ಆರಗ ಜ್ಞಾನೇಂದ್ರ ರಾಜೀನಾಮೆಗೆ ಡಿಕೆಶಿ ಆಗ್ರಹ

ಬೆಂಗಳೂರು: ಬಿಡಿಎ ಅಭಿವೃದ್ಧಿಪಡಿಸಿದ ಆರ್‌ಎಂವಿ ಬಡಾವಣೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಬದಲಿ ನಿವೇಶನ ಪಡೆದಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ರಾಜಕೀಯ ಒತ್ತಡ ಇಲ್ಲದೇ ಯಾವುದೇ ಅಧಿಕಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಫಲಾನುಭವಿಗಳು ಮೊದಲು ನೈತಿಕ ಹೊಣೆ ಹೊರಬೇಕು. ಫಲಾನುಭವಿಗಳು, ಸರ್ಕಾರದ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವವರು ಮೊದಲು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಸ್ಯೆಯನ್ನು ದೊಡ್ಡದು ಮಾಡಿಕೊಳ್ಳುವ ಮುನ್ನ ಫಲಾನುಭವಿಗಳನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು.
‘ಬಿಜೆಪಿಯವರು ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಇರಿಸಿ ಗಲಾಟೆ ಸೃಷ್ಟಿಸಿ, ಸಮಾಜ ಒಡೆಯಲು ಮುಂದಾಗಿದ್ದಾರೆ. ವಿಘ್ನ ನಿವಾರಕನಿಗೂ ಸಾವರ್ಕರ್‌ಗೂ ಏನು ಸಂಬಂಧ? ರಾಜ್ಯದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಹೇಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೀಗೆಲ್ಲ ಮಾಡುತ್ತಿದೆ’ ಎಂದರು.
ಟ್ವಿಟರ್‌ನಲ್ಲೂ ವಾಗ್ದಾಳಿ: ಬಿಡಿಎ ಆಯುಕ್ತರ ವರ್ಗಾವಣೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿಯ ತುಣುಕನ್ನು ಕೆಪಿಸಿಸಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆರಗ ಜ್ಞಾನೇಂದ್ರ ಸೇರಿದಂತೆ ಅತಿಗಣ್ಯ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಅಕ್ರಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಿಡಿಎ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಗೃಹ ಸಚಿವರ ವಿರುದ್ಧ ಕ್ರಮವೇನು’ ಎಂದು ಪ್ರಶ್ನಿಸಿದೆ.
ಬಿಡಿಎ ಅಭಿವೃದ್ಧಿಯಲ್ಲಿ ಬೆಂಗಳೂರನ್ನು ‘ಜಾಗತಿಕ ನಗರ’ ಮಾಡಬೇಕಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ‘ಭ್ರಷ್ಟರ ಅಭಿವೃದ್ಧಿ ಪ್ರಾಧಿಕಾರ’ ಆಗಿದೆ ಎಂದು ಟೀಕಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.