ಗುರುವಾರ , ಜನವರಿ 20, 2022
15 °C
ಕೆಪಿಎಸ್‌ಸಿ ‘ಭದ್ರತೆ’ಯಲ್ಲಿ ಉತ್ತರಪತ್ರಿಕೆ!

ಗೆಜೆಟೆಡ್‌ ಪ್ರೊಬೇಷನರಿ: 8 ತಿಂಗಳು ಕಳೆದರೂ ನಡೆಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಗ್ರೂಪ್ ‘ಎ’ ಮತ್ತು ‘ಬಿ’) 106 ಹುದ್ದೆಗಳ ನೇಮಕಾತಿಗೆ ಮುಖ್ಯಪರೀಕ್ಷೆ ಬರೆದ 2,120 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಭದ್ರತಾ ಕೊಠಡಿಯಲ್ಲೇ ಬಿದ್ದಿವೆ!

ಪೂರ್ವಭಾವಿ ಪ‍ರೀಕ್ಷೆಯಲ್ಲಿ 1:20 ಅನುಪಾತದಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಮುಖ್ಯಪರೀಕ್ಷೆ ಬರೆದಿದ್ದರು. ಮುಖ್ಯಪರೀಕ್ಷೆಯ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ನಡೆಯಬೇಕಿದೆ. ಅದಕ್ಕೂ ಮೊದಲು ಈ ಉತ್ತರ ಪತ್ರಿಕೆಗಳನ್ನು ಡಿ–ಕೋಡಿಂಗ್‌ ಮಾಡಿ ಸ್ಕ್ಯಾನಿಂಗ್‌ ಮಾಡಬೇಕಿದೆ. ಆದರೆ, ಎಂಟು ತಿಂಗಳು ಕಳೆದರೂ ಈ ಪ್ರಕ್ರಿಯೆ ನಡೆದಿಲ್ಲ. ಮುಖ್ಯಪರೀಕ್ಷೆಯ ಬಳಿಕ 1:3 ಅನುಪಾತದಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ನಡೆಯಬೇಕಿದೆ.

ಡಿಜಿಟಲ್‌ ಮೌಲ್ಯಮಾಪನ ವಿಳಂಬಕ್ಕೆ ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಆಯೋಗದ ನಡುವಿನ ಶೀತಲ ಸಮರವೇ ಕಾರಣ. ಆಯೋಗದ ಸಭೆಯಲ್ಲಿ ಮೌಲ್ಯಮಾಪನ ವಿಳಂಬದ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರೂ, ನಾನಾ ಕಾರಣ ನೀಡಿವಿಳಂಬ ಮಾಡಲಾಗುತ್ತಿದೆ ಎಂಬುದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳ ಆರೋಪ.

ಆಯೋಗದ ಕೆಲವು ಸದಸ್ಯರು ಡಿಜಿಟಲ್ ಮೌಲ್ಯ ಮಾಪನದ ಬದಲು ಮ್ಯಾನ್ಯುವಲ್‌ (ವ್ಯಕ್ತಿಗಳಿಂದ) ಮೌಲ್ಯಮಾಪನ ನಡೆಸಲು ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಹೋಟಾ ಸಮಿತಿಯ ಶಿಫಾರಸಿನಂತೆ ಡಿಜಿಟಲ್ ಮೌಲ್ಯಮಾಪನ ಕ್ರಮ ಅಳವಡಿಸಿಕೊಂಡು 2014 ಮತ್ತು 2015 ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಮೌಲ್ಯಮಾಪನ‌ ನಡೆಸಲಾಗಿದೆ. ಹೀಗಾಗಿ, ಅದೇ ಪದ್ಧತಿಯನ್ನು ಮುಂದುವರಿಸಲು ಕೆಪಿಎಸ್‌ಸಿ ಈಗಾಗಲೇ ನಿರ್ಧರಿಸಿದೆ.

ಈ‌ ಮಧ್ಯೆ, 2015ನೇ ಸಾಲಿನ ಮುಖ್ಯಪರೀಕ್ಷೆಯ ಡಿಜಿಟಲ್ ಮೌಲ್ಯಮಾಪನ ಪದ್ಧತಿಯ ಬಳಿಕ ಪ್ರಕಟಿಸಿದ ಫಲಿತಾಂಶದಲ್ಲಿ ಅಕ್ರಮ ನಡೆದಿದ್ದು, ಅಂಕಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಆ ಸಾಲಿನಲ್ಲಿ ಹುದ್ದೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಮೆಟ್ಟಿಲೇರಿದ್ದಾರೆ. ಮೌಲ್ಯಮಾಪನದಲ್ಲಿನ ಲೋಪಗಳ ಬಗ್ಗೆ ಕೆಎಟಿ ಎತ್ತಿದ ಪ್ರಶ್ನೆಗಳಿಗೆ ಕೆಪಿಎಸ್‌ಸಿ ಪ್ರಮಾಣಪತ್ರ ಸಲ್ಲಿಸಬೇಕಿದೆ.

ಈ ಮಧ್ಯೆ, ಡಿಜಿಟಲ್‌ ಮೌಲ್ಯಮಾಪನದ ಹೊರಗುತ್ತಿಗೆಯನ್ನು ನೀಡಲಾಗಿದ್ದ ಟಾಟಾ ಕನ್ಸಲ್ಟನ್ಸಿ ಸರ್ವಿಸ್ (ಟಿಸಿಎಸ್‌) ಜೊತೆ ಮಾಡಿ
ಕೊಂಡಿದ್ದ ಒಪ್ಪಂದದಿಂದ ಕೆಪಿಎಸ್‌ಸಿ ಹಿಂದೆ ಸರಿದಿದೆ. ಅಲ್ಲದೆ, ಸರ್ಕಾರಿ ಸ್ವಾಮ್ಯದ ಎನ್ಐಸಿ (ನ್ಯಾಷನಲ್‌ ಇನ್‌ಫಾರ್ಮಟಿಕ್‌ ಸೆಂಟರ್‌) ಮೂಲಕ ಹೊಸ ತಂತ್ರಾಂಶವನ್ನು ಕೆಪಿಎಸ್‌ಸಿ ಅಭಿವೃದ್ಧಿಪಡಿಸಿದೆ. ಅದರ ಮೂಲಕ ಮುಖ್ಯಪರೀಕ್ಷೆಯ ಡಿಜಿಟಲ್‌ ಮೌಲ್ಯ ಮಾಪನ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ.

20 ತಿಂಗಳು ಕಳೆಯಿತು

106 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ 2020ರ ಜ. 31ರಂದು ಅಧಿಸೂಚನೆ ಹೊರಡಿಸಿತ್ತು. ಹುದ್ದೆಗೆ 1,65,250 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆಗಸ್ಟ್‌ನಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಯನ್ನು ಕೋವಿಡ್‌ ದೃಢಪಟ್ಟಿದ್ದ 45 ಅಭ್ಯರ್ಥಿಗಳು ಸೇರಿ 83,716 (ಶೇ 50.5) ಮಂದಿ ಬರೆದಿದ್ದರು. ಒಂದುವರ್ಷದ ಬಳಿಕ ಇದೇ ಫೆ. 13ರಿಂದ 16ರವರೆಗೆ ಮುಖ್ಯಪರೀಕ್ಷೆ ನಡೆದಿತ್ತು. 20 ತಿಂಗಳು ಕಳೆದರೂ ನೇಮಕಾತಿ ಅಂತಿಮ ಘಟ್ಟ ತಲುಪದಿರುವುದು ಅಭ್ಯರ್ಥಿಗಳ ಹತಾಶೆಗೆ ಕಾರಣವಾಗಿದೆ.‌

‘ನಿರ್ದಿಷ್ಟ ಸಮಯ ಹೇಳಲು ಸಾಧ್ಯ ಇಲ್ಲ’

‘ಮೌಲ್ಯಮಾಪನ ವಿಳಂಬಕ್ಕೆ ಕಾರ್ಯದರ್ಶಿ–ಆಯೋಗದ ಮಧ್ಯೆ ಶೀತಲ ಸಮರ ಕಾರಣ ಎಂಬ ಆರೋಪ ಶುದ್ಧ ಸುಳ್ಳು. ಕೋವಿಡ್‌, ಪೂರ್ಣಾವಧಿಗೆ ಪರೀಕ್ಷಾ ನಿಯಂತ್ರಕರೊಬ್ಬರು ಇಲ್ಲದಿರುವುದು, ಡಿಜಿಟಲ್‌ ಮೌಲ್ಯಮಾಪನಕ್ಕೆ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ್ದರಿಂದ ಪ್ರಕ್ರಿಯೆ ವಿಳಂಬವಾಗಿದೆ. ಎಷ್ಟು ಸಮಯದೊಳಗೆ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಬಹುದೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯ ಇಲ್ಲ’ ಎಂದು ಕೆ‍ಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದರು.

‘2015ರ ಸಾಲಿನ ಮುಖ್ಯ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದ ಬಗ್ಗೆ ಆರೋಪ, ಪ್ರಕರಣ ಕೋರ್ಟ್‌ನಲ್ಲಿ ಇರುವ ಕಾರಣಕ್ಕೆ ನಮ್ಮದೇ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದೇವೆ. ಈಗಾಗಲೇ ಅದರ ಮೂಲಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹುದ್ದೆಯ ಮೌಲ್ಯಮಾಪನ ನಡೆಸಿ, ಫಲಿತಾಂಶವನ್ನೂ ನೀಡಿದ್ದೇವೆ. ರಾಜ್ಯ ಲೆಕ್ಕ ಪರಿಶೋಧಕ (ಎಸ್‌ಎಡಿ) ಹುದ್ದೆಗೆ ನೇಮಕಾತಿಯ ಡಿಜಿಟಲ್‌ ಮೌಲ್ಯಮಾಪನದ ಬಳಿಕ ಗೆಜೆಟೆಡ್‌ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ನಡೆಸಲಾಗುವುದು’ ಎಂದೂ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು