ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂದು ಸಾಯಿ ನಮಗೇನಂತೆ?: ಗೋಮಾಂಸ ಹೇಳಿಕೆಗೆ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು

Last Updated 11 ಜನವರಿ 2021, 13:35 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದ ಶೇ 90 ರಷ್ಟು ಜನರು ಗೋಹತ್ಯೆ ನಿಷೇಧ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನಾನು ಗೋಮಾಂಸ ತಿಂತೇನೆ ಎಂದು ಹೇಳುತ್ತಾರೆ. ತಿಂದು ಸಾಯಿ ನಮಗೇನಂತೆ’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಗೋಮಾಂಸ ತಿನ್ನುತ್ತೇನೆ. ಹನುಮ ಜಯಂತಿ ದಿನ ನಾಟಿಕೋಳಿ ತಿನ್ನುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕಾಂಗ್ರೆಸ್ಸಿಗರು ಇದನ್ನು ಖಂಡಿಸುವುದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದೆ ಎಂದರು.

ಮುದಿ ಹಸುವನ್ನು ಬಿಜೆಪಿ ಮನೆಯವರ ಮುಂದೆ ಬಿಡ್ತಾರಂತೆ. ಇವರ ತಾಯಿಗೆ ವಯಸ್ಸಾದಾಗ ಹೀಗೆ ಮಾತಾಡ್ತಾರ. ನಿಮ್ಮ ತಾಯಿಯೂ ನಮಗೆ ತಾಯಿ ಸಮಾನ. ಹೆಣ್ಣನ್ನು ತಾಯಿ ಎಂದು ಕರೆಯುವ ದೇಶ ಭಾರತ ಮಾತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಪಾಕಿಸ್ತಾನ ಜಿಂದಾಬಾದ್‌ ಎಂದು ಮತ್ತೊಮ್ಮೆ ಕೂಗಿದರೆ, ಭಾರತ ಮಾತಾಕಿ ಜೈ ಎನ್ನುವ ನಮ್ಮ ಯುವಕರು ನಿಮ್ಮ ನಾಲಿಗೆ ಕಿತ್ತುಕೊಳ್ಳುತ್ತಾರೆ. ಇದರರ್ಥ ಕಾನೂನನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರ್ಥವಲ್ಲ. ಕಾನೂನಿನ ಮೂಲಕ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ.

2023ಕ್ಕೆ ನಾನೇ ಮುಖ್ಯಮಂತ್ರಿ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಸ್ವಯಂಘೋಷಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು ಖಂಡಿಸಿದವರಿಗೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳತನ ನಡೆಯುತ್ತಿದೆ. ಇದಕ್ಕಾಗಿ ಅನೇಕ ಯುವಕರ ಕೊಲೆ ಆಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್‌ ಸರ್ಕಾರವನ್ನು ಆಗ್ರಹಿಸಿದ್ದೆ. ಅದಕ್ಕೆ ಉತ್ತರಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾನು ಕೋಮುವಾದಿಗಳನ್ನು ಸದೆಬಡೆಯುತ್ತೇವೆ’ ಎಂದು ಹೇಳಿದ್ದರು. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ, ಗೋಮಾತೆಯ ಶಾಪದಿಂದ ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡರು. ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸೋತರು. ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿದರು.

ಎಲ್ಲ ಮುಸ್ಲಿಂರು ದೇಶ ದ್ರೋಹಿಗಳಲ್ಲ. ಕಾಂಗ್ರೆಸ್ಸಿಗರು ಅವರನ್ನು ದೇಶದ್ರೋಹಿಗಳನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್‌, ಹಿಂದೂಗಳ ಸಹೋದರರಂತೆ ಬಾಳಿ ಬದುಕಬೇಕು ಎನ್ನುವುದನ್ನು ಕಾರ್ಯಗತ ಮಾಡುತ್ತಿರುವುದು ನರೇಂದ್ರ ಮೋದಿ ಅವರು. ನಮ್ಮ ಗ್ರಾಮಗಳಲ್ಲಿರುವ ಮುಸ್ಲಿಂ, ಕ್ರಿಶ್ಚಿಯನ್‌ರನ್ನು ಪ್ರೀತಿಯಿಂದ ಮಾತನಾಡಿಸಿ ಎಂದು ಸಲಹೆ ನೀಡಿದರು.

ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಹಾರುತ್ತಿದೆ. ಅದನ್ನು ತೆಗೆಯಿರಿ ಎಂದು ಆಗಿನ ಕಾಂಗ್ರೆಸ್‌ ಪ್ರಧಾನಿಯನ್ನು ಕೇಳಿದರೆ, ವಿಶ್ವ ಸಂಸ್ಥೆಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದರು. ಪಾಕಿಸ್ತಾನ ಧ್ವಜವನ್ನು ತೆಗೆದು ಭಾರತದ ಧ್ವಜವನ್ನು ಹಾರಿಸಿದರೆ ₹10 ಕೊಡುತ್ತೇವೆ ಎಂದು ಗೋಡೆಮೇಲೆ ಬರೆದು ಸವಾಲು ಹಾಕಲಾಗಿತ್ತು. ಭಾರತ ಮಾತೆಯ ಮಕ್ಕಳು ಷಂಡರೇ. ಅವತ್ತೇ ನಿರ್ಧಾರ ಮಾಡಲಾಗಿತ್ತು. ಮುರಳಿಮನೋಹರ್‌ ಜೋಷಿ, ನರೇಂದ್ರ ಮೋದಿ ನೇತೃತ್ವದಲ್ಲಿ ಕೇಸರ ವಾಹಿನಿ ಯುವಕರಿಗೆ ಕರೆಕೊಟ್ಟರು. ಎಲ್ಲರ ಹೃದಯದಲ್ಲಿ ಭಾರತ ಮಾತಾಕಿ ಜೈ ಎನ್ನುವುದನ್ನು ಬಿಟ್ಟರೆ ನಮ್ಮಲ್ಲಿ ಬೇರೇನೂ ಇರಲಿಲ್ಲ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಭಾರತದ ಧ್ವಜ ಹಾರಿಸಿ, ಭಾರತ ಮಾತೆ ಬಂಜೆಯಲ್ಲ. ನಾವು ಷಂಡರಲ್ಲಿ ಎನ್ನುವುದನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ನಿರೂಪಿಸಿದೆವು ಎಂದು ತಿಳಿಸಿದರು.

ನಳಿನ್‌ಕುಮಾರ್ ಕಟೀಲ್‌ ಅಧ್ಯಕ್ಷರಾದಾಗ, ತುಂಗಭದ್ರ ನದಿಯನ್ನೇ ದಾಟಿಲ್ಲ. ಅವರೇನು ಸಂಘಟನೆ ಮಾಡುತ್ತಾರೆ ಎಂದು ಟೀಕಿಸಲಾಗುತ್ತಿತ್ತು. ಇವತ್ತು ಬಿಜೆಪಿಯ ಸಂಘಟನೆ ಎಷ್ಟಾಗಿದೆ ಎಂದರೆ, ಪ್ರತಿ ರಾತ್ರಿ ಸಿದ್ದರಾಮಯ್ಯ ಕನಸಿನಲ್ಲಿ ನಳಿನ್‌ಕುಮಾರ್ ಅವರೇ ಬರುತ್ತಾರೆ ಎಂದು ಲೇವಡಿ ಮಾಡಿದರು.

ಮಥುರಾದಲ್ಲಿ ಶ್ರೀಕೃಷ್ಣ ಮಂದಿರವನ್ನೂ ಕಟ್ಟುತ್ತೇವೆ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹೊರಟಿದ್ದೇವೆ. ಸಿದ್ದರಾಮಯ್ಯ, ಶಿವಕುಮಾರ್‌ ತಾಕತ್ತಿದ್ದರೆ ನಾವು ಅಲ್ಲಿಯೇ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಹೇಳಿ ಜನರ ಬಳಿಗೆ ಹೋಗಿ ಎಂದು ಸವಾಲು ಹಾಕಿದರು.

ಇಂದು ರಾಮಮಂದಿರ ಕಟ್ಟುತ್ತೇವೆ. ಮುಂದೆ ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ಕಟ್ಟುತ್ತೇವೆ. ರಸ್ತೆ, ಚರಂಡಿ ನಿರ್ಮಾಣ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅದನ್ನೂ ಮಾಡಿಯೇ ಮಾಡುತ್ತೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT