ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಜೋಸೆಫ್‌ ಖಾಸಗಿ ವಿ.ವಿ ಮಸೂದೆಗೆ ತಡೆ

ರಾಜ್ಯಪಾಲರ ಒಪ್ಪಿಗೆ ಇಲ್ಲದೇ ಮಂಡಿಸಿರುವುದರಿಂದ ಲೋಪ
Last Updated 3 ಫೆಬ್ರುವರಿ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತಗೊಂಡಿರುವ ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯ ಮಸೂದೆಯನ್ನು ತಾಂತ್ರಿಕ ಕಾರಣಗಳಿಂದ ವಿಧಾನ ಪರಿಷತ್‌ನಲ್ಲಿ ತಡೆ ಹಿಡಿಯಲಾಗಿದೆ.

ಆದರೆ, ನ್ಯೂ ಹೊರಾಜೊನ್‌, ವಿದ್ಯಾಶಿಲ್ಪ, ಏಟ್ರಿಯಾ ಮತ್ತು ಜಗದ್ಗುರು ಮುರುಘರಾಜೇಂದ್ರ ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ಪರಿಷತ್‌ ಬುಧವಾರ ಒಪ್ಪಿಗೆ ನೀಡಿತು.

ಐದು ಖಾಸಗಿ ವಿಶ್ವವಿದ್ಯಾಲಯಗಳ ಆರಂಭಕ್ಕೆ ಒಪ್ಪಿಗೆ ನೀಡುವ ಮಸೂದೆಗಳನ್ನು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಂಡಿಸಿದರು. ಮೂರೂವರೆ ಗಂಟೆಗೂ ಹೆಚ್ಚು ಕಾಲ ಚರ್ಚೆಯೂ ನಡೆಯಿತು. ಆದರೆ, ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ₹ 55 ಕೋಟಿ ಅನುದಾನ ನೀಡಲಾಗುತ್ತಿದೆ. ₹ 20 ಕೋಟಿಗಿಂತ ಹೆಚ್ಚಿನ ಆರ್ಥಿಕ ಹೊರೆಗೆ ಕಾರಣವಾಗುವ ಮಸೂದೆಗಳ ಮಂಡನೆಗೆ ರಾಜ್ಯಪಾಲರ ‍ಪೂರ್ವಾನುಮತಿ ಅಗತ್ಯ. ಈ ಮಸೂದೆಯನ್ನು ರಾಜ್ಯಪಾಲರ ಅನುಮತಿ ಪಡೆಯದೇ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ ಎಂಬ ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸಚಿವರಿಗೆ ತಲುಪಿಸಿದರು.

ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆಗಳನ್ನು ಮಾತ್ರ ಅಂಗೀಕರಿಸಲಾಯಿತು. ಸೇಂಟ್‌ ಜೋಸೆಫ್‌ ವಿಶ್ವವಿದ್ಯಾಲಯದ ಮಸೂದೆಗೆ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಪಡೆದು ಗುರುವಾರವೇ ಸದನದ ಅಂಗೀಕಾರ ಪಡೆಯಲಾಗುವುದು ಎಂದು ಅಶ್ವತ್ಥನಾರಾಯಣ ಭರವಸೆ ನೀಡಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ, ಅಪ್ಪಾಜಿಗೌಡ, ಕೆ.ತಿಪ್ಪೇಸ್ವಾಮಿ, ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ, ಬಸವರಾಜ ಪಾಟೀಲ್‌ ಇಟಗಿ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಹಲವು ಸದಸ್ಯರು, ಖಾಸಗಿ ವಿಶ್ವವಿದ್ಯಾಲಯಗಳಿಗೆ ಮುಕ್ತವಾಗಿ ಅನುಮತಿ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರವೇಶ ಪ್ರಕ್ರಿಯೆ, ಆಡಳಿತ, ಪರೀಕ್ಷೆ ಎಲ್ಲ ಹಂತಗಳಲ್ಲೂ ಸರ್ಕಾರದ ನಿಯಂತ್ರಣ ಇರುವಂತೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಮೀಸಲಾತಿ ವಂಚನೆಯ ಆತಂಕ

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವುದರಿಂದ ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮತ್ತು ಆರ್‌.ಬಿ. ತಿಮ್ಮಾಪೂರ ಆತಂಕ ವ್ಯಕ್ತಪಡಿಸಿದರು.

‘ಖಾಸಗೀಕರಣ ಎಂದರೆ ಮೀಸಲಾತಿಯ ವಿರುದ್ಧವಾದ ನಡೆ ಎಂದರ್ಥ. ಸಂಪೂರ್ಣವಾಗಿ ಸ್ವಾಯತ್ಥತೆ ಪಡೆದ ಶಿಕ್ಷಣ ಸಂಸ್ಥೆಗಳು ಮೀಸಲಾತಿ ಸೌಲಭ್ಯವನ್ನು ನೀಡುವುದೇ ಇಲ್ಲ. ಈ ವಿಚಾರದಲ್ಲಿ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಹರಿಪ್ರಸಾದ್ ಆಗ್ರಹಿಸಿದರು.

‘ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯು ದಲಿತರನ್ನು ಮುಗಿಸುವ ಸಂಚು. ಸರ್ಕಾರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಬಾರದು. ತರಾತುರಿಯಲ್ಲಿ ಅಂಗೀಕಾರ ಅಗತ್ಯವಿಲ್ಲ’ ಎಂದು ತಿಮ್ಮಾಪೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT