ಸೋಮವಾರ, ಆಗಸ್ಟ್ 8, 2022
22 °C
ಸಂಪುಟ ಸಭೆಗೆ ಪ್ರಾಸಿಕ್ಯೂಷನ್ ಅನುಮತಿ ವಿಚಾರ

ಕೆಪಿಎಸ್‌ಸಿ 2011ರ ಅಕ್ರಮ ನೇಮಕಾತಿ: ಅಧ್ಯಕ್ಷ, ಸದಸ್ಯರಿಗೆ ಕ್ಲೀನ್ ಚಿಟ್‌?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಂದಿನ ಅಧ್ಯಕ್ಷ ಮತ್ತು 9 ಸದಸ್ಯರಿಗೆ ಕ್ಲೀನ್ ಚಿಟ್‌ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಇದೀಗ, ಅಕ್ರಮ ಪ್ರಕರಣವನ್ನು ಕೈ ಬಿಡುವ ಮೂಲಕ, ಈ ಸಾಲಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ದಾರಿಗಳನ್ನು ಕಂಡುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ, ಸಾಕ್ಷ್ಯಾಧಾರಗಳ ಸಹಿತ ಸಾವಿರಾರು ಪುಟಗಳ ಕರಡು ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ 19(1) ಸೆಕ್ಷನ್ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973ರ ಸೆಕ್ಷನ್197ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕೇ, ಬೇಡವೇ ಎಂಬ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಅವರ ಸೂಚನೆಯಂತೆ ಸಚಿವ ಸಂಪುಟ ಸಭೆಗೆ ಡಿಪಿಎಆರ್ ಟಿಪ್ಪಣಿ ಸಿದ್ಧಪಡಿಸಿದೆ. ಸಿಐಡಿತನಿಖೆಯ ಅಂಶಗಳನ್ನು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದ್ದು, ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿರುವ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ವಿಚಾರಣೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯವಿದೆ. ಈ ಕುರಿತು ಸೂಕ್ತ ಕ್ರಮವಹಿಸಬೇಕು ಎಂದೂ ಟಿಪ್ಪಣಿಯಲ್ಲಿದೆ.

‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಪ್ರಸ್ತಾವವನ್ನು ಸಚಿವ ಸಂ‍ಪುಟ ಕೈಬಿಟ್ಟರೆ, ಇಡೀ ಪ್ರಕರಣವನ್ನೇ ಕೈ ಬಿಟ್ಟಂತೆ. ಅಕ್ರಮ ಆರೋಪಗಳನ್ನು ಕೈ ಬಿಟ್ಟ ಬಳಿಕ, ಆ ಸಾಲಿನ ಆಯ್ಕೆ ಪಟ್ಟಿ ರದ್ದುಪಡಿಸಿದ ತೀರ್ಮಾನದ ಬಗ್ಗೆ ಮರುಪರಿಶೀಲಿಸಲು ಸರ್ಕಾರಕ್ಕೆ ಅವಕಾಶವಾಗಲಿದೆ’ ಎಂದು ಡಿಪಿಎಆರ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಸಾಲಿನಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ನೀಡುವ ಕುರಿತಂತೆ ಸಚಿವ ಸಂಪುಟ ಉಪ ಸಮಿತಿ ರಚಿಸಲು ಕಡತ ಸಿದ್ಧವಾಗಿದ್ದು, ಅದಕ್ಕೆ ಮುಖ್ಯಮಂತ್ರಿಯ ಅನುಮೋದನೆ ಬಾಕಿ ಇದೆ’ ಎಂದಿದ್ದಾರೆ.

ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಸಕ್ಷಮ ಪ್ರಾಧಿಕಾರ ರಾಷ್ಟ್ರಪತಿಯಾಗಿದ್ದು, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಅವರೇ ನಿರ್ಣಯ ಕೈಗೊಳ್ಳ ಬೇಕು. ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಕಳುಹಿ ಸಬೇಕು. ಡಿಒಪಿಟಿ ಅದನ್ನು ರಾಷ್ಟ್ರಪತಿ ಮುಂದೆ ಮಂಡಿಸುವುದು ನಿಯಮ. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿ ರಾಷ್ಟ್ರಪತಿಗೆ ರಾಜ್ಯ ಸರ್ಕಾರ ಪತ್ರ ಬರೆಯಬಹುದು ಎಂದು ಈಗಾಗಲೇ ಅಡ್ವೊಕೇಟ್‌ ಜನರಲ್‌ (ಎ.ಜಿ) ಅಭಿಪ್ರಾಯ ನೀಡಿದ್ದಾರೆ’ ಎಂದೂ ಹೇಳಿದ್ದಾರೆ.

ಕೆಪಿಎಸ್‌ಸಿ 2014ರ ಮಾರ್ಚ್ 21ರಂದು 362 ಹುದ್ದೆಗಳ ನೇಮಕಾತಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಸಾಬೀತಾಗಿದ್ದರಿಂದ ನೇಮಕಾತಿ ಅಧಿಸೂಚನೆಯನ್ನು ಸರ್ಕಾರ 2014ರ ಆ. 14ರಂದು ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ಪರಿಗಣಿಸಿ, ಕೆಎಟಿ 2016ರ ಅ. 19ರಂದು ಸರ್ಕಾರದ ಆದೇಶವನ್ನು ವಜಾಗೊಳಿಸಿ, ಆಯ್ಕೆಯಾದವರನ್ನು ನೇಮಕಾತಿ ಮಾಡಿಕೊಳ್ಳುವಂತೆ ಆದೇಶಿಸಿತ್ತು.

ಮತ್ತೆ ಮುನ್ನೆಲೆಗೆ ಅಕ್ರಮ ಸಕ್ರಮ 

ಇದನ್ನು ಪ್ರಶ್ನಿಸಿ ಹುದ್ದೆ ವಂಚಿದ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2017ರ ಮಾರ್ಚ್ 9ರಂದು ನೇಮಕಾತಿ ರದ್ದುಪಡಿಸಿತ್ತು. ಅಲ್ಲದೆ, ಎಲ್ಲ ಮಧ್ಯಂತರ ಅರ್ಜಿಗಳನ್ನು 2019ರ ಜುಲೈ 13ರಂದು ವಜಾಗೊಳಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಅಗಸ್ಟ್‌ 9ರಂದು ವಜಾಗೊಳಿಸಿತ್ತು. ಆದರೆ, ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ– ಆಡಳಿತ ಪಕ್ಷದ ಸದಸ್ಯರು, ‘ಅಧಿಸೂಚನೆ ರದ್ದತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ತನ್ನ ವರದಿಯಲ್ಲಿ ಪ್ರಕಟಿಸಿ, ಆ ವರದಿಯನ್ನು ಡಿಪಿಎಆರ್‌ ಸದನದಲ್ಲಿ ಮಂಡಿಸಬೇಕಿತ್ತು. ಈ ವಿಷಯದಲ್ಲಿ ಕೆಪಿಎಸ್‌ಸಿ ರೀತಿ–ರಿವಾಜು ಪಾಲಿಸಿಲ್ಲ (ಸಂವಿಧಾನದ ಅನುಚ್ಛೇದ 323 (2) ಉಲ್ಲಂಘನೆ)’ ಎಂದು ಆರೋಪಿಸಿದ್ದರು. ಹೀಗಾಗಿ, ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸುವ ವಿಷಯ ಮುನ್ನಲೆಗೆ ಬಂದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು