ಮಂಗಳವಾರ, ಮಾರ್ಚ್ 2, 2021
23 °C

ಪಕ್ಷ ಬಿಟ್ಟವರನ್ನು ಕರೆತರಲು ಯತ್ನಿಸುತ್ತೇನೆ: ರಾಮಲಿಂಗಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಕೆಲವು ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದಾರೆ. ಅವರನ್ನೆಲ್ಲ ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇನೆ’ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದೇನೆ. ಬೆಂಗಳೂರಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ‘ ಎಂದರು.

‘ಕಾಂಗ್ರೆಸ್‌ ಪಕ್ಷದಲ್ಲಿದ್ದುಕೊಂಡು ಹಲವು ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದೇನೆ. ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗಲೇ ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದು ನೆನಪಿಸಿಕೊಂಡರು.

ಸೌಮ್ಯಾ ರೆಡ್ಡಿ ಯಾರ ಮೇಲೂ ಹಲ್ಲೆ ನಡೆಸಿಲ್ಲ: ‘ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ರೈತ ಪರ ಹೋರಾಟದ ವೇಳೆ ಶಾಸಕಿ ಸೌಮ್ಯಾ ರೆಡ್ಡಿ ಯಾರ ಮೇಲೂ ಹಲ್ಲೆ ನಡೆಸಿಲ್ಲ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.

‘ಪ್ರತಿಭಟನೆ ವೇಳೆ ಸೌಮ್ಯಾ ರೆಡ್ಡಿ ಮತ್ತು ಅಂಜಲಿ ನಿಂಬಾಳ್ಕರ್ ಇಬ್ಬರೂ ಕೆಳಗೆ ಬಿದ್ದು, ಗಾಯಗಳಾಗಿವೆ. ಅಂಜಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಳಗೆ ಬೀಳದೆ ಹೇಗೆ ಗಾಯ ಆಗಲು ಸಾಧ್ಯ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಆದರೂ, ಮುಖ್ಯಮಂತ್ರಿಯಾಗಲಿ ಮತ್ತು ಗೃಹ ಸಚಿವರಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

‘ಪ್ರತಿಭಟನೆ ಸಂದರ್ಭದಲ್ಲಿ ಸೌಮ್ಯಾ ರೆಡ್ಡಿ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಿ. ಬಿಜೆಪಿ ಮಹಿಳಾ ಮುಖಂಡರು ದೂರು ನೀಡಿದರು ಎಂದು ಪ್ರಕರಣ ದಾಖಲಿಸಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಎಚ್.ಎಂ. ರೇವಣ್ಣ, ಯು.ಬಿ. ವೆಂಕಟೇಶ್, ಪಿ.ಆರ್. ರಮೇಶ್, ಗಂಗಾಂಬಿಕೆ ಮಲ್ಲಿಕಾರ್ಜುನ್,  ಕೆ.ಎಂ.ನಾಗರಾಜ್, ಮಲ್ಲಿಕಾರ್ಜುನ, ಜಿ. ಕೃಷ್ಣಪ್ಪ ಕಾರ್ಯಕ್ರಮದಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು