ಮಂಗಳವಾರ, ಮೇ 17, 2022
24 °C
ತಂತ್ರಜ್ಞಾನ ಬಳಕೆ ಮೂಲಕ ಹಣ, ಸಮಯ, ಉಳಿಸಲು ಹೊಸ ಹೆಜ್ಜೆ: ಅಲೋಕ್‌ ಕುಮಾರ್‌

ಕೆಎಸ್‌ಆರ್‌ಪಿ: ವರ್ಗಾವಣೆ, ಬಡ್ತಿಗೆ ಆನ್‌ಲೈನ್‌ ವ್ಯವಸ್ಥೆ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯಲ್ಲಿ (ಕೆಎಸ್‌ಆರ್‌ಪಿ) ವರ್ಗಾವಣೆ, ಬಡ್ತಿ, ನಿಯೋಜನೆ‌ ಮುಂತಾದ ಕೆಲಸಗಳಿಗೆ ಸಿಬ್ಬಂದಿ ಇನ್ನು ಮುಂದೆ ಬೆಂಗಳೂರಿಗೆ ಅಲೆಯಬೇಕಿಲ್ಲ. ಇಲಾಖೆಯಿಂದ ಆನ್‌ಲೈನ್‌ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಹರು 24 ಗಂಟೆಗಳಲ್ಲೇ ವರ್ಗಾವಣೆ, ಬಡ್ತಿ ಆದೇಶ ಪಡೆಯಬಹುದು.

‘ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಆಧುನಿಕ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸುವುದು ಇದರ ಉದ್ದೇಶ. ದಕ್ಷಿಣ ಕರ್ನಾಟಕ ಭಾಗದ ಸಿಬ್ಬಂದಿ ಬೆಂಗಳೂರಿಗೆ ಬರುವುದು ಕಷ್ಟವಲ್ಲ. ಆದರೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಂದ ಬೆಂಗಳೂರಿಗೆ ಅಲೆಯುವುದು ಕಷ್ಟ. ಸಿಬ್ಬಂದಿಯ ಸಮಯ, ಹಣ, ಶ್ರಮ ವ್ಯರ್ಥವಾಗುವುದನ್ನು ತಪ್ಪಿಸುವುದು ಇದರ ಉದ್ದೇಶ’ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ 45 ಮಂದಿ ಹೀಗೇ ವರ್ಗಾವಣೆ ಪಡೆದಿದ್ದಾರೆ. ಕೆಲವರಿಗೆ 3 ತಾಸಿನೊಳಗೆ ವರ್ಗಾವಣೆ ಆದೇಶ ನೀಡಿದ್ದೂ ಇದೆ. ನನ್ನ ಜೊತೆ ಸಂದರ್ಶನದಲ್ಲಿ ಹಿರಿಯ ಅಧಿಕಾರಿಗಳೂ ಇರುತ್ತಾರೆ. ಸಿಬ್ಬಂದಿ ವರ್ಗಾವಣೆ ಕೋರಿಕೆಗೆ ನೀಡಿದ ಕಾರಣಗಳ ಬಗ್ಗೆ ಸಂದೇಹವಿದ್ದರೆ ಅವರ ಮುಖ್ಯಸ್ಥರಿಂದ ಮಾಹಿತಿ ಪಡೆಯುವೆ. ಕಾರಣ ಸರಿ ಇದೆ ಎಂದರೆ, ವರ್ಗಾವಣೆ ಸಿಗಲಿದೆ’ ಎಂದರು.

‘ಮಾರ್ಚ್‌ ತಿಂಗಳಲ್ಲಿ ಕಲಬುರ್ಗಿ ಹಾಗೂ ಬೀದರ್‌ ಸಿಬ್ಬಂದಿಗೆ ಇದೇ ಬಗೆಯ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ. ಒಂದು ವೇಳೆ ಆನ್‌ಲೈನ್‌ನಲ್ಲಿ ಸಮರ್ಪಕ ಅನ್ನಿಸದವರು ಖುದ್ದಾಗಿ ಬೆಂಗಳೂರಿಗೆ ಬರಬಹುದು’ ಎಂದರು.

‘ಕೆಎಸ್‌ಆರ್‌ಪಿಯೂ ಸಮರ್ಥವಾಗಿದೆ’
‘ಕೆಎಸ್‌ಆರ್‌ಪಿ ಸೇರಿದವರಲ್ಲಿ ಶೇ 25 ಸಿಬ್ಬಂದಿ ಪ್ರತಿ ವರ್ಷ ಸಿವಿಲ್‌ ವಿಭಾಗಕ್ಕೆ ಹೋಗುತ್ತಾರೆ. ಅಲ್ಲಿ ಅವಕಾಶ ಸಿಗದಿದ್ದರೆ ಮಾತ್ರ ಇಲ್ಲಿ ಉಳಿಯುತ್ತಾರೆ. ಈ ಪ್ರವೃತ್ತಿ ಸರಿಯಲ್ಲ. ಕೆಎಸ್‌ಆರ್‌ಪಿ ಕೂಡ ಅತ್ಯಂತ ಸಮರ್ಥ ಪೊಲೀಸ್‌ ವ್ಯವಸ್ಥೆ ಆಗಿದೆ’ ಎನ್ನುತ್ತಾರೆ ಆಲೋಕ್‌ ಕುಮಾರ್‌.‌

‘ಸಿವಿಲ್‌ ವಿಭಾಗದಲ್ಲಿ ಬಡ್ತಿಗೆ ಕನಿಷ್ಠ 10 ವರ್ಷ ಕಾಯಬೇಕು. ಆದರೆ, ಕೆಎಸ್‌ಆರ್‌ಪಿಯಲ್ಲಿ 5 ವರ್ಷ ಸಾಕು. ಆರಂಭದಲ್ಲೇ ₹ 35 ಸಾವಿರ ಸಂಬಳ, ಸುಸಜ್ಜಿತ ಮನೆ, ಆರೋಗ್ಯ ವಿಮೆ, ಕ್ಯಾಂಟೀನ್‌, ಮಕ್ಕಳಿಗೆ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌, ವಿವಿಧ ಭತ್ಯೆ ಸೇರಿ ಕಾನ್‌ಸ್ಟೆಬಲ್‌ ಸಂಬಳವೇ ₹ 60ರಿಂದ ₹ 75 ಸಾವಿರ ದಾಟುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು