ಭಾನುವಾರ, ಆಗಸ್ಟ್ 14, 2022
20 °C

ರಾಜ್ಯದ ಜನರಿಗೆ ಆದ ತೊಂದರೆಗೆ ಕೋಡಿಹಳ್ಳಿ ಚಂದ್ರಶೇಖರ್ ಕಾರಣ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯದ ಪ್ರಯಾಣಿಕರಿಗೆ ನಾಲ್ಕು ದಿನಗಳು ಆದ ತೊಂದರೆಗೆ ಸಮಾಜ ಘಾತುಕ ಶಕ್ತಿ ಕೋಡಿಹಳ್ಳಿ ಚಂದ್ರಶೇಖರ್ ಕಾರಣ . ಇಂಥವರ ಬಗ್ಗೆ ಕೆಎಸ್ಆರ್‌ಟಿಸಿ ನೌಕರರು ಜಾಗ್ರತೆ ವಹಿಸಬೇಕು ಎಂದು ಗ್ರಾಮಿಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ರಾಜ್ಯದ ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದಿಂದ ರಾಜ್ಯದ ಜನರು ಸಂಕಷ್ಟ ಅನುಭವಿಸಿದ್ದಾರೆ. ಸಂಧಾನದ ನಂತರ ಸರ್ಕಾರ 10 ಬೇಡಿಕೆಗಳಲ್ಲಿ 8 ಈಡೇರಿಸುವ ಭರವಸೆ ನೀಡಿದೆ. ಅದಕ್ಕೆ ನೌಕರರು ಒಪ್ಪಿಕೊಂಡು ಮುಷ್ಕರ ಹಿಂಪಡೆಯುವುದಾಗಿ ತಿಳಿಸಿದ್ದರು. ಆದರೆ, ಕೋಡಿಹಳ್ಳಿ ಚಂದ್ರಶೇಖರ್‌ ಹುಳಿ ಹಿಂಡಿದ್ದಾರೆ. ಸಾರಿಗೆ ನಿಗಮದ ಉದ್ಯೋಗಿಗಳು ಹಾಗೂ ರಾಜ್ಯದ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.

ಮುಷ್ಕರದಲ್ಲಿ ಕೋಡಿಹಳ್ಳಿ ಪ್ರವೇಶ ಪಡೆದ ಕಾರಣ ಸಾರಿಗೆ ನಿಗಮದ ನೌಕರರ ಸಂಘಟನೆಗಳಲ್ಲಿ ಒಡಕು ಮೂಡಿದೆ. ಅವರು ಪ್ರತಿಭಟನಾ ನಿರತರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ 50ಕ್ಕೂ ಹೆಚ್ಚು ನಿಗಮಗಳಿವೆ. ನೇಮಕಾತಿ ಸಮಯದಲ್ಲೇ ಸರ್ಕಾರಿ ನೌಕರರಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿರುತ್ತದೆ. ಅದಕ್ಕೆ ಒಪ್ಪಿಯೇ ಅವರು ಕೆಲಸಕ್ಕೆ ಸೇರಿರುತ್ತಾರೆ. ಕೆಎಸ್‌ಆರ್‌ಟಿಸಿ ನೌಕರರ ಬೇಡಿಕೆಗೆ ಮಣಿದರೆ ಇತರೆ ನಿಗಮದ ನೌಕರರೂ ಅದೇ ರೀತಿ ಬೇಡಿಕೆ ಇಡುತ್ತಾರೆ. ಎಲ್ಲರನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ ಜನರ ತೆರಿಗೆ ಸಾಲುವುದಿಲ್ಲ ಎಂದರು.

ಕೆಲವರು ಹಣ ಬಳಸಿಕೊಂಡು ಗ್ರಾಮ ಪಂಚಾಯಿತಿ ಚುನಾವಣೆ ನಡೆಸುತ್ತಿದ್ದಾರೆ. ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಮತದಾನದ ಮೂಲಕವೇ ಆಯ್ಕೆ ನಡೆಯಬೇಕು. ಹಣ, ತೋಳ್ಬಲದಿಂದ ಅಲ್ಲ ಎಂದು ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಿರೀಶ್ ಪಟೇಲ್, ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಕೆ.ವಿ.ಅಣ್ಣಪ್ಪ, ನಾಗರಾಜ್, ಎನ್.ಕೆ.ಜಗದೀಶ್‌ ಇದ್ದರು.

ಶಿವಮೊಗ್ಗ ಸಭೆಯ ನಂತರ ಹೊಸ ತಿರುವುದು?
ಶಿವಮೊಗ್ಗದ ಪೆಸಿಟ್‌ ಕಾಲೇಜು ಸಭಾಂಗಣದಲ್ಲಿ ಜ.2 ಮತ್ತು 3ರಂದು ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಯಲಿದೆ. ಸಭೆಯ ನಂತರ ರಾಜ್ಯ ರಾಜಕೀಯ ಹೊಸ ತಿರುವು ಪಡೆಯಲಿದೆ ಎಂದು ಈಶ್ವರಪ್ಪ ಹೇಳಿದರು.

ಸಭೆಯಲ್ಲಿ ಆಯ್ದ 150 ಪ್ರಮುಖ ಮುಖಂಡರು ಭಾಗವಹಿಸುವರು.  ಯಾರು ಭಾಗವಹಿಸುವರು ಎನ್ನುವುದನ್ನು ರಾಜ್ಯದ ನಾಯಕರೇ ನಿರ್ಧರಿಸುವರು. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಭೆ ಸೇರುವುದು ನಾಯಕತ್ವದ ಬದಲಾವಣೆಯ ಕುರಿತು ಅಲ್ಲ. ಪ್ರಗತಿ ತಕ್ಕಂತೆ ಕಾರ್ಯಕರ್ತರಿಗೆ ಹೆಚ್ಚಿನ ಬಲ ನೀಡಲು ಎಂದು ಪ್ರತಿಕ್ರಿಯಿಸಿದರು.

ಮುಗ್ಧ ಮುಸ್ಲಿಮರಿಗೆ ರಕ್ಷಣೆ: ಈಶ್ವರಪ್ಪ
ಮುಸ್ಲಿಂ ಸಮುದಾಯದ ಮುಗ್ಧ, ಅಮಾಯಕರಿಗೆ ರಕ್ಷಣೆ ನೀಡಲಾಗುವುದು. ಹಲ್ಲೆ ನಡೆಸುವ ಗೂಂಡಾಗಳನ್ನು ಶಿಕ್ಷಿಸಲಾಗುವುದು ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದರು.

ಶಿವಮೊಗ್ಗದಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಬದುಕುತ್ತಿದ್ದೇವೆ. ಆದರೆ, ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದರೆ ಸಹಿಸಲಾಗದು. ಮುನ್ನಚ್ಚರಿಕೆಯ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು