ಬುಧವಾರ, ಮಾರ್ಚ್ 3, 2021
19 °C
ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

ಎಫ್‌ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ| ಕೆಪಿಎಸ್‌ಸಿ ನೌಕರ ಸಿಸಿಬಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ ಬಾಗಲಕೋಟೆ: ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಪ್ರಮುಖ ಆರೋಪಿ ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರಮೇಶ್ ಅಲಿಯಾಸ್ ರಾಮಪ್ಪ ಹೆರಕಲ್‌ ಎಂಬಾತನನ್ನು ಜಮಖಂಡಿಯಲ್ಲಿ  ವಶಕ್ಕೆ ಪಡೆದಿದ್ದಾರೆ.

ಬೀಳಗಿ ತಾಲ್ಲೂಕಿನ ಬೂದಿಹಾಳ ಎಸ್‌.ಎಚ್ ಗ್ರಾಮದವನಾದ  ರಮೇಶ್‌, ಕೆಪಿಎಸ್‌ಸಿ ಬೆಂಗಳೂರು  ಕಚೇರಿಯ ಗೌಪ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.

ಶನಿವಾರ ರಾತ್ರಿಯೇ ಬಾಗಲಕೋಟೆ ಜಿಲ್ಲಾ ಪೊಲೀಸರು ಆತನನ್ನು ವಶಕ್ಕೆ ಪಡೆದು, ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ‘ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.

₹ 24 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ

‘ಪ್ರಶ್ನೆಪತ್ರಿಕೆ ಕಳವು ಮಾಡಿ ಜೆರಾಕ್ಸ್ ಮಾಡಿಸಿದ್ದ ರಮೇಶ್, ಅದನ್ನೇ ಬೆಂಗಳೂರಿನಲ್ಲಿರುವ ಐವರು ಅಭ್ಯರ್ಥಿಗಳಿಗೆ ₹ 24 ಲಕ್ಷಕ್ಕೆ ಮಾರಾಟ ಮಾಡಿದ್ದ. ಎರಡು ದಿನಗಳ ಹಿಂದಷ್ಟೇ ತನ್ನೂರಿಗೆ ಹೋಗಿದ್ದ ರಮೇಶ್, ಜೊತೆಯಲ್ಲೇ ಪ್ರಶ್ನೆಪತ್ರಿಕೆಗಳನ್ನೂ ತಂದಿದ್ದ. ಅವುಗಳನ್ನು ಸ್ಥಳೀಯ ಕೆಲ ಅಭ್ಯರ್ಥಿಗಳಿಗೆ ತಲಾ ₹ 12 ಲಕ್ಷಕ್ಕೆ ಮಾರಾಟ ಮಾಡಲು ಸಿದ್ಧತೆ ಮಾಡಿ
ಕೊಂಡಿದ್ದ. ಅಷ್ಟರಲ್ಲೇ ಸೆರೆಸಿಕ್ಕಿದ್ದಾನೆ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

‘ತಾಯಿಯ ತವರು ಮನೆಯಾದ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಆರೋಪಿ ಶನಿವಾರ ರಾತ್ರಿ ಉಳಿದುಕೊಂಡಿದ್ದ. ಅಲ್ಲಿಯೇ ಆತನನ್ನು ವಶಕ್ಕೆ ಪಡೆಯಲಾಗಿದೆ‘ ಎಂದು  ಬಾಗಲಕೋಟೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ರಾಮಪ್ಪ ಅವರಿಂದಲೇ ವಾಣಿಜ್ಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ಜಿ.ಎಸ್. ಚಂದ್ರು ಹಾಗೂ ಸಹಚರರು, ಪ್ರಶ್ನೆ ಪತ್ರಿಕೆ ಪಡೆದಿದ್ದರು ಎಂದೂ ಹೇಳಲಾಗಿದೆ.

ಬಂಧಿತರ ಸಂಖ್ಯೆ 14ಕ್ಕೆ

ಚಂದ್ರು ಮನೆ ಮೇಲೆ ಶನಿವಾರ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಭೇದಿಸಿದ್ದರು. ಚಂದ್ರು, ರಾಚಪ್ಪ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.

ಬಂಧಿತರು ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ್ದ ಪೊಲೀಸರು, ಭಾನುವಾರ ಮತ್ತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಆ ಮೂಲಕ ಬಂಧಿತರ ಸಂಖ್ಯೆ 14ಕ್ಕೆ ಏರಿದೆ. ಆರೋಪಿಗಳಿಂದ ₹ 35 ಲಕ್ಷ ಹಾಗೂ 4 ವಾಹನಗಳನ್ನು ಜಪ್ತಿ ಮಾಡಲಾಗಿದೆ.

13 ಅಭ್ಯರ್ಥಿಗಳು

‘ಬಂಧಿತರ ಪೈಕಿ ಚಂದ್ರು ಮಾತ್ರ ಸರ್ಕಾರಿ ನೌಕರ. ಉಳಿದ 13 ಮಂದಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆರೋಪಿಯಿಂದ ಬೆಂಗಳೂರು, ದೊಡ್ಡಬಳ್ಳಾಪುರ, ಬೆಳಗಾವಿ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಯ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಖರೀದಿಸಿದ್ದರು. ಪ್ರತಿಯೊಬ್ಬರು ₹ 10 ಲಕ್ಷ ನೀಡಲು ಒಪ್ಪಿ, ಮುಂಗಡ ಹಣ ಕೊಟ್ಟಿದ್ದರು. ಕೆಲವರು ಪರೀಕ್ಷೆ ಮುಗಿದ ಮೇಲೆ ಹಣ ಕೊಡುವುದಾಗಿ ಹೇಳಿದ್ದರು. ಪರಿಚಿತರನ್ನು ಮಧ್ಯವರ್ತಿಗಳಾಗಿ ಮಾಡಿಕೊಂಡೇ ಚಂದ್ರು, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಟ್ಟಿದ್ದ. ಈ ಬಗ್ಗೆ ಅಭ್ಯರ್ಥಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಮೊಬೈಲ್ ಬಳಕೆ ನಿಷೇಧ

‘ಆರೋಪಿ ಚಂದ್ರು, ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಲ್ಲಾಳದ ಉಪಕಾರ್ ಲೇಔಟ್‌ನ ಆರ್‌.ಆರ್. ರೆಸಿಡೆನ್ಸಿ ಅ‍ಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿರುವ ತನ್ನ ಮನೆಗೆ ಅಭ್ಯರ್ಥಿಗಳನ್ನು ಕರೆಸಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಸುತ್ತಿದ್ದ. ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಕ್ಕ ನಂತರ, ಫೋಟೊ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಡುವ ಭಯವೂ ಆತನಿಗೆ ಇತ್ತು. ಅದೇ ಕಾರಣಕ್ಕೆ ಆತ, ಮನೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

ಎಸ್‌ಡಿಎ ಆಗಿ ಆಯ್ಕೆಯಾಗಿದ್ದ ರಾಚಪ್ಪ

‘ಬಂಧಿತ ರಾಚಪ್ಪ, ಬೆಳಗಾವಿ ಜಿಲ್ಲೆ ನಿವಾಸಿ. ಕಳೆದ ವರ್ಷ ನಡೆದಿದ್ದ ಎಸ್‌ಡಿಎ ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದ. ಅದರ ಬದಲು ಎಫ್‌ಡಿಎ ಆಗಬೇಕೆಂದು ಆಸೆಪಟ್ಟು, ಆರೋಪಿ ಚಂದ್ರು ಜೊತೆ ಕೈ ಜೋಡಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

ಎಫ್‌ಐಆರ್‌ ದಾಖಲು

ಅಪರಾಧ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆ ಅಸಲಿಯೆಂದು ಬಳಸಿದ ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿಗಳಾದ ಚಂದ್ರು, ರಾಚಪ್ಪ, ಮಹೇಶ್ ಹಾಗೂ ಇತರರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ದಾಖಲಾಗಿದೆ.

ಸೇವೆಯಿಂದಲೇ ವಜಾ: ಎಚ್ಚರಿಕೆ

ಶಿವಮೊಗ್ಗ: ಎಫ್‍ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಇದು ಅಕ್ಷಮ್ಯಅಪರಾಧ. ಪರೀಕ್ಷಾ ಅಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿ ಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಅಗತ್ಯ ಬಿದ್ದರೆ ತಪ್ಪಿ ತಸ್ಥರನ್ನು ಸೇವೆಯಿಂದ ವಜಾ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಇಲ್ಲಿ ಹೇಳಿದರು.

ಅನ್ಯರ ಹೆಸರಿನಲ್ಲಿ ಸಿಮ್‌ಕಾರ್ಡ್, ನಕಲಿ ಖಾತೆ ಸೃಷ್ಟಿ

‘ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಹಲವು ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆರೋಪಿ ಚಂದ್ರು, ಎಲ್ಲ ಅಭ್ಯರ್ಥಿಗಳನ್ನು ತನ್ನ ಮನೆಯಲ್ಲೇ ಸೇರಿಸಿದ್ದ. ಮನೆಯಲ್ಲೇ ಪ್ರಶ್ನೆಪತ್ರಿಕೆ ನೀಡಿ, ಉತ್ತರಗಳನ್ನು ಹೇಳಿಕೊಡುತ್ತಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಅನ್ಯ ವ್ಯಕ್ತಿಗಳ ಹೆಸರಿನ ದಾಖಲೆಗಳನ್ನು ಬಳಸಿಕೊಂಡಿದ್ದ ಆರೋಪಿ, ಅವರ ಹೆಸರಿನಲ್ಲೇ ಪ್ರತ್ಯೇಕ ಸಿಮ್‌ ಕಾರ್ಡ್ ಖರೀದಿಸಿದ್ದ. ಜೊತೆಗೆ, ಫೇಸ್‌ಬುಕ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನೂ ತೆರೆದಿದ್ದ. ಅದರ ಮೂಲಕವೇ ಅಭ್ಯರ್ಥಿಗಳ ಸಂಪರ್ಕ ಮಾಡುತ್ತಿದ್ದ’ ಎಂದೂ ಮೂಲಗಳು ತಿಳಿಸಿವೆ.

ಮಫ್ತಿಯಲ್ಲಿ ಕಾರ್ಯಾಚರಣೆ: ಬೈಕ್‌ ಹಿಂಬಾಲಿಸಿ ಅಪಘಾತದ ಕಥೆ

ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸಿಕ್ಕ ಸಣ್ಣ ಸುಳಿವು ಆಧರಿಸಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಅಪಘಾತದ ಕಥೆ ಹೆಣೆದು ಜಾಲ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಪ್ರಭಾವಿಯೂ ಆಗಿರುವ ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್ ಚಂದ್ರು, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾನೆ. ಆತನ ಮನೆಯಲ್ಲೇ ಪ್ರಶ್ನೆಪತ್ರಿಕೆಗಳಿವೆ ಎಂಬ ಮಾಹಿತಿ ಬಂದಿತ್ತು. ತುರ್ತಾಗಿ ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ಆರಂಭಿಸಲಾಯಿತು. ಚಂದ್ರು ಯಾರೆಂಬುದು ತಿಳಿಯಿತು. ಆದರೆ, ಆತನ ಮನೆ ಎಲ್ಲಿದೆ ಎಂಬ ಮಾಹಿತಿ ಇರಲಿಲ್ಲ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಮೈಸೂರು ರಸ್ತೆಯಲ್ಲಿ ಬೈಕ್‌ನಲ್ಲಿ ಚಂದ್ರು ಹೊರಟಿದ್ದ ಮಾಹಿತಿ ಲಭ್ಯವಾಯಿತು. ಮಫ್ತಿಯಲ್ಲಿ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ, ಆತನನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಉಪಕಾರ್ ಲೇಔಟ್‌ ಪ್ರವೇಶಿದ್ದ ಆತ, ಆರ್‌.ಆರ್‌. ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ ಸಮುಚ್ಚಯ ಬಳಿ ಬೈಕ್ ನಿಲ್ಲಿಸಿ ಮನೆಯೊಂದಕ್ಕೆ ಹೋಗಿದ್ದ’

’ಅದೇ ಮನೆಗೆ ಹೋಗಿ ಪೊಲೀಸ್ ಸಿಬ್ಬಂದಿ ಬಾಗಿಲು ಬಡಿದಿದ್ದರು. ಬಾಗಿಲು ತೆರೆದಿದ್ದ ಆರೋಪಿಯ ತಾಯಿ, ‘ನೀವು ಯಾರು?’ ಎಂದು ಕೇಳಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ತೋರಿಸಿದ್ದ ಸಿಬ್ಬಂದಿ, ‘ಈ ಬೈಕ್ ಯಾರದ್ದು?. ಇದರ ಸವಾರ, ನಮ್ಮ ವಾಹನಕ್ಕೆ ಬೈಕ್ ಗುದ್ದಿಸಿ ಅಪಘಾತ ಮಾಡಿ ಬಂದಿದ್ದಾನೆ. ವಾಹನ ಜಖಂಗೊಂಡಿದೆ. ಆತನನ್ನು ಹೊರಗೆ ಕರೆಯಿರಿ. ಅಪಘಾತದ ಬಗ್ಗೆ ಮಾತನಾಡಬೇಕು’ ಎಂದಿದ್ದರು. ಅದಕ್ಕೆ ಒಪ್ಪದ ತಾಯಿ, ‘ಆತ ಬರುವುದಿಲ್ಲ. ಬೇಕಾದರೆ, ನಾನೇ ಹಣ ಕೊಡುತ್ತೇನೆ. ನಿಮ್ಮ ವಾಹನ ದುರಸ್ತಿ ಮಾಡಿಸಿಕೊಳ್ಳಿ’ ಎಂದು ಹೇಳಿ ಬಾಗಿಲು ಹಾಕಿಕೊಳ್ಳಲು ಯತ್ನಿಸಿದ್ದರು’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.

‘ಅಪಘಾತ ಮಾಡಿದ್ದು ತಪ್ಪು. ನಮಗೆ ಹಣ ಬೇಡ. ಸವಾರನನ್ನು ಹೊರಗೆ ಕರೆಯಿರಿ. ಇಲ್ಲದಿದ್ದರೆ, ನಾವೇ ಮನೆಯೊಳಗೆ ಬರುತ್ತೇವೆ’ ಎಂದು ಸಿಬ್ಬಂದಿ ಹೇಳಿದ್ದರು. ಅದಕ್ಕೂ ಒಪ್ಪದ ತಾಯಿ, ವಾದ ಮುಂದುವರಿಸಿದ್ದರು. ಆಗ ಅನಿವಾರ್ಯವಾಗಿ ಮನೆಯೊಳಗೆ ನುಗ್ಗಿದ್ದ ಪೊಲೀಸ್ ಸಿಬ್ಬಂದಿ, ನೇರವಾಗಿ ಆರೋಪಿ ಚಂದ್ರು ಕೊಠಡಿಗೆ ಹೋಗಿದ್ದರು. ಅಲ್ಲಿಯೇ ಪ್ರಶ್ನೆಪತ್ರಿಕೆ ಸಮೇತ ಚಂದ್ರು. ರಾಚಪ್ಪ ಹಾಗೂ ಇತರೆ ನಾಲ್ವರು ಅಭ್ಯರ್ಥಿಗಳು ಸಿಕ್ಕಿಬಿದ್ದರು’ ಎಂದೂ ಮೂಲಗಳು ಹೇಳಿವೆ.

***

ಪ್ರಕರಣದ ಹಿಂದೆ ಇರುವವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಸುರಕ್ಷತೆ ಇದ್ದರೂ ಹೇಗೆ ಸೋರಿಕೆಯಾಯಿತು ಎನ್ನುವುದು ಮಹತ್ವದ ಪ್ರಶ್ನೆ

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಸಿಸಿಬಿಯವರ ಮನವಿಯಂತೆ ದ್ವಿತೀಯ ದರ್ಜೆ ಸಹಾಯಕ ರಮೇಶ್‌ ಬಗ್ಗೆ ಮಾಹಿತಿ ನೀಡಿದ್ದೇವೆ. ಆತ ಎಫ್‌ಡಿಎ ಹುದ್ದೆ ಆಕಾಂಕ್ಷಿಯಾಗಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ

- ಜಿ. ಸತ್ಯವತಿ, ಕೆಪಿಎಸ್‌ಸಿ ಕಾರ್ಯದರ್ಶಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು