿನ ಕಹಿ ಮರೆಯುತ್ತೇವೆ. ನಮ್ಮ ಇಂದಿನ ಒಗ್ಗಟ್ಟು ಕಾರ್ಯಕರ್ತರಿಗೆ ಹೊಸ ಸಂದೇಶ ನೀಡಿದೆ ಎಂದು ಹೇಳಿದರು.

ಶಿರಾ ಉಪಚುನಾವಣೆ ರಾಜ್ಯಕ್ಕೆ ದಿಕ್ಸೂಚಿ: ಟಿ.ಬಿ.ಜಯಂದ್ರ

ಅನಿರೀಕ್ಷಿತ ವಾಗಿ ಚುನಾವಣೆ ಬಂದಿದೆ. ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಿಲ್ಲೆಯ ಎಲ್ಲ ಮುಖಂಡರು ಸಹ ನನ್ನ ಅಭ್ಯರ್ಥಿ ಮಾಡಿದ್ದಾರೆ. ಈ ಚುನಾವಣೆ ಮುಂದೆ ರಾಜ್ಯಕ್ಕೆ ದಿಕ್ಸೂಚಿ. ಪಕ್ಷ ರಾಜ್ಯದಲ್ಲಿ ಬಲಿಷ್ಠವಾಗಿದೆ ಎನ್ಬುವುದನ್ನು ತೋರುತ್ತದೆ ಎಂದು ಟಿ.ಬಿ. ಜಯಂದ್ರ ತಿಳಿಸಿದರು.

ಶಿರಾದಲ್ಲಿ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಪರಮೇಶ್ವರ ನೇತೃತ್ವದಲ್ಲಿ ಎದುರಿಸುತ್ತೇವೆ.ಕಳೆದ 50 ವರ್ಷದಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ಕಳೆದ ಬಾರಿ ಸಚಿವನಾಗಿದ್ದಾಗ 2,500 ಕೋಟಿ ವೆಚ್ಚದ ಕಾಮಗಾರಿಯನ್ನು ಶಿರಾದಲ್ಲಿ ಮಾಡಿದ್ದೇನೆ. ನನ್ನದು ಅಭಿವೃದ್ಧಿ ಅಜೆಂಡಾ.‌ ರೈತರಿಗೆ ನೀರು, ಯುವಕರಿಗೆ ಉದ್ಯೋಗ ನನ್ನ ಸೂತ್ರಗಳು ಎಂದು ಜಯಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT