ಶುಕ್ರವಾರ, ಏಪ್ರಿಲ್ 23, 2021
28 °C
ಪರಿಸರ ಇಲಾಖೆಯಿಂದ ನಗರಸಭೆ, ಪುರಸಭೆಗಳಿಗೆ ನೋಟಿಸ್‌, ಗಂಗಾ ನದಿ ಸ್ವಚ್ಛತೆ ಮಾದರಿ

ಕಾವೇರಿ ಕಲುಷಿತ: ಹಸಿರು ಬಣ್ಣಕ್ಕೆ ತಿರುಗಿದ ಲಕ್ಷ್ಮಣತೀರ್ಥ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹುಣಸೂರು ಪಟ್ಟಣದೊಳಗೆ ಹರಿದು ಹೋಗುವ ಲಕ್ಷ್ಮಣತೀರ್ಥ ನದಿಯಲ್ಲಿ ಹಸಿರು ಪಾಚಿ ಬೆಳೆದಿದ್ದು, ಕಲ್ಮಶ ಸೇರಿ ದುರ್ವಾಸನೆ ಬೀರುತ್ತಿದೆ. ತ್ಯಾಜ್ಯ ತುಂಬಿ ಚರಂಡಿಯಾಗಿ ಮಾರ್ಪಟ್ಟಿದೆ.  

ಕಲುಷಿತ ನೀರು ಬಿಳಿಕೆರೆ ಹೋಬಳಿಯ ರಾಮೇನಹಳ್ಳಿ ಬಳಿ ಕಾವೇರಿ ನದಿಗೆ ಸೇರಲಿದೆ. ಈಗಲೂ ಹುಣಸೂರು ನಗರದಿಂದ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರುತ್ತಲೇ ಇದೆ. ಹಲವು ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಶುದ್ಧೀಕರಣ ಪೂರ್ಣ ನಡೆಯಲಿಲ್ಲ. 

ಸ್ವಚ್ಛತೆಗೆ ಯೋಜನೆ: ಜೀವನದಿ ಕಾವೇರಿ ಹಾಗೂ ಅದರ ಉಪಪನದಿಗಳು ಭಾರಿ ಪ್ರಮಾಣದಲ್ಲಿ ಕಲುಷಿತ ಆಗುತ್ತಿರುವುದರಿಂದ ಗಂಗಾ ನದಿ ಮಾದರಿಯಲ್ಲಿಯೇ ಸ್ವಚ್ಛತಾ ಅಭಿಯಾನ ಈಗ ರೂಪಿಸಲು  ರಾಜ್ಯ ಸರ್ಕಾರ ಈಗ ಮುಂದಾಗಿದೆ.

ಈ ನಿಟ್ಟಿನಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್‌ ನೀಡಲು ಪರಿಸರ ಹಾಗೂ ಜೀವಿವಿಜ್ಞಾನ ಇಲಾಖೆ ನಿರ್ಧರಿಸಿದೆ.

ಪ್ರಮುಖವಾಗಿ ಕುಶಾಲನಗರ, ಹುಣಸೂರು, ನಂಜನಗೂಡು, ಶ್ರೀರಂಗಪಟ್ಟಣ, ತಿ.ನರಸೀಪುರ, ಕೊಳ್ಳೇಗಾಲ ಪಟ್ಟಣಗಳ ಕೊಳಚೆ ನೀರು ಕಾವೇರಿ ಅಥವಾ ಅದರ ಉಪನದಿಗಳಿಗೆ ಸೇರುತ್ತಿದೆ.

‘ಕಾವೇರಿ ನದಿ ಹಾಗೂ ಉಪನದಿಗಳು ಕಲುಷಿತಗೊಳ್ಳುತ್ತಿರುವ ಕಾರಣ ಸಂಬಂಧಿಸಿದ ಇಲಾಖೆಗಳಿಗೆ ನೋಟಿಸ್‌ ನೀಡಲಾಗುವುದು. ನೀರು ಬಳಕೆ ಮಾಡಲಾಗದಷ್ಟು ನದಿಗಳು ಮಲಿನಗೊಂಡಿವೆ. ಕಾವೇರಿ ನದಿ ಉದ್ದಗಲಕ್ಕೂ ಸ್ವಚ್ಛತೆ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಸಚಿವ ಸಿ.ಪಿ.ಯೋಗೇಶ್ವರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎಲ್ಲಾ ಕಡೆ ನೀರನ್ನು ನಾವೇ ಕಲುಷಿತಗೊಳಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಮಲಿನ ನೀರನ್ನು ಕುಡಿಯುತ್ತಿದ್ದೇವೆ’ ಎಂದರು.

ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 98 ಉಪನದಿ, ತೊರೆ, ಹಳ್ಳಗಳು ಕಾವೇರಿ ನದಿ ಸೇರುತ್ತಿವೆ. ಈ ನದಿ ಪಾತ್ರಗಳ ವ್ಯಾಪ್ತಿಗೆ ಬರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ಕೊಳಚೆ ನೀರು ಜಲಮೂಲ ಸೇರುತ್ತಿದೆ. ಕೊಳಚೆ ನೀರನ್ನು ಸಂಸ್ಕರಿಸದೆ ನದಿಗೆ ಹರಿಸುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.

ಕೊಡಗು ಜಿಲ್ಲೆಯಲ್ಲಿ ನದಿ ಪಾತ್ರಗಳಲ್ಲೇ ರೆಸಾರ್ಟ್‌ ಹಾಗೂ ಹೋಂಸ್ಟೇ ಹೆಚ್ಚುತ್ತಿವೆ. ಜೊತೆಗೆ ಕಾಫಿ ಕೊಯ್ಲು ಸಂದರ್ಭದಲ್ಲಿ ಕಾಫಿ ಪಲ್ಪಿಂಗ್‌ ಮಾಡಿದ ನೀರು ಹಾಗೂ ಕೈಗಾರಿಕೆಗಳ ಕಲುಷಿತ ನೀರು ನದಿಗೆ ಹರಿಯುತ್ತಿದೆ.

ನದಿಯಲ್ಲಿ ಸ್ನಾನ ಮಾಡುವವರು, ಪೂಜೆಗೆ ಬರುವವರು ಹಳೆಯ ಬಟ್ಟೆಗಳನ್ನು ನದಿಗೆ ಎಸೆಯುತ್ತಾರೆ. ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ, ಹೋಮ, ಹವನ ಸಂದರ್ಭದಲ್ಲಿ ಅನ್ನ, ಹಣ್ಣು, ತರಕಾರಿ, ಇತರೆ ವಸ್ತುಗಳನ್ನು ನದಿ ಒಡಲಿಗೆ ಹಾಕುತ್ತಿದ್ದಾರೆ.

‘ಕಾವೇರಿ ನದಿಯ ಹಲವೆಡೆ ಪೊದೆ, ಸತ್ತೆ ಗಿಡ ಬೆಳೆದು ತ್ಯಾಜ್ಯ ತುಂಬಿದೆ. ನೀರುಸರಾಗವಾಗಿ ಹರಿಯಲು ಸಾಧ್ಯವಾಗದ ಸ್ಥಿತಿ ಇದೆ’ ಎನ್ನುತ್ತಾರೆ ಕಾವೇರಿ ನದಿ ಬಗ್ಗೆ ಯುಜಿಸಿಗೆ ಸಂಶೋಧನಾ ವರದಿ ಸಲ್ಲಿಸಿರುವ ‍ಪ್ರೊ.ರಂಗರಾಜು.

***

ನಗರ, ಪಟ್ಟಣಗಳಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ ಕಾವೇರಿ ಹಾಗೂ ಉಪನದಿಗಳಿಗೆ ಹರಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು

- ಸಿ.ಪಿ.ಯೋಗೇಶ್ವರ್‌, ಪರಿಸರ ಹಾಗೂ ಜೀವಿ ವಿಜ್ಞಾನ ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು