ಶುಕ್ರವಾರ, ಅಕ್ಟೋಬರ್ 22, 2021
29 °C

‘ಕಾರ್ಮಿಕ ಅದಾಲತ್‌’ ಪರಿಣಾಮ: 1.54 ಲಕ್ಷ ಕಾರ್ಮಿಕರಿಗೆ ಹಣ ಪಾವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಾದ್ಯಂತ ನಡೆದ ‘ಕಾರ್ಮಿಕ ಅದಾಲತ್‌’ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಕಾರ್ಮಿಕ ಇಲಾಖೆ, 1.54 ಲಕ್ಷ ಕಾರ್ಮಿಕರಿಗೆ ₹ 89.05 ಕೋಟಿ ಪಾವತಿಸಿದೆ.

ಕನಿಷ್ಠ ವೇತನ, ಪಿಂಚಣಿ, ಮಾಲೀಕ –ಕಾರ್ಮಿಕ ನಡುವಿನ ವಿವಾದ, ಸೌಲಭ್ಯಗಳಿಂದ ವಂಚನೆ ಸೇರಿದಂತೆ 3.02 ಲಕ್ಷ ಪ್ರಕರಣಗಳ ಪೈಕಿ, 2.83 ಲಕ್ಷ ಪ್ರಕರಣಗಳು ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ. ಆ ಮೂಲಕ, ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ನೂರಾರು ಪ್ರಕರಣಗಳು ಮುಕ್ತಿ ಕಂಡಿವೆ.

ಜಿಲ್ಲೆ, ತಾಲ್ಲೂಕು ಮಟ್ಟವಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್‌ 16ರಿಂದ ಸೆ. 15ರವರೆಗೆ ಅದಾಲತ್‌ ನಡೆದಿತ್ತು.

ಅರೆ ನ್ಯಾಯಿಕ ಪ್ರಕರಣ: ಕನಿಷ್ಠ ವೇತನ ಕಾಯ್ದೆ, ಉಪಧನ ಪಾವತಿ ಕಾಯ್ದೆ ಸೇರಿದಂತೆ ವಿವಿಧ ಕಾರ್ಮಿಕ ಕಾಯ್ದೆಯಡಿ (ಅರೆ ನ್ಯಾಯಿಕ ಪ್ರಕರಣ) 1,213 ದೂರುಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಪ್ರಕರಣಗಳಲ್ಲಿ ಮಾಲೀಕ ಮತ್ತು ಕಾರ್ಮಿಕರ ಮಧ್ಯೆ ಸಂಧಾನ ನಡೆಸಿ 19,253 ಕಾರ್ಮಿಕರಿಗೆ ಒಟ್ಟು 4.09 ಕೋಟಿ ನೀಡಲಾಗಿದೆ. 

ಇತರ ಪ್ರಕರಣ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಸೌಲಭ್ಯಗಳು ಸಿಕ್ಕಿಲ್ಲವೆಂದು 3.01 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಪೈಕಿ, 2.82 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿದ್ದರಿಂದ 1.35 ಲಕ್ಷ ಕಾರ್ಮಿಕರಿಗೆ ಅನುಕೂಲ ಆಗಿದೆ. ಈ ಪ್ರಕರಣಗಳಲ್ಲಿ ₹ 84.96 ಕೋಟಿಯನ್ನು ಕಾರ್ಮಿಕರಿಗೆ ನೀಡಲಾಗಿದೆ.

‘ಅದಾಲತ್‌ಗೂ ಮೊದಲು ಇಲಾಖೆಯ ಅಡಿಯಲ್ಲಿರುವ ಎಲ್ಲ ಕಚೇರಿಗಳಲ್ಲಿ 1.76 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದವು.  ಅದಾಲತ್‌ಗೆ ಮತ್ತೆ 1.26 ಲಕ್ಷ ಅರ್ಜಿಗಳು ಬಂದಿತ್ತು. ಈ ಎಲ್ಲ ಅರ್ಜಿಗಳನ್ನು ವಿಲೇವಾರಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಆಸಕ್ತಿ ವಹಿಸಿ ನಿರ್ದೇಶನ ನೀಡಿದ್ದರು‘ ಎಂದು ಇಲಾಖೆಯ ಆಯುಕ್ತ ಅಕ್ರಂ ಪಾಷಾ
ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು