ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಂಡು‌, ವಿದ್ಯುತ್ ದರ ಏರಿಸಲಿ: ಡಿ.ಕೆ ಶಿವಕುಮಾರ್

Last Updated 22 ಜನವರಿ 2022, 9:26 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ. ಜನರಿಗೆ ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಸೋಂಕು ಪ್ರಮಾಣ ಕಡಿಮೆ ಇದ್ದಾಗ ವಾರಾಂತ್ಯದ ಕರ್ಫ್ಯೂ ವಿಧಿಸಿದವರು, ಸೋಂಕು ಪ್ರಮಾಣ ಹೆಚ್ಚಾದಾಗ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ರೈತನಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ? ಏರಿಕೆಯಾಗಿರುವ ಕಬ್ಬಿಣ, ಸೀಮೆಂಟ್ ದರ ಕಡಿಮೆ ಮಾಡಲು ಯಾಕೆ ಕ್ರಮ ಕೈಗೊಳ್ಳಲಿಲ್ಲ. ಈಗ ವಿದ್ಯುತ್ ದರ ಬಾಕಿ ಕೊಡಬೇಕು ಎನ್ನುತ್ತಿದ್ದಾರೆ. ವಿದ್ಯುತ್ ಕಂಪನಿಗಳ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು’ ಎಂದರು.

ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಈ ಹಿಂದೆಯೇ ಇದು ಬಿಜೆಪಿ ಕರ್ಫ್ಯೂ ಎಂದು ಹೇಳಿದ್ದೆ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆಂದು. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು. ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ’ ಎಂದರು.

‘ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ’ ಎಂದು ಪ್ರಶ್ನಿಸಿದರು.

ಸದಸ್ಯತ್ವ ನೋಂದಣಿ ಅಭಿಯಾನ:ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಸಂಬಂಧ ಪಕ್ಷದ ವಿವಿಧ ಘಟಕಗಳ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು ಮತ್ತಿತರ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಡಿ.ಕೆ. ಶಿವಕುಮಾರ್ ಅವರು ಜೂಮ್ ಮೂಲಕ ವಿಡಿಯೊ ಸಂವಾದ ನಡೆಸಿದರು.

‘ನಾವು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಆನ್‌ಲೈನ್‌ ಸದಸ್ಯತ್ವ ಅವಕಾಶ ನೀಡಲಾಗಿದೆ. ಮಾರ್ಚ್‌ವರೆಗೂ ಈ ಅಭಿಯಾನ ನಡೆಯಲಿದೆ. ನಂತರವೂ ಸದಸ್ಯತ್ವ ನೀಡುತ್ತೇವೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಈ ಅಭಿಯಾನದ ಕಾಲವಧಿಯಲ್ಲಿಯೇ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಬೂತ್‌ಗೆ ಇಬ್ಬರು ಕಾರ್ಯಕರ್ತರ ನೇಮಕಕ್ಕೆ ಸೂಚಿಸಲಾಗಿದೆ. ಆನ್‌ಲೈನ್‌ ಸದಸ್ಯತ್ವ ಹೇಗೆ ಮಾಡಬೇಕು ಎಂಬ ಬಗ್ಗೆ ತರಬೇತಿ ನೀಡಲಾಗುತ್ತಿದೆ’ ಎಂದರು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ,ಎಐಸಿಸಿ ಸದಸ್ಯತ್ವ ನೋಂದಣಿ ಉಸ್ತುವಾರಿ ಕೆ. ರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಕೆಪಿಸಿಸಿ ಡಿಜಿಟಲ್ ಸದಸ್ಯತ್ವ ನೋಂದಣಿ ಸಂಚಾಲಕ ರಘುನಂದನ್ ರಾಮಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT