ಬುಧವಾರ, ಜೂನ್ 29, 2022
26 °C
ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಮೀನಮೇಷ

ಕುವೆಂಪು ವಿಶ್ವವಿದ್ಯಾಲಯ: ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳ ಪದವಿ ಕನಸು ಭಗ್ನ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2019–20ನೇ ಸಾಲಿನ ಪರೀಕ್ಷೆಗಳನ್ನು ನಡೆಸಲು ಮೀನಮೇಷ ಎಣಿಸುತ್ತಿರುವ ಪರಿಣಾಮ 17 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಕೋವಿಡ್‌ ಕಾರಣಕ್ಕೆ 2020ರಲ್ಲಿ ಮುಂದೂಡಲಾಗಿದ್ದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಎರಡು ವರ್ಷಗಳು ಕಳೆದರೂ ನಡೆಸಲು ವಿಶ್ವವಿದ್ಯಾಲಯ ಸಿದ್ಧತೆಗಳನ್ನೇ ಮಾಡಿಕೊಂಡಿಲ್ಲ. ಕೋವಿಡ್‌ ಲಾಕ್‌ಡೌನ್ ತೆರವಿನ ನಂತರ ಒಂದು ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸದೇ ಎಲ್ಲ ವಿದ್ಯಾರ್ಥಿಗಳನ್ನೂ ತೇರ್ಗಡೆಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ವಿಶ್ವವಿದ್ಯಾಲಯದ ಈ ನಿರ್ಧಾರವನ್ನು ಸಿಂಡಿಕೇಟ್‌ ಸದಸ್ಯರು, ಪ್ರಾಧ್ಯಾಪಕರ ಒಕ್ಕೂಟದವರು ವಿರೋಧಿಸಿದ್ದರು.

ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು  ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದರ ಮೂಲಕ ಫಲಿತಾಂಶ ಪ್ರಕಟಿಸಬೇಕು ಎಂದು 2021ರ ನವೆಂಬರ್‌ನಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಸೆಮಿಸ್ಟರ್‌ ಬದಲು ಕ್ಯಾರಿ ಓವರ್ ಪದ್ಧತಿ ಜಾರಿಗೆ ತಂದು ಎಲ್ಲ ವಿದ್ಯಾರ್ಥಿಗಳಿಗೂ ಎರಡನೇ ಹಾಗೂ ಮೂರನೇ ವರ್ಷದ ತರಗತಿಗಳಿಗೆ ಪ್ರವೇಶ ನೀಡಬೇಕು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತಕ್ಷಣ ಪರೀಕ್ಷೆ ನಡೆಸಿ ಪದವಿ ಪ್ರದಾನ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಸಿಂಡಿಕೇಟ್‌ ನಿರ್ಣಯದಂತೆ ಜ.3ರಿಂದ 19ರ ವರೆಗೆ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು.ಸಮಯ ನೀಡದೆ ತರಾತುರಿಯಲ್ಲಿ ಪರೀಕ್ಷೆಗಳ ದಿನಾಂಕ ಪ್ರಕಟಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ನಂತರ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಕನಿಷ್ಠ 20 ದಿನವಾದರೂ ಪರೀಕ್ಷೆ ಮುಂದೂಡುವ ಭರವಸೆ ನೀಡಲಾಗಿತ್ತು. ಭರವಸೆಯಂತೆ ಪರೀಕ್ಷೆ ಮುಂದೂಡಿದರೂ ಇದುವರೆಗೂ ವೇಳಾಪಟ್ಟಿ ಪ್ರಕಟಿಸಿಲ್ಲ.

ಈ ಮಧ್ಯೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದರೂ, ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ನಡೆಸುವ ಕುರಿತು ವಿಶೇಷ ಸಿಂಡಿಕೇಟ್‌ ಸಭೆ ಕರೆದಿದೆ. ಇದು ಅನುಮಾನಗಳಿಗೆ ಕಾರಣವಾಗಿದೆ.

‘ಕೋವಿಡ್‌ ನಂತರ ದೂರ ಶಿಕ್ಷಣದ ಎಂ.ಲಿಬ್‌, ಬಿ.ಲಿಬ್‌, ಎಂಬಿಎ ಸೇರಿ ಇತರೆ ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶ ಪ್ರಕಟಿಸಲಾಗಿದೆ. ಉಳಿದ ವಿಷಯಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡಿದರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಅಲ್ಲಿ ಅನುತ್ತೀರ್ಣರಾದವರು ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ. ಹಾಗಾಗಿ, ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಬೇಕು. ಪರೀಕ್ಷೆ ವಿರೋಧಿಸುತ್ತಿರುವ ವಿದ್ಯಾರ್ಥಿಗಳನ್ನು ಕರೆದು ಮನವರಿಕೆ ಮಾಡಿಕೊಡಬೇಕು’ ಎಂದು ಆಗ್ರಹಿಸುತ್ತಾರೆ ಸಿಂಡಿಕೇಟ್‌ ಸದಸ್ಯರಾದ ಧರ್ಮ ‍ಪ್ರಸಾದ್, ಮಂಜುನಾಥ್.

2019–20ರ ಸಾಲಿಗೆ ಕೊನೆಯ ಪ್ರವೇಶ:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೊರತುಪಡಿಸಿದರೆ ರಾಜ್ಯದ ಇತರ ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ನೀಡಬಾರದು ಎಂದು 2020ರಲ್ಲೇ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹಾಗಾಗಿ, 2019–20ರಲ್ಲಿ ನೀಡಿದ ಪ್ರವೇಶವೇ ಕೊನೆ. ಈ ಕಾರಣಕ್ಕೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡುವ ಹಠಕ್ಕೆ ಕೆಲವರು ಬಿದ್ದಿದ್ದಾರೆ ಎನ್ನುತ್ತವೆ ವಿಶ್ವವಿದ್ಯಾಲಯದ ಮೂಲಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು