ಮಂಗಳವಾರ, ನವೆಂಬರ್ 24, 2020
22 °C
ಕೋವಿಡ್ ನಡುವೆ ಸಾರಿಗೆ ನಿಗಮದ ಮಹಿಳಾ ಸಿಬ್ಬಂದಿ ಕೆಲಸ

ಆಳ-ಅಗಲ: ಏನೇ ಬರಲಿ ರೈಟ್ ರೈಟ್...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಬೆಳಿಗ್ಗೆ 4 ಗಂಟೆ. ಅಲಾರಾಂ ಬಾರಿಸುತ್ತಿದ್ದಂತೆಯೇ ನಿದ್ದೆಗಣ್ಣಲ್ಲೇ ಎದ್ದೇಳುವ ಆ ಹೆಣ್ಣುಮಗಳು, ಅಂದಿನ ಅಡುಗೆಗೆ ಸಿದ್ಧವಾಗುತ್ತಾಳೆ. ಐದೂವರೆ ಆರರ ಹೊತ್ತಿಗೆ ತಿಂಡಿ, ಮಧ್ಯಾಹ್ನದ ಅಡುಗೆಯನ್ನೂ ಮಾಡಿ, ಸ್ನಾನ ಮುಗಿಸಿ ರೆಡಿಯಾಗಿ ಬಸ್‌ ಡಿಪೋದತ್ತ ಓಟ. ಅಲ್ಲಿ ಅಂದಿನ ರೂಟ್ ಯಾವುದೆಂದು ಖಚಿತಪಡಿಸಿಕೊಂಡು ಬೆಳಿಗ್ಗೆ 7 ಗಂಟೆಗೆ ಬಸ್ ಹತ್ತಿದರೆ ಮತ್ತೆ ಹಿಂತಿರುಗುವುದು ರಾತ್ರಿ 7ಕ್ಕೆ. ದಿನವಿಡೀ ಮಾಸ್ಕ್‌ಧಾರಿ ಪ್ರಯಾಣಿಕರ ನಡುವೆ ಸಾಧ್ಯವಾದಷ್ಟೂ ಅಂತರ ಪಾಲಿಸಿ, ಅವರಿಗೆ ಟಿಕೆಟ್ ಕೊಡುವ ಕೆಲಸ ಮುಗಿಸಿ ಕೈಗೆ ಸ್ಯಾನಿಟೈಸರ್ ಹಾಕಿಕೊಂಡರೆ ತುಸು ನಿರಾಳ. ಮನೆಗೆ ಬರುವಷ್ಟರಲ್ಲಿ ಹೈರಾಣವಾಗಿದ್ದರೂ ಮತ್ತೆ ಮನೆಯ ಕೆಲಸದತ್ತ ಗಮನ. ಗಂಡ–ಮಕ್ಕಳು–ಪೋಷಕರ ಬಗ್ಗೆ ಗಮನ ಹರಿಸಿ, ಮಕ್ಕಳಿಗೆ ಉಣಿಸಿ, ತಾನೂ ಉಂಡು ಮಲಗುವ ಹೊತ್ತಿಗೆ ರಾತ್ರಿ 11.30.

ಇದು ರಾಜ್ಯದ ನಾಲ್ಕೂ ಸಾರಿಗೆ ನಿಗಮದಲ್ಲಿರುವ (ಬಿಎಂಟಿಸಿ, ಕೆಎಸ್ಆರ್‌ಟಿಸಿ, ಈಶಾನ್ಯ, ವಾಯವ್ಯ) ಬಹುತೇಕ ಮಹಿಳಾ ನಿರ್ವಾಹಕಿಯರ (ಕಂಡಕ್ಟರ್‌) ನಿತ್ಯದ ದಿನಚರಿ.

ಕೋವಿಡ್ ನಡುವೆಯೇ ಬಸ್ ಹತ್ತಿ ಅಂದಿನ ಡ್ಯೂಟಿಯನ್ನು ಮಾಡಿ ಮುಗಿಸುವ ಈ ಹೆಣ್ಣುಮಕ್ಕಳು ನಿತ್ಯವೂ ಸೋಂಕಿನೊಂದಿಗೆ ಮುಖಾಮುಖಿಯಾಗುತ್ತಾರೆ. ತಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ದೇವರ ಮೇಲೆ ಭಾರ ಹಾಕಿ ‘ರೈಟ್ ರೈಟ್’ ಎಂದು ಕೂಗಿ ವಿಷಲ್ ಹೊಡೆಯುವ ಇವರದ್ದು ಮನೆಯೊಳಗೆ ಮತ್ತು ಹೊರಗೆ ಎರಡೂ ಕಡೆ ಹೋರಾಟದ ಬದುಕೇ. ತಮಗಾಗಿ ಅಂತ ಕೆಲವು ನಿಮಿಷಗಳನ್ನೂ ವ್ಯಯಿಸಲು ಪುರುಸೊತ್ತಿಲ್ಲದಂತೆ ಕೆಲಸ ಮಾಡುವ ಈ ಹೆಣ್ಣುಮಕ್ಕಳು ಅವರ ಕುಟುಂಬಗಳ ಆರ್ಥಿಕ ಆಧಾರಸ್ತಂಭ.

ಮನೆಗೆ ಬೀಗ ಹಾಕಿ ಬರ್ತೀನಿ...

‘ನನಗೆ 6 ವರ್ಷದ ಮಗಳು ಹಾಗೂ 10 ವರ್ಷದ ಮಗನಿದ್ದಾನೆ. ಪತಿ ಕೂಡಾ ಸಾರಿಗೆ ಸಂಸ್ಥೆಯ ಸಿಬ್ಬಂದಿ. ಬೆಳಿಗ್ಗೆ 7ಕ್ಕೆ ಮನೆ ಬಿಟ್ಟರೆ ಮತ್ತೆ ಹಿಂತಿರುಗುವುದು ರಾತ್ರಿ 7ಕ್ಕೆ. ಶಾಲೆಗಳಿಲ್ಲದ್ದರಿಂದ ಮಕ್ಕಳು ಮನೆಯಲ್ಲೇ ಇರ್ತಾರೆ. ಅತ್ತೆ ಮಾನಸಿಕ ಅಸ್ವಸ್ಥೆ. ಅವರು ಮನೆಯಿಂದ ಹೊರಗೆ ಹೋದರೆ ವಾಪಸ್ ಬರುವುದು ಖಚಿತವಿಲ್ಲ. ಹಾಗಾಗಿ, ಮಕ್ಕಳ ಜೊತೆಗೆ ಅವರನ್ನೂ ಮನೆಯಲ್ಲಿ ಬಿಟ್ಟು ಹೊರಗಿನಿಂದ ಬೀಗ ಹಾಕಿಕೊಂಡು ಬರ್ತೀನಿ. ಅಂದಿನ ದಿನಕ್ಕೆ ಬೇಕಾಗುವಷ್ಟು ತಿಂಡಿ ಮತ್ತು ಅಡುಗೆಯನ್ನು ಬೆಳಿಗ್ಗೆಯೇ ಮಾಡಿರ್ತೀನಿ. ಮಕ್ಕಳ ಕೈಗೆ ಗ್ಯಾಸ್ ಲೈಟರ್, ಬೆಂಕಿ ಪೊಟ್ಟಣ ಸಿಗದಂತೆ ಎತ್ತಿಟ್ಟು ಬರ್ತೀನಿ’ ಎಂದು ತಮ್ಮ ನಿತ್ಯದ ದಿನಚರಿ ಬಿಚ್ಟಿಟ್ಟರು ಬಿಎಂಟಿಸಿಯ ಒಬ್ಬರು ನಿರ್ವಾಹಕಿ.

‘ಗಂಡ ಮತ್ತು ಹೆಂಡತಿ ಒಂದೇ ಇಲಾಖೆಯಲ್ಲಿ ಇರುವುದರಿಂದ ನಮಗೆ ಪಾಳಿಯ ಪ್ರಕಾರ ಡ್ಯೂಟಿ ಕೊಡಿ ಅಂತ ತುಂಬಾ ಸಲ ಮನವಿ ಮಾಡಿದ್ದೇನೆ. ಅದಕ್ಕೆ ಇದುವರೆಗೆ ಸಕಾರಾತ್ಮಕ ಪ್ರತಿಕ್ರಿಯೆಯೇ ಬಂದಿಲ್ಲ. ಬೆಳಿಗ್ಗೆ ಬಾಕ್ಸ್‌ಗೆ ತಿಂಡಿ ಹಾಕ್ಕೊಂಡು ಹೋದವಳು ಯಾವಾಗಲೋ ತಿಂತೀನಿ. ಮಧ್ಯೆ ವಿಶ್ರಾಂತಿ ಸಿಕ್ಕರೂ ಅದು ಪ್ರಯೋಜನಕ್ಕಿಲ್ಲ. ಗಂಡಸರು ಹೇಗೋ ಇದ್ದುಬಿಡುತ್ತಾರೆ. ಆದರೆ, ನಮ್ಮ ಕಥೆ ಹಾಗಲ್ಲವಲ್ಲ. ಮೂತ್ರ ವಿಸರ್ಜಿಸಬೇಕಾಗುತ್ತದೆ ಅಂತ ಹೆಚ್ಚು ನೀರನ್ನೂ ಕುಡಿಯಲ್ಲ ನಾನು. ಕೋವಿಡ್ ಇರೋದರಿಂದ ಆತಂಕವಂತೂ ಇದೆ. ಆದರೆ, ಹೊಟ್ಟೆಪಾಡಿಗೆ ದುಡಿಯಲೇ ಬೇಕು. ಕೆಲವೊಮ್ಮೆ ಬೇರೆಯವರಿಗೂ ಡ್ಯೂಟಿ ಸಿಗಲಿ ಅಂತ ನಮಗೆ ರಜೆ ಹಾಕಿಸುತ್ತಾರೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಅಂತಾರೆ. ಆದರೆ, ಒಂದು ವೇಳೆ ವರದಿ ಪಾಸಿಟಿವ್ ಬಂದರೆ ನನ್ನ ಅತ್ತೆ ಮತ್ತು ಮಕ್ಕಳನ್ನು ನೋಡಿಕೊಳ್ಳುವವರು ಯಾರು ಅನ್ನುವ ಚಿಂತೆ ಶುರುವಾಗಿ ಇದುವರೆಗೂ ಟೆಸ್ಟ್ ಮಾಡಿಸಿಲ್ಲ. ಸುರಕ್ಷತಾ ಕ್ರಮ ಅನುಸರಿಸಿ ಕೆಲಸ ಮಾಡುತ್ತಿರುವೆ’ ಅನ್ನುತ್ತಾರೆ ಅವರು.

ಪಾಳಿ ವ್ಯವಸ್ಥೆಗೆ ವೆಚ್ಚ ಹೆಚ್ಚು

ಮೊದಲಿನಂತೆ ಪಾಳಿ ವ್ಯವಸ್ಥೆ ತಂದರೆ ವೆಚ್ಚ ಹೆಚ್ಚು. ಈಗ ಒಂದೇ ಪಾಳಿಯ ಸಾಧಕ–ಬಾಧಕಗಳನ್ನು ಪ್ರತಿ ವಾರ ಪರಿಶೀಲಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಮೊದಲಿನ ಪಾಳಿ ವ್ಯವಸ್ಥೆಯನ್ನೇ ಜಾರಿಗೆ ತರುವ ಬಗ್ಗೆ ಯೋಚಿಸಲಾಗುವುದು. ವಿಶ್ರಾಂತಿ ಅವಧಿಯ ಬಗ್ಗೆಯೂ ನಂತರ ತೀರ್ಮಾನ ತೆಗೆದು
ಕೊಳ್ಳಲಾಗುವುದು ಎನ್ನುತ್ತಾರೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ.

ಉಚಿತ ಪರೀಕ್ಷೆ, ವಿಶೇಷ ರಜೆ ಸೌಲಭ್ಯ

ಕೆಎಸ್‌ಆರ್‌ಟಿಸಿಯ ಸಿಬ್ಬಂದಿಯಲ್ಲಿ ವಿಶೇಷವಾಗಿ ಗರ್ಭಿಣಿಯರು, 55 ವರ್ಷ ಮೀರಿದ ಮಹಿಳೆಯರು ರಜೆ ಬಯಸಿದಲ್ಲಿ ಅವರಿಗೆ ರಜೆ ಮಂಜೂರು ಮಾಡಬೇಕು. ಅವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಏನಾದರೂ ದೂರು ಇದ್ದರೆ, ಸಮಸ್ಯೆಗಳ ಪರಿಹಾರಕ್ಕೆ ಪ್ರತಿವಾರ ಡಿಪೋಗಳಿಗೆ ಮೇಲಧಿಕಾರಿಗಳನ್ನು ಕಳುಹಿಸಲಾಗುತ್ತದೆ ಎನ್ನುತ್ತಾರೆ ಕೆಎಸ್‌ಆರ್‌ಟಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್.

‌‘ಕೊರೊನಾ ಸೋಂಕು ತಗುಲಿದರಿಗೆ ವಿಶೇಷ ರಜೆ ಮಂಜೂರು ಮಾಡುತ್ತೇವೆ. ಒಂದು ವೇಳೆ ಕುಟುಂಬ ಸದಸ್ಯರಲ್ಲಿ ಕೋವಿಡ್ ಇದ್ದು, ಸಿಬ್ಬಂದಿಯು ಪ್ರಾಥಮಿಕ ಸಂಪರ್ಕಿತರಾಗಿದ್ದರೆ ಅವರಿಗೆ ವೇತನ ಸಹಿತ ರಜೆ ಮಂಜೂರು ಮಾಡಲಾಗುವುದು. ಪೀಣ್ಯದಲ್ಲಿರುವ ಕೋವಿಡ್ ಆಸ್ಪತ್ರೆಯ ಪ್ರಯೋಜನವನ್ನು ಅನೇಕರು
ಪಡೆದುಕೊಂಡಿದ್ದಾರೆ. ಪ್ರಯಾಣಿಕರು ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡಿದರೆ ಸೋಂಕಿನ ಅಪಾಯ ತಪ್ಪಬಹುದು. ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ಅನುಕೂಲ. ಸಾರ್ವಜನಿಕರು ಮತ್ತು ಸಿಬ್ಬಂದಿ ಇಬ್ಬರೂ ಸುರಕ್ಷತೆ ಕಾಯ್ದುಕೊಳ್ಳಬೇಕು. ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ನಮ್ಮ ಸಿಬ್ಬಂದಿಯೂ ಕೊರೊನಾ ಸೇನಾನಿಗಳೇ’ ಎನ್ನುತ್ತಾರೆ ಅವರು.

ಕೊರೊನಾ ಚಿಕಿತ್ಸೆಯಲ್ಲಿ ಆಸ್ಪತ್ರೆಗೆ ಬಿಲ್ ಕಟ್ಟಲಾರ ದವರಿಗೆ ಸಂಸ್ಥೆಯ ನಿಯಮಾವಳಿ ಪ್ರಕಾರ ಮುಂಚಿತವಾಗಿಯೇ ಹಣ ಬಿಡುಗಡೆ ಮಾಡಲಾಗುವುದು. ನಂತರ ಆ ಹಣವನ್ನು ಅಸ್ಪತ್ರೆಯ ಬಿಲ್‌ನಲ್ಲಿ ಸರಿದೂಗಿಸಲಾಗುವುದು ಎಂದು ಮಾಹಿತಿ ನೀಡುತ್ತಾರೆ ಈಶಾನ್ಯ ಸಾರಿಗೆ ನಿಗಮದ ಅಧಿಕಾರಿಯೊಬ್ಬರು.

ಓಟಿ ಕಟ್ ತಂದಿಟ್ಟ ಆರ್ಥಿಕ ಸಂಕಷ್ಟ

‘ಈ ಹಿಂದೆ ಓಟಿ ಮಾಡಿದರೆ ತಿಂಗಳಿಗೆ ಎಂಟ್ಹತ್ತು ಸಾವಿರ ಹೆಚ್ಚಿಗೆ ಸಂಬಳ ಸಿಗುತ್ತಿತ್ತು. ಆದರೆ, ಕೊರೊನಾ ಬಂದ ಮೇಲೆ ಓಟಿ ಕಟ್ ಮಾಡಿದ್ದಾರೆ. 8 ತಿಂಗಳು ಆಯ್ತು ಓಟಿ ಕಟ್ ಆಗಿ. ದಿಢೀರ್ ಅಂತ ಎಂಟ್ಹತ್ತು ಸಾವಿರ ಕಮ್ಮಿಯಾದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತೆ. ನಾನು ಮನೆ ಖರೀದಿಸಲು ಸಾಲ ಮಾಡಿದ್ದೆ. ಈಗ ಕೈಗೆ ಬರುವ ಹಣ ಅದಕ್ಕೇ ಹೋಗುತ್ತೆ. ಇತರ ಖರ್ಚುಗಳಿಗೆ ಏನ್ ಮಾಡೋದು? ಬೇಳೆಕಾಳು– ತರಕಾರಿ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಿದೆ. ಖಾಸಗಿ ಶಾಲೆಯಲ್ಲಿ ಫೀಜು ಜಾಸ್ತಿ ಆಂತ ಮಗನನ್ನು  ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ. ಜವಾನ ಹುದ್ದೆಗಿಂತ ನಮಗೆ ಬೇಸಿಕ್‌ನಲ್ಲೇ ₹5 ಸಾವಿರ ವ್ಯತ್ಯಾಸವಿದೆ ಅಂದರೆ ನಮ್ಮ ಜೀವನ ಹೇಗಿರಬಹುದು ಯೋಚಿಸಿ. ಒಂದೆಡೆ ಕೋವಿಡ್ ಭೀತಿ ಮತ್ತೊಂದೆಡೆ ಆರ್ಥಿಕ ಸಂಕಷ್ಟ. ಇವೆರಡರ ನಡುವೆ ರಿಸ್ಕ್ ತಗೊಂಡು ಕೆಲಸ ಮಾಡುತ್ತಿದ್ದರೂ ಕಲೆಕ್ಷನ್ ಆಗಿಲ್ಲ ಅಂತ ಅಧಿಕಾರಿಗಳು ದೂರುತ್ತಾರೆ. ಲಾಭ–ನಷ್ಟದ ಲೆಕ್ಕಾಚಾರದಲ್ಲಿ ಮನುಷ್ಯತ್ವಕ್ಕೆ ಬೆಲೆ ಇಲ್ವಾ’ ಎಂದು ಪ್ರಶ್ನಿಸಿದವರು ವಾಯವ್ಯ ಸಾರಿಗೆಯ ನಿರ್ವಾಹಕಿಯಾಗಿ ಕೆಲಸ ಮಾಡುವ ಮಹಿಳೆ.‌

‘ಈ ಮೊದಲು ಈಶಾನ್ಯ, ವಾಯವ್ಯದಲ್ಲಿ ಹೆವಿ ಶೆಡ್ಯೂಲ್ ಇದ್ದ ಪಾಳಿಗಳನ್ನು ಕಡಿಮೆ ಮಾಡಿ, ಜನರಲ್ ಶಿಫ್ಟ್ ಮಾಡಿದ್ದಾರೆ. ಪ್ರತಿಯೊಬ್ಬರೂ 12ರಿಂದ 13 ಗಂಟೆ ಕೆಲಸ ಮಾಡಬೇಕು. ಡ್ಯೂಟಿ ಮುಗಿಸಿ ಮನೆಗೆ ಹೋಗುವಷ್ಟರಲ್ಲಿ ಒಟ್ಟು 15 ಗಂಟೆಯಾಗುತ್ತದೆ. ದಿನದ 24 ಗಂಟೆಗಳಲ್ಲಿ ಇಷ್ಟು ಕಾಲ ದುಡಿದರೆ ನಾವು ಹೇಗಿರಬೇಕು? ನಮ್ಮ ಆರೋಗ್ಯದ ಗತಿಯೇನು’ ಎಂದು ಪ್ರಶ್ನಿಸುತ್ತಾರೆ.

‘ಬಹುತೇಕ ನಿರ್ವಾಹಕಿಯರು ತಮ್ಮ ಗಂಡ, ಮಕ್ಕಳನ್ನು ಹಳ್ಳಿಗಳಿಗೆ ಕಳಿಸಿದ್ದಾರೆ. ಅನುಕೂಲವಿದ್ದವರು ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿದ್ದಾರೆ. ಈ ಆರ್ಥಿಕ ಸಂಕಷ್ಟದಲ್ಲಿ ಕೆಲ ನಿರ್ವಾಹಕಿಯರ ಕುಟುಂಬಗಳಲ್ಲಿ ಗಂಡಸರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದೆಡೆ ಹೆಚ್ಚುತ್ತಿರುವ ಕುಟುಂಬದ ಖರ್ಚು, ಮತ್ತೊಂದೆಡೆ ಹೆಚ್ಚುವರಿ ಗಂಟೆಗಳ ಕೆಲಸ ಹೀಗಿದೆ ನಮ್ಮ ಸ್ಥಿತಿ’ ಎಂದರು ಡಿಪೊವೊಂದರ ಮಹಿಳಾ ಮೆಕ್ಯಾನಿಕ್.

ಚಾಲಕಿ, ನಿರ್ವಾಹಕಿಯರನ್ನು ಹೊರತುಪಡಿಸಿದರೆ ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಮೆಕ್ಯಾನಿಕ್, ಟೆಕ್ನಿಕಲ್ ಅಸಿಸ್ಟೆಂಟ್ ಇದ್ದಾರೆ. ಬಸ್‌ನ ರಿಪೇರಿ ಕೆಲಸಗಳು, ಗಾಡಿ ತೊಳೆಯುವುದು ಟೆಕ್ನಿಕಲ್ ಅಸಿಸ್ಟೆಂಟ್‌ಗಳ ಕೆಲಸ.

‘ಕೊರೊನಾ ಬಂದ್ಮೇಲೆ ಬಸ್ ತೊಳೆಯಲು ಭಯವಾಗುತ್ತೆ. ಊರೆಲ್ಲಾ ಅಡ್ಡಾಡಿರುವ ಬಸ್‌ಗಳನ್ನು ಸ್ವಚ್ಛಗೊಳಿಸಬೇಕು. ಕೆಲ ಕೆಲಸಗಳನ್ನು ಗ್ಲೌಸ್‌ ಹಾಕಿಕೊಂಡು ಮಾಡಲಾಗದು. ಹಿಂದೆ ಡಿಪೊದಲ್ಲಿ ಗಾಡಿ ಬಂದ ತಕ್ಷಣವೇ ಸ್ಯಾನಿಟೈಸೇಷನ್ ಮಾಡಲಾಗುತ್ತಿತ್ತು. ಆದರೆ, ಈಚೆಗೆ ಇದು ಕಮ್ಮಿಯಾಗಿದೆ. ನಮಗೆ ಯೂನಿಫಾರಂ ವಾಷ್ ಮಾಡಲು ತಿಂಗಳಿಗೆ ₹ 35 ಕೊಡ್ತಾ ಇದ್ದರು. ಆದರೆ, ಈಗ ಅದೂ ಇಲ್ಲ. ಕೊರೊನಾ ಕಾರಣಕ್ಕಾಗಿ ನಿತ್ಯವೂ ಯೂನಿಫಾರಂ ಒಗೆದು, ಇಸ್ತ್ರಿ ಮಾಡಿಕೊಂಡೇ ಧರಿಸುತ್ತೇವೆ. ಕೆಲಸಕ್ಕೆ ಸರಿಯಾದ ಸಮಯಕ್ಕೆ ಬಂದರೂ, ಕೆಲವೊಮ್ಮೆ ಗೈರುಹಾಜರಿ ಹಾಕುತ್ತಾರೆ. ಪ್ರಶ್ನಿಸಿದ ಕೆಲವರಿಗೆ 15 ದಿನಗಳ ಸಂಬಳ ಕಡಿತ ಮಾಡಿದ್ದಾರೆ’ ಎಂದು ದೂರುತ್ತಾರೆ ಡಿಪೊವೊಂದರ ಮಹಿಳಾ ಸಿಬ್ಬಂದಿ.

ಏಕೈಕ ಮಹಿಳಾ ಚಾಲಕಿ

ಈ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇಬ್ಬರು ಮಹಿಳಾ ಚಾಲಕಿಯರಿದ್ದರು. ಒಬ್ಬರು ಬೆಂಗಳೂರಿನ ಪ್ರೇಮಾ. ಮತ್ತೊಬ್ಬರು ಮೈಸೂರಿನ ನಿಂಗಮ್ಮ. ಇಬ್ಬರೂ ನಗರ ಪ್ರದೇಶಗಳಲ್ಲೇ ಬಸ್ ಚಲಾಯಿಸುತ್ತಿದ್ದರು. ಅನಾರೋಗ್ಯದ ಕಾರಣದಿಂದ ನಿಂಗಮ್ಮ ಕೆಲ ವರ್ಷಗಳಿಂದ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಸಿಟಿ ಬಸ್ ಓಡಿಸುವ ಏಕೈಕ ಮಹಿಳಾ ಚಾಲಕಿ ಅಂದರೆ ಪ್ರೇಮಾ ಒಬ್ಬರೇ. ಕೋವಿಡ್‌ ಬಂದ ಮೂರು ತಿಂಗಳು ಮಾತ್ರ ಪ್ರೇಮಾ ಬಸ್‌ ಚಾಲನೆಯಿಂದ ದೂರವಿದ್ದರು. ಜುಲೈನಿಂದ ಕೆಲಸಕ್ಕೆ ಹಾಜರಾಗಿರುವ ಅವರು, ರೂಟ್ ಕೊಟ್ಟಾಗ ಬಸ್ ಓಡಿಸುತ್ತಾರೆ. ಇಲ್ಲದಿದ್ದರೆ ಡಿಪೋದಲ್ಲೇ ಕೆಲಸ ನಿರ್ವಹಿಸುತ್ತಾರೆ.

‘ನಿಗಮ ನಷ್ಟದಲ್ಲಿದೆ. ಆದರೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕೆಲಸದಲ್ಲಿ ವಿನಾಯ್ತಿ ನೀಡಿದ್ದಾರೆ. ನಾನೀಗ ಡಿಪೋದಲ್ಲಿ ಬಸ್ ತೊಳೆಯುವ ಕೆಲಸ ಮಾಡ್ತೀನಿ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡೇ ಕೆಲಸ ಮಾಡ್ತೀನಿ. ಮನೆಗೆ ಹೋದ ತಕ್ಷಣವೇ ಸ್ನಾನ ಮಾಡಿ, ಗೃಹಕೃತ್ಯದಲ್ಲಿ ತೊಡಗಿಕೊಳ್ತೀನಿ’ ಎನ್ನುತ್ತಾರೆ ಚಾಲಕಿ ಪ್ರೇಮಾ.

ಮಕ್ಕಳಿಂದ ದೂರ

‘ಕೋವಿಡ್ ಕಾರಣಕ್ಕಾಗಿ ನಾಲ್ಕು ತಿಂಗಳು ಊರಿಗೇ ಹೋಗಿಲ್ಲ. ಸೋಂಕು ತಗಲುವ ಭಯದಿಂದ ಮನೆಯವರೇ ನನ್ನನ್ನು ದೂರ ಇಟ್ಟಿದ್ದಾರೆ. ಕೆಲಸ ಮಾಡುವ ಜಿಲ್ಲೆಯಲ್ಲೇ ರೂಂ ಮಾಡಿಕೊಂಡು ಇದ್ದೀನಿ. ಗಂಡ, ಮಕ್ಕಳು ಮತ್ತೊಂದು ಜಿಲ್ಲೆಯಲ್ಲಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕೈಗೊಂಡೇ ಕರ್ತವ್ಯ ನಿರ್ವಹಿಸುತ್ತಿರುವೆ. ಆದರೂ, ಪ್ರಯಾಣಿ
ಕರು ಕೆಲವೊಮ್ಮೆ ಮಾಸ್ಕ್ ತೆಗೆದುಬಿಡುತ್ತಾರೆ. ಗ್ಲೌಸ್‌ ಹಾಕೊಂಡು ದುಡ್ಡು ಎಣಿಸಲು ಆಗದು. ಮೊದಲು ಬಳಸಿ
ದಾಗ ಅಮೌಂಟ್ ಹೆಚ್ಚು ಕಮ್ಮಿ ಆಗಿತ್ತು. ಹಾಗಾಗಿ, ಈಗ ಬರಿಗೈಲಿ ದುಡ್ಡು ಪಡೆಯುತ್ತೇನೆ. ಕೆಲವರು
ಕೆಮ್ಮುತ್ತಿರುತ್ತಾರೆ, ಸೀನುತ್ತಾರೆ ಅದು ನೋಟಿಗೂ ಸಿಡಿದಿರುತ್ತದೆ. ಅದನ್ನೇ ನಾವು ಮುಟ್ಟಬೇಕು. ತಕ್ಷಣವೇ ಸ್ಯಾನಿಟೈಸರ್ ಹಾಕಿಕೊಳ್ಳುತ್ತೇನೆ’ ಎಂದವರು ಈಶಾನ್ಯ ಸಾರಿಗೆಯ ಇನ್ನೊಬ್ಬ ಸಿಬ್ಬಂದಿ.

ಕೋವಿಡ್ ಬಂದು ಹೋದರೂ ಭಯ

‘ಜೂನ್‌ನಲ್ಲಿ ಒಂದೇ ದಿನ ಕೆಲಸಕ್ಕೆ ಹೋಗಿದ್ದೆ. ಮರುದಿನವೇ ಸೋಂಕು ಕಾಣಿಸಿಕೊಂಡಿತ್ತು. ಆಗ ಹಜ್‌ಭವನದಲ್ಲಿ ಚಿಕಿತ್ಸೆ ಪಡೆದು, ಮತ್ತೆ 15 ದಿನ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದೆ. ಸಾರಿಗೆ ಸಿಬ್ಬಂದಿ ನಿತ್ಯವೂ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ನನಗೆ ಉಸಿರಾಟದ ತೊಂದರೆ ಹಾಗೂ ಶುಗರ್ ಇದೆ. 25 ವರ್ಷ ಆಯ್ತು ಕಂಡಕ್ಟರ್ ಕೆಲಸಕ್ಕೆ ಸೇರಿ. ನನಗೀಗ 54 ವರ್ಷ, ಇನ್ನೂ ಬಡ್ತಿ ಸಿಕ್ಕಿಲ್ಲ ಅನ್ನುವ ಬೇಸರ ಬಿಟ್ಟರೆ ಬೇರೇನಿಲ್ಲ. ಗಂಡ ಇಲ್ಲ. ಮಕ್ಕಳಿಗೆ ಮದುವೆ ಮಾಡಿದರೆ ಕರ್ತವ್ಯ ಮುಗಿದಂತೆ. ಈಗ ಮತ್ತೆ ಕಂಡಕ್ಟರ್ ಕೆಲಸ ಮಾಡಲು ಭಯವಾಗುತ್ತೆ. ಬೇರೆ ಡ್ಯೂಟಿ ಕೋರಿದ್ದೇನೆ’ ಎಂದರು ಕೋವಿಡ್‌ನಿಂದ ಈಚೆಗೆ ಚೇತರಿಸಿಕೊಂಡಿರುವ ನಿರ್ವಾಹಕಿ.

***

ಆರ್ಥಿಕ ಲಾಭ–ನಷ್ಟದ ಬಗ್ಗೆ ಯೋಚನೆ ಮಾಡದೇ ಸಾರಿಗೆ ಸಿಬ್ಬಂದಿಯ ಹಿತಾಸಕ್ತಿಗೆ ಪೂರಕವಾಗಿ ಸರ್ಕಾರ ಸ್ಪಂದಿಸಬೇಕು

-ಚಂದ್ರಶೇಖರ್ ಆರ್., ಅಧ್ಯಕ್ಷ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ

***

ಮಹಿಳಾ ಸಿಬ್ಬಂದಿ ಮನೆಯೊಳಗೆ, ಹೊರಗೆ ಎರಡೂ ಕಡೆ ದುಡಿಯುತ್ತಾರೆ. ಮುಂಚಿನಂತೆಯೇ ಪಾಳಿ ವ್ಯವಸ್ಥೆಯನ್ನಾದರೂ ಜಾರಿಗೆ ತಂದರೆ ಅನುಕೂಲವಾಗುತ್ತದೆ

-ಚಂಪಕಾವತಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ (ಮಹಿಳಾ ಘಟಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು