ಶನಿವಾರ, ಸೆಪ್ಟೆಂಬರ್ 18, 2021
21 °C
ಉಪಮುಖ್ಯಮಂತ್ರಿ ಸ್ಥಾನ ನೀಡಲು ಕುರುಬ ಸಮುದಾಯದ ಸ್ವಾಮೀಜಿಗಳ ಒತ್ತಾಯ

‘ಈಶ್ವರಪ್ಪಗೆ ಗೌರವ ಸ್ಥಾನ ಬೇಡುವ ಸ್ಥಿತಿ ಬರಬಾರದಿತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಗೌರವಯುತ ಸ್ಥಾನಮಾನವನ್ನು ಬೇಡಿ ಪಡೆಯಬೇಕಾದ ಸ್ಥಿತಿ ಬರಬಾರದಿತ್ತು ಎಂದು ಕುರುಬ(ಹಾಲು ಮತ) ಸಮಾಜದ ಸ್ವಾಮೀಜಿಗಳು ಪ್ರತಿಪಾದಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರಂತೆ ಈಶ್ವರಪ್ಪ ಕೂಡ ಪಕ್ಷ ಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಅವಕಾಶವನ್ನು ಪಕ್ಷ ನೀಡಿತು. ಈಶ್ವರಪ್ಪ ಅವರಿಗೆ ಒಮ್ಮೆಯಾದರೂ ಈ ರೀತಿಯ ಅವಕಾಶ ನೀಡಬೇಕಿತ್ತು’ ಎಂದು ಮಕಣಾಪುರ ಅಮೋಘಶಿದ್ದೇಶ್ವರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯಡಿಯೂರಪ್ಪ ಅವರಿಗೆ 75 ವರ್ಷ ದಾಟಿದರೂ ಅವಕಾಶ ನೀಡಲಾಗಿತ್ತು. ಅವರಿಗೆ ಇನ್ನೂ ಎರಡು ವರ್ಷ ಅವಕಾಶ ನೀಡಬೇಕಿತ್ತು ಎಂಬುದು ನಮ್ಮ ಸಮುದಾಯದ ಆಶಯವೂ ಆಗಿತ್ತು. ವಯಸ್ಸಿನ ಕಾರಣಕ್ಕೆ ಅವರ ಬದಲಾವಣೆ ಆಗುವುದಾದರೆ, ಈಶ್ವರಪ್ಪ ಅವರಿಗೇ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂದು ಭಾವಿಸಿದ್ದೆವು. ಆದರೆ, ಬಸವರಾಜ ಬೊಮ್ಮಾಯಿ ಅವರಿಗೆ ಆ ಸ್ಥಾನ ಸಿಕ್ಕಿದೆ. ಈಗ ಈಶ್ವರಪ್ಪ ಅವರಿಗೆ ಗೌರವದ ಸ್ಥಾನ ಎಂದರೆ ಉಪಮುಖ್ಯಮಂತ್ರಿ ಸ್ಥಾನ. ಈ ಸ್ಥಾನವನ್ನು ನಾವು ಬೇಡುವ ಅಥವಾ ಹಕ್ಕು ಮಂಡಿಸುವ ಸ್ಥಿತಿ ಬರಬಾರದಿತ್ತು. ಪಕ್ಷವೇ ಗುರುತಿಸಿ ನೀಡಬೇಕಿತ್ತು’ ಎಂದರು.

ಅಥಣಿಯ ಅಮರೇಶ್ವರ ಸ್ವಾಮೀಜಿ ಮಾತನಾಡಿ, ‘ಬಿಜೆಪಿ ಹೆಸರಿಲ್ಲದ ಸಂದರ್ಭದಿಂದ ಈ ತನಕ ಪಕ್ಷ ಕಟ್ಟಲು ಈಶ್ವರಪ್ಪ ದುಡಿದಿದ್ದಾರೆ. ಅವರನ್ನು ಪಕ್ಷ ಗಣಿಸಬಾರದು. ಬಿಜೆಪಿ ನಿಯಮಗಳ ಪ್ರಕಾರವೇ ನೋಡಿದರೂ ಅಧಿಕಾರ ನಡೆಸಲು ಈಶ್ವರಪ್ಪ ಅವರಿಗೆ ಇನ್ನೂ ಎರಡು ವರ್ಷ ವಯಸ್ಸಿದೆ. ಉಪಮುಖ್ಯಮಂತ್ರಿ ಸ್ಥಾನ ನೀಡಲೇಬೇಕು’ ಎಂದು ಒತ್ತಾಯಿಸಿದರು.

‘ಮಠಾಧೀಶರು ರಾಜಕೀಯಕ್ಕೆ ತಲೆಹಾಕಬಾರದು ಎಂಬುದು ಸತ್ಯ. ಆದರೆ, ಬೇರೆಲ್ಲಾ ಸಮುದಾಯಗಳು ಹೋರಾಡಿ ಅಧಿಕಾರ ಪಡೆಯುತ್ತಿರುವಾಗ ನಾವು ಮಠದೊಳಗೆ ಕುಳಿತರೆ ಇಡೀ ಸಮುದಾಯಕ್ಕೆ ಅನ್ಯಾಯವಾಗಲಿದೆ. ಎಲ್ಲವನ್ನೂ ಕೇಳಿಯೇ ಪಡೆಯಬೇಕಿರುವ ಸಂದರ್ಭ ಬಂದಿರುವುದರಿಂದ ನಾವೂ ಬೀದಿಗೆ ಬಂದಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು