ಮಂಗಳೂರು: ನಗರದ ಕದ್ರಿಯಲ್ಲಿರುವ ಸರ್ಕಿಟ್ ಹೌಸ್‌ನಿಂದ ಕೆಳಗಡೆ ಹೋಗುವ ರಸ್ತೆ ಬದಿಯಲ್ಲಿನ ಅಪಾರ್ಟ್‌ಮೆಂಟ್‌ವೊಂದರ ಕಾಂಪೌಂಡ್ ಮೇಲೆ ‘ಲಷ್ಕರ್ ಜಿಂದಾಬಾದ್’ ಎಂಬಿತ್ಯಾದಿ ಬರಹವನ್ನು ಬರೆದಿರುವುದು ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
‘ಲಷ್ಕರ್ ಜಿಂದಾಬಾದ್’ ಎಂದು ಹ್ಯಾಷ್‌ಟ್ಯಾಗ್ ಹಾಕಿ, ‘ಡು ನಾಟ್ ಫೋರ್ಸ್ ಅಸ್ ಟು ಇನ್‌ವೈಟ್ ಲಷ್ಕರ್–ಇ–ತೊಯಿಬಾ ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನುವಾದಿಸ್’ ಎಂದು ಇಂಗ್ಲಿಷಿನಲ್ಲಿ ಬರೆಯಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಗೋಡೆ ಬರಹವನ್ನು ಅಳಿಸಿದ್ದಾರೆ.
ಕೋಮು ಸಾಮರಸ್ಯ ಕದಡುವ ಉದ್ದೇಶದಿಂದ ಈ ಕೃತ್ಯ ಕೈಗೊಂಡಿದ್ದು, ಮಧ್ಯರಾತ್ರಿ ಬರೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ರಸ್ತೆಯ ಸುತ್ತಮುತ್ತ ಸಿ.ಸಿ ಟಿವಿ ಕ್ಯಾಮೆರಾಗಳಿದ್ದು, ಅವುಗಳಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
‘ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ.
ಖಂಡನೆ: ಘಟನೆಯನ್ನು ಖಂಡಿಸಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿವೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸೇರಿದಂತೆ ಡಿವೈಎಫ್‌ಐ, ಪಿಎಫ್‌ಐ ಸಂಘಟನೆಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
‘ಉತ್ತರ ಇದು’ ಪೋಸ್ಟ್ ವೈರಲ್: ಈ ಗೋಡೆ ಬರಹ ಕಂಡು ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ‘ಉತ್ತರ ಇದು’ ಎಂಬ ಪೋಸ್ಟ್ ವೈರಲ್ ಆಗಿದೆ. ಗೋಡೆ ಬರಹದ ಫೋಟೊ ಎಡಿಟ್ ಮಾಡಿ, ‘ಉತ್ತರ ಇದು’ ಎಂದು ಸೇರಿಸಲಾಗಿದೆ.
‘ಆರ್‌ಎಸ್‌ಎಸ್’ ಹೆಸರಿನಲ್ಲಿ ಈ ಪೋಸ್ಟ್ ಎಂದು ಬರೆಯಲಾಗಿದ್ದು, ‘ಇನ್ವೈಟ್ ಯಾರನ್ನು ಬೇಕಾದರೂ ಮಾಡಿ, ನಾವೇನು ಅಂಗನವಾಡಿ ಸಜ್ಜಿಗೆ ತಿನ್ನುತ್ತಾ ಕುಳಿತುಕೊಳ್ಳುತ್ತೇವಾ. ಇದು ಮೋದಿಫೈಡ್ ಇಂಡಿಯಾ’ ಎಂದು ಪೋಸ್ಟ್ ಮಾಡಲಾಗಿದೆ. ಹ್ಯಾಷ್ ಟ್ಯಾಗ್‌ನಲ್ಲಿ ‘ಆರ್‌ಎಸ್‌ಎಸ್’ ಮತ್ತು ‘ಇಂಡಿಯನ್ ಆರ್ಮಿ’ ಎಂದು ಬರೆಯಲಾಗಿದೆ.
*
ಲಷ್ಕರ್ ಉಗ್ರ ಸಂಘಟನೆ ಪರವಾಗಿ ಬರೆದಿರುವ ಗೋಡೆ ಬರಹ ಕಾಶ್ಮೀರ ಅಥವಾ ಪಾಕಿಸ್ತಾನದ ಉಗ್ರರು ಮಂಗಳೂರಿನವರೆಗೆ ಬಂದಿದ್ದಾರೆ ಎಂಬುದನ್ನು ತೋರಿಸುತ್ತದೆ.
-ಶೋಭಾ ಕರಂದ್ಲಾಜೆ, ಸಂಸದೆ
*
ಲಷ್ಕರ್ ಪರವಾಗಿ ರಾಷ್ಟ್ರವಿರೋಧಿ ಬರಹ ಬರೆದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.