ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್‌

ದಾವಣಗೆರೆ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ, ಮೈಸೂರು, ಶಿವಮೊಗ್ಗಕ್ಕೆ ಬರಲಿವೆ ಇ–ಬಸ್
Last Updated 21 ಜನವರಿ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾತ್ರ ಇರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಕೆಲವೇ ದಿನಗಳಲ್ಲಿ ಅಕ್ಕ–ಪಕ್ಕದ ನಗರಗಳಿಗೂ ವಿಸ್ತರಣೆ ಆಗುವ ಕಾಲ ಹತ್ತಿರವಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಕೆಎಸ್‌ಆರ್‌ಟಿಸಿಗೆ ಮೊದಲ ಎಲೆಕ್ಟ್ರಿಕ್ ಬರಲಿದೆ.

ಗುತ್ತಿಗೆ (ಜಿಸಿಸಿ) ಆಧಾರದಲ್ಲಿ 50 ಬಸ್‌ಗಳನ್ನು ಪಡೆಯುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್‌ನ ಇವಿ ಟ್ರಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಕೆಎಸ್‌ಆರ್‌ಟಿಸಿ ಕಾರ್ಯಾದೇಶ ನೀಡಲಾಗಿದೆ.

‘ಬಹುತೇಕ ಏಪ್ರಿಲ್‌ನಲ್ಲಿ ಮೊದಲ ಎಲೆಕ್ಟ್ರಿಕ್ ಬಸ್ ಬರಲಿದೆ. ಅದರ ಕಾರ್ಯಕ್ಷಮತೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದರೆ ಮುಂದಿನ ಮೂರು ತಿಂಗಳಲ್ಲಿ ಉಳಿದ ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಲಿವೆ’ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಸ್‌ಗಳ ನಿರ್ವಹಣೆ, ಚಾರ್ಜಿಂಗ್ ವ್ಯವಸ್ಥೆ ಎಲ್ಲವನ್ನೂ ಗುತ್ತಿಗೆ ಪಡೆದಿರುವ ಕಂಪನಿಯೇ ನೋಡಿಕೊಳ್ಳಲಿದೆ. ಚಾಲಕರನ್ನು ಅದೇ ಕಂಪನಿ ಒದಗಿಸಲಿದ್ದು, ಕೆಎಸ್‌ಆರ್‌ಟಿಸಿಯಿಂದ ನಿರ್ವಾಹಕರನ್ನು ನಿಯೋಜಿಸಲಾಗುವುದು. ಪ್ರತಿ ಕಿಲೋ ಮೀಟರ್‌ಗೆ ₹55 ಮೊತ್ತವನ್ನು ಕಂಪನಿಗೆ ಕೆಎಸ್‌ಆರ್‌ಟಿಸಿ ಪಾವತಿಸಲಿದೆ’ ಎಂದು ಹೇಳಿದರು.

ದಿನಕ್ಕೆ ಕನಿಷ್ಠ 450 ಕಿಲೋ ಮೀಟರ್ ಸಂಚರಿಸಲು ವ್ಯವಸ್ಥೆಯನ್ನು ನಿಗಮ ಮಾಡಿಕೊಡಬೇಕಾಗುತ್ತದೆ. ಅಂದರೆ ದಿನಕ್ಕೆ ₹24,750 ಮೊತ್ತ ಪಾವತಿಸಬೇಕಾಗುತ್ತದೆ. ದಿನಕ್ಕೆ ನಿಗದಿತ ದೂರ ಸಂಚರಿಸದಿದ್ದರೂ, ಅಷ್ಟೊ ಮೊತ್ತ ಪಾವತಿಸಬೇಕಾಗುತ್ತದೆ. 450 ಕಿಲೋ ಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಿದರೆ ಕಿಲೋ ಮೀಟರ್‌ಗೆ ₹55 ರಂತೆ ಹೆಚ್ಚುವರಿ ಮೊತ್ತ ನೀಡಬೇಕಾಗುತ್ತದೆ.

ಆದ್ದರಿಂದ ಕನಿಷ್ಠ 450 ಕಿಲೋ ಮೀಟರ್ ಕ್ರಮಿಸಬಹುದಾದ ಮಾರ್ಗಗಳನ್ನೇ ಕೆಎಸ್‌ಆರ್‌ಟಿಸಿ ಗುರುತು ಮಾಡಿಕೊಂಡಿದೆ. ಬೆಂಗಳೂರಿನಿಂದ ದಾವಣಗೆರೆ, ಮಡಿಕೇರಿ, ಮೈಸೂರು, ವಿರಾಜಪೇಟೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿಗೆ ಹೋಗಿ ಬರಲು ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಂಡಿದೆ.

‘ಈ ಎಲೆಕ್ಟ್ರಿಕ್ ಬಸ್‌ಗಳು 43 ಸೀಟುಗಳನ್ನು ಹೊಂದಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇರಲಿದೆ. ಕೆಎಸ್‌ಆರ್‌ಟಿಸಿಯಲ್ಲಿ ಸದ್ಯ ಇರುವ ಡೀಸೆಲ್ ಹವಾನಿಯಂತ್ರಿತ ಬಸ್‌ಗಳಲ್ಲಿನ ಪ್ರಯಾಣ ದರವನ್ನೇ ಎಲೆಕ್ಟ್ರಿಕ್ ಬಸ್‌ಗಳಿಗೂ ನಿಗದಿ ಮಾಡುವ ಸಾಧ್ಯತೆ ಇದೆ. ಡೀಸೆಲ್ ವೋಲ್ವೊ ಬಸ್‌ ಪ್ರತಿ ಕಿಲೋ ಮೀಟರ್‌ ಕ್ರಮಿಸಲು ಸದ್ಯ ₹56 ವೆಚ್ಚ ತಗುಲುತ್ತಿದೆ’ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದರು.

ಅಂಕಿ–ಅಂಶ
50-ಕೆಎಸ್‌ಆರ್‌ಟಿಸಿಗೆ ಬರಲಿರುವ ಇ–ಬಸ್‌ಗಳ ಸಂಖ್ಯೆ

₹55- ಪ್ರತಿ ಕಿಲೋ ಮೀಟರ್‌ಗೆ ತಗುಲುವ ವೆಚ್ಚ

450 ಕಿ.ಮೀ-ದಿನಕ್ಕೆ ಕ್ರಮಿಸಬೇಕಾದ ಕನಿಷ್ಠ ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT