ಶನಿವಾರ, ಜನವರಿ 23, 2021
19 °C
5 ಲಕ್ಷ ಜನ ಸೇರುವ ನಿರೀಕ್ಷೆ

ಪಂಚಮಸಾಲಿ ಮೀಸಲಾತಿಗಾಗಿ ಜ.14ರಿಂದ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಕೇಂದ್ರದ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಜ.14ರಿಂದ ಪಾದಯಾತ್ರೆ ನಡೆಸಲಾಗುವುದು’ ಎಂದು ಕೂಡಲಸಂಗಮ ಲಿ‌ಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘700 ಕಿ.ಮೀ.ವರೆಗಿನ ಈ ಪಾದಯಾತ್ರೆ ಒಂದು ತಿಂಗಳು ನಡೆಯಲಿದೆ. ಕೂಡಲಸಂಗಮದಿಂದ ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಸಾಗುವ ಪಾದಯಾತ್ರೆಯ ಕೊನೆಯ ದಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಈ ಸಂದರ್ಭದಲ್ಲಿ ಕನಿಷ್ಠ ಐದು ಲಕ್ಷ ಜನ ಸೇರಲಿದ್ದಾರೆ' ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಅಕ್ಟೋಬರ್‌ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕರೆ ಮಾಡಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದರು. ನ.28ರೊಳಗೆ ಬೇಡಿಕೆಗೆ ಸ್ಪಂದಿಸಬೇಕು ಎಂದು ಗಡುವು ನೀಡಲಾಗಿತ್ತು. ತಪ್ಪಿದರೆ ಪಾದಯಾತ್ರೆ ನಡೆಸಲಾಗುವುದು ಎಂದೂ ಹೇಳಿದ್ದೆವು’ ಎಂದು ಅವರು ಹೇಳಿದರು.

‘ನಮ್ಮ ಸಮಾಜದವರೇ ಮುಖ್ಯಮಂತ್ರಿಯಾಗಿದ್ದಾರೆ. ಈ ಸಂದರ್ಭದಲ್ಲಿಯೇ ನಮ್ಮ ಬೇಡಿಕೆ ಈಡೇರಬೇಕು. ನಾವೇನು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೋರುತ್ತಿದ್ದೇವೆ’ ಎಂದರು.

ನಿಯೋಗ ಭೇಟಿ: ‘ಸರ್ಕಾರದ ನಿಯೋಗ ಶನಿವಾರ (ಜ.9) ಕೂಡಲಸಂಗಮಕ್ಕೆ ಭೇಟಿ ನೀಡಲಿದೆ. ಈ ವೇಳೆ ಸರ್ಕಾರದಿಂದ ಖಚಿತ ಭರವಸೆ ದೊರೆಯುವ ವಿಶ್ವಾಸವಿದೆ. ಮಹತ್ವದ ಸಭೆಯೂ ನಡೆಯಲಿದೆ. ಸಭೆ ಸಮಾಧಾನ ತರದಿದ್ದರೆ ಪಾದಯಾತ್ರೆ ನಡೆಸುವುದು ನಿಶ್ಚಿತ' ಎಂದು ಹೇಳಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಘಟಕದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು