ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ 60 ಸ್ಥಾನ ಬರುವುದೂ ಕಷ್ಟ: ಎಂ.ಬಿ. ‍ಪಾಟೀಲ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ‍ಪಾಟೀಲ ಹೇಳಿಕೆ
Last Updated 19 ಆಗಸ್ಟ್ 2022, 11:21 IST
ಅಕ್ಷರ ಗಾತ್ರ

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದ ಬೇಸತ್ತು ಹೋಗಿರುವ ಜನರು ಬಿಜೆಪಿಯನ್ನು ತಿರಸ್ಕರಿಸಲು ಸಜ್ಜಾಗಿದ್ದಾರೆ. ಆದ್ದರಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 50ರಿಂದ 60 ಸ್ಥಾನ ಬರುವುದೂ ಕಷ್ಟವಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ ಎಂದು ಆ ಪಕ್ಷದ ನಾಯಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಈಗ ಏನಾಗಿದೆ. ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 480 ಇತ್ತು. ಈಗ ₹ 1100ಕ್ಕೆ ತಲುಪಿದೆ. ಪ್ರತಿ ವರ್ಷ ಎಂಟು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಭರವಸೆ ನೀಡಿದ್ದರು. ಕಳೆದ ಎಂಟು ವರ್ಷಗಳಿಂದ ಅವರೇ ಅಧಿಕಾರದಲ್ಲಿದ್ದಾರೆ. ಪ್ರತಿ ವರ್ಷ ಎರಡು ಕೋಟಿಯಂತೆ 16 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ’ ಎಂದು ಪ್ರಶ್ನಿಸಿದರು.

‘ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಮೂಲಕ ದೇಶದ ಆರ್ಥಿಕತೆಯನ್ನು ನಾಶ ಮಾಡಲಾಗಿದೆ. ಮೊಸರಿನ ಮೇಲೆಯೂ ಜಿಎಸ್ಟಿ ಸರ್ಕಾರ ವಿಧಿಸಿದ ಜನವಿರೋಧಿ ಸರ್ಕಾರವಿದು. ಶವಾಗಾರ ಬಳಕೆಯ ಮೇಲೂ ಶೇ 18.5ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಬದುಕಿದಾಗ ಜನರನ್ನು ನೆಮ್ಮದಿಯಿಂದ ಇರಲು ಬಿಡದ ಸರ್ಕಾರ ಅವರು ಸತ್ತ ಮೇಲೆಯೂ ಜಿಎಸ್ಟಿ ವಿಧಿಸುವ ಮೂಲಕ ಅಮಾನವೀಯತೆಯನ್ನು ಪ್ರದರ್ಶಿಸುತ್ತಿದೆ’ ಎಂದರು.

‘ಮೋದಿ ಅವರ ಅಚ್ಛೆ ದಿನ್ ಎಂಬುದನ್ನು ಕೇಳಿ ಜನರು ಗಾಬರಿಯಾಗುತ್ತಿದ್ದಾರೆ. ನಮಗೆ ಅಚ್ಛೆ ದಿನ ಬೇಡ. ಮೊದಲಿದ್ದ ಕೆಟ್ಟ ದಿನಗಳನ್ನು ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರವೂ ಹಳಿ ತಪ್ಪಿದೆ. ಸರ್ಕಾರವನ್ನು ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರೇ ಅಸಹಾಯಕರಾಗಿ ಹೇಳುತ್ತಿದ್ದಾರೆ’ ಎಂದು ಎಂ.ಬಿ. ಪಾಟೀಲ ಹರಿಹಾಯ್ದರು.

ಸಾಲದ ಪ್ರಮಾಣ ದುಪ್ಪಟ್ಟು: ಇಲ್ಲಿಯವರೆಗೆ ಆಳಿದ ಸರ್ಕಾರಗಳು ₹ 2.41 ಲಕ್ಷ ಕೋಟಿ ಸಾಲ ಮಾಡಿದ್ದವು. ಆ ದಾಖಲೆಗಳನ್ನೆಲ್ಲ ಮುರಿದ ರಾಜ್ಯ ಸರ್ಕಾರ ಹೊಸದಾಗಿ ಮತ್ತೆ ₹ 2.50 ಲಕ್ಷ ಕೋಟಿ ಸಾಲವನ್ನು ಮಾಡಿದೆ. ರಾಜ್ಯವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಈ ಸಾಲದ ಹಣದಲ್ಲಿ 40 ಪರ್ಸೆಂಟ್ ಕಮಿಷನ್ ಸಹ ಸೇರಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ. ಅಜಯ್ ಸಿಂಗ್, ಕನೀಜ್ ಫಾತಿಮಾ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

‘ಕಾಂಗ್ರೆಸ್‌ಗೆ 140 ಸ್ಥಾನ’

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಪಡೆದು ನಿಸ್ಸಂದೇಹವಾಗಿ ಅಧಿಕಾರಕ್ಕೆ ಬರಲಿದೆ. ಜನರು ಬಿಜೆಪಿ ಸರ್ಕಾರವನ್ನು ತಿರಸ್ಕರಿಸಲು ನಿರ್ಧರಿಸಿದ್ದಾರೆ. ಮುಂದಿನ ಚುನಾವಣೆ ಜಾತಿ, ಧರ್ಮದ ಮೇಲೆ ನಡೆಯುವುದಿಲ್ಲ. ಬದಲಾಗಿ, ಬಿಜೆಪಿಯ ದುರಾಡಳಿತವೇ ಪ್ರಮುಖ ಚರ್ಚೆಯ ವಿಷಯವಾಗಲಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

‘ಕಾಂಗ್ರೆಸ್ ಪಡೆಯಲಿರುವ ಸ್ಥಾನಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿಯೇ ರಾಜ್ಯದಾದ್ಯಂತ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಗೆಲುವಿನ ಸಂಖ್ಯೆ 150ನ್ನು ಮೀರಲೂಬಹುದು. ಕಾಂಗ್ರೆಸ್‌ನಲ್ಲಿ ಮುಂಚೆಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ರೂಢಿ ಇಲ್ಲ. ನಿಚ್ಚಳ ಬಹುಮತ ಪಡೆದ ಬಳಿಕ ಶಾಸಕಾಂಗ ಪಕ್ಷದ ಸಭೆ ಸೇರಿ ನಂತರ ನಾಯಕನನ್ನು ಆಯ್ಕೆ ಮಾಡಲಿದೆ. ಅದನ್ನು ಹೈಕಮಾಂಡ್‌ನೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು’ ಎಂದರು.

‘ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವು ವೈಯಕ್ತಿಕ ವಿಚಾರ. ವೀರಶೈವ, ಲಿಂಗಾಯತ ಹಾಗೂ ಪಂಚಪೀಠಗಳ ಮಠಾಧೀಶರು ಒಂದೆಡೆ ಸೇರಿ ಚರ್ಚೆ ನಡೆಸಲಿದ್ದಾರೆ. ಸದ್ಯಕ್ಕೆ ಆ ಬಗ್ಗೆ ಹೆಚ್ಚು ಚರ್ಚಿಸಲು ಹೋಗುವುದಿಲ್ಲ’ ಎಂದು ಹೇಳಿದರು.

****

ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಸೇರ್ಪಡೆ ಮಾಡಿರುವುದು ಕೇವಲ ಕಣ್ಣೊರೆಸುವ ತಂತ್ರವಷ್ಟೇ. ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ‌.

– ಎಂ.ಬಿ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT