ಭಾನುವಾರ, ಅಕ್ಟೋಬರ್ 24, 2021
21 °C

ಲಖಿಂಪುರ ಪ್ರಕರಣ: ಕೇಂದ್ರ ಸಚಿವ ಮಿಶ್ರಾ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ– ಖೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ರೇಸ್‌ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ‘ಕೋವಿಡ್‌ನಿಂದ ದೇಶದಲ್ಲಿ ಬೃಹತ್‌ ಸಂಖ್ಯೆಯ ಜನರು ಮೃತಪಟ್ಟಾಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಲಿಲ್ಲ. ಕೇಂದ್ರ ಸಚಿವರ ಕುಟುಂಬದಿಂದಲೇ ರೈತರ ಹತ್ಯೆಯಾಗಿದೆ. ಈಗಲೂ ಪ್ರಧಾನಿ ಮೌನ ಮುರಿಯುತ್ತಿಲ್ಲ. ಅವರು ತಮ್ಮ ಹೆಸರನ್ನು ಮೌನೇಂದ್ರ ಮೋದಿ ಎಂಬುದಾಗಿ ಬದಲಾಯಿಸಿಕೊಳ್ಳಬೇಕು’ ಎಂದರು.

ಅಜಯ್‌ ಮಿಶ್ರಾ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರೈತರ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ, ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ‘ಮೋದಿಯವರಿಗೆ ಅಂಬಾನಿಯ ಮೊಮ್ಮಗನನ್ನು ನೋಡಲು ಸಮಯವಿದೆ. ಆದರೆ, ರೈತರ ಸಮಸ್ಯೆ ಆಲಿಸಲು ಬಿಡುವು ಇಲ್ಲ. ಕೇಂದ್ರ ಸಚಿವರ ಮಗನಿಂದ ರೈತರ ಕಗ್ಗೊಲೆ ನಡೆದರೂ ಸಾಂತ್ವನ ಹೇಳದಿರುವುದು ನಾಚಿಕೆಗೇಡು’ ಎಂದರು.

ರೈತರ ಕೊಲೆ ಆರೋಪಿಯಾಗಿರುವ ಆಶಿಶ್‌ ಮಿಶ್ರಾನಿಗೆ ಪೊಲೀಸರು ರಾಜ ಮರ್ಯಾದೆ ನೀಡುತ್ತಿದ್ದಾರೆ. ರೈತರ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವರ ಮಗನೇ ಆರೋಪಿಯಾಗಿರುವುದರಿಂದ ಅಜಯ್‌ ಮಿಶ್ರಾ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಶಾಸಕ ರಿಜ್ವಾನ್ ಅರ್ಷದ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್‌. ಸುದರ್ಶನ್‌, ಮುಖಂಡ ಎಚ್.ಎಂ ರೇವಣ್ಣ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎನ್ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್, ಬೆಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಅಧ್ಯಕ್ಷರಾದ ರಾಜಕುಮಾರ್, ಕೃಷ್ಣಪ್ಪ, ಜಿ.ಶೇಖರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು