ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ, ವೀರಶೈವರೆಲ್ಲ ಒಂದೇ: 3 ಬಿಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ

‘ಪ್ರವರ್ಗ 3ಬಿ’ ಅಡಿ 22 ಉಪಜಾತಿ ಸೇರಿಸಲು ಸರ್ಕಾರಕ್ಕೆ ಸಲಹೆ
Last Updated 27 ಮಾರ್ಚ್ 2023, 19:33 IST
ಅಕ್ಷರ ಗಾತ್ರ

ಬೆಂಗಳೂರು: ಮೀಸಲಾತಿಯಿಂದ ವಂಚಿತರಾಗುತ್ತಿದ್ದ 22 ಲಿಂಗಾಯತ/ವೀರಶೈವ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ‘ಪ್ರವರ್ಗ 3ಬಿ’ ಅಡಿ ಸೇರಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲಹೆ ನೀಡಿದೆ. ಆದರೆ, ಈ ಪೈಕಿ ಮೂರು (ಕುಡುಒಕ್ಕಲಿಗ/ಕುಡು ಒಕ್ಕಲ, ನೊಳಂಬ ಮತ್ತು ಲಾಳಗೊಂಡ) ಉಪಜಾತಿಗಳನ್ನು ಮಾತ್ರ ಹೊಸದಾಗಿ ಸೃಜಿಸಿರುವ ‘2ಡಿ’ಗೆ ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‘ಪ್ರವರ್ಗ 3ಬಿ’ಗೆ ನೀಡಿದ್ದ ಶೇ 5ರ ಮೀಸಲಾತಿ ಪ್ರಮಾಣವನ್ನು ಶುಕ್ರವಾರ (ಮಾರ್ಚ್‌ 24) ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಶೇ 7ಕ್ಕೆ ಹೆಚ್ಚಿಸಿರುವ ಸರ್ಕಾರ, ‘ಪ್ರವರ್ಗ 3 ಬಿ’ಯ ಬದಲು ಹೊಸತಾಗಿ ‘2ಡಿ’ ಎಂದು ಮರುನಾಮಕರಣ ಮಾಡಿದೆ.

‘ಲಿಂಗಾಯತ ಮತ್ತು ವೀರಶೈವ ಲಿಂಗಾಯತರಲ್ಲಿ ಹಲವು ಉಪಜಾತಿಗಳಿವೆ. ಕೆಲವು ಈಗಾಗಲೇ ‘ಪ್ರವರ್ಗ 3ಬಿ’ ಅಡಿ ಗುರುತಿಸಲ್ಪಟ್ಟಿದೆ. ಅದೇ ಸಮುದಾಯದ ಕೆಲ ಉಪ ಜಾತಿಗಳು ಈ ಪಟ್ಟಿಯಲ್ಲಿ ಸೇರದಿರುವುದರಿಂದ ಈ ಸಮುದಾಯದ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ವಂಚಿತಾಗುತ್ತಿರುವುದರಿಂದ ಈ ಸಲಹೆ ನೀಡಲಾಗಿದೆ’ ಎಂದು ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ದ್ವಿತೀಯ ವರದಿಯಲ್ಲಿ ತಿಳಿಸಿದೆ.

ಈ ಹಿಂದೆ ಕೆಲವು ಉಪ ಜಾತಿಗಳನ್ನು ಪ್ರವರ್ಗ 3ಬಿ ಅಡಿಯಲ್ಲಿ ಸೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ನಂತರ ಆ ಆದೇಶವನ್ನು ಹಿಂಪಡೆದ ಕಾರಣ ಜಾತಿ ಪ್ರಮಾಣಪತ್ರ ದೊರೆಯುತ್ತಿಲ್ಲ ಎಂದು ಹಲವರು ಆಯೋಗದ ಗಮನಕ್ಕೆ ತಂದಿದ್ದರು. ಅಂತಹ ಗೊಂದಲವನ್ನು ಪರಿಹರಿಸುವ ಉದ್ದೇಶದಿಂದ ಈ ಸಲಹೆ ನೀಡಿ, ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ವೀರಶೈವ ಲಿಂಗಾಯತ ಪರಂಪರೆಯಲ್ಲಿರುವವರು ತಮ್ಮ ದಾಖಲಾತಿಗಳಲ್ಲಿ ಹಿಂದೂ ಲಿಂಗಾಯತ, ವೀರಶೈವ ಲಿಂಗಾಯತ, ಹಿಂದೂ ಲಿಂಗವಂತ, ಲಿಂಗಾಯತ ಇತ್ಯಾದಿ ನಮೂದಿಸಿಕೊಂಡಿದ್ದಾರೆ. ಇನ್ನೂ ಕೆಲವರು ವೀರಶೈವ ಲಿಂಗಾಯತ ಹೆಸರಿನ ಜೊತೆಗೆ ತಮ್ಮ ಮೂಲಜಾತಿಯನ್ನೂ ನಮೂದಿಸಿದ್ದಾರೆ. ಆದರೆ, ಮೂಲಜಾತಿ ನಮೂದಿಸಿ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಮೂಲ ಜಾತಿಯು ವೀರಶೈವರ ಉಪಜಾತಿಯಲ್ಲಿ ಇಲ್ಲದೇ ಇರುವುದರಿಂದ ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗದೇ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವೀರಶೈವ ಲಿಂಗಾಯತ ಉಪಜಾತಿಯವರಿಗೆ ತಮ್ಮ ಮೂಲ ಜಾತಿ ಹೆಸರನ್ನು ಒಳಗೊಂಡ ಜಾತಿ ಪ್ರಮಾಣಪತ್ರ ಪಡೆಯಲು ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಸಲಹೆ ನೀಡಲಾಗಿದೆ’ ಎಂದೂ ಆಯೋಗ ವಿವರಿಸಿದೆ.

‘ಎಸ್‌.ಸಿದ್ದಲಿಂಗಯ್ಯ ನೇತೃತ್ವದ ಆಯೋಗ 2005ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ 19 ಉಪಜಾತಿಗಳನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಸಲಹೆ ನೀಡಿತ್ತು. 2009ರ ಜ. 27ರಂದು ಈ 19 ಉಪಜಾತಿಗಳನ್ನು ‘ಪ್ರವರ್ಗ 3ಬಿ’ ಅಡಿಯಲ್ಲಿ ಸೇರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಒಂದು ತಿಂಗಳ ಬಳಿಕ (ಫೆ. 28), ವೀರಶೈವ ಪಂಚಮಸಾಲಿ ಎಂಬ ಉಪಜಾತಿ ಹೊರತುಪಡಿಸಿ ಉಳಿದ ಉಪಜಾತಿಗಳ ಸೇರ್ಪಡೆ ಆದೇಶವನ್ನು ಹಿಂಪಡೆದಿತ್ತು. ಆ ಬಳಿಕ, ಲಿಂಗಾಯತ ವೀರಶೈವ ಉಪಜಾತಿಗಳಾದ ಕುಡುಒಕ್ಕಲಿಗ, ಆದಿಬಣಜಿಗ, ನೊಳಂಬ, ಮಲ್ಲವ (ಮಲೆಗೌಡ), ಲಿಂಗಾಯತ ರಡ್ಡಿ (ಶೈವರಡ್ಡಿ), ಗೌಡ ಲಿಂಗಾಯತ, ಶಿವಸಿಂಪಿ, ಬಣಗಾರ, ಶಿವಚಾರ ನಗರ್ತ ಜಾತಿಯವರು ಸಲ್ಲಿಸಿದ ಮನವಿಗಳ ಮೇಲೆ ಬಹಿರಂಗ ವಿಚಾರಣೆ ನಡೆಸಿ, ದಾಖಲಾತಿಗಳನ್ನು ಸಂಗ್ರಹಿಸಿ ಈ ಉಪಜಾತಿಗಳನ್ನೂ ‘ಪ್ರವರ್ಗ 3ಬಿ’ ಅಡಿ ಸೇರಿಸುವಂತೆ ಸಲಹೆ ನೀಡಲಾಗಿದೆ’ ಎಂದೂ ವರದಿಯಲ್ಲಿದೆ.

‘ಪ್ರೊ. ರವಿವರ್ಮಕುಮಾರ್‌ ನೇತೃತ್ವದ ಆಯೋಗ 2000ದಲ್ಲಿ 71 ಸಲಹೆಗಳಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ವರದಿಯಲ್ಲಿಯೂ ಎಲ್ಲಾ ವೀರಶೈವ ಲಿಂಗಾಯತ ಉಪ ಜಾತಿಗಳನ್ನು ಒಂದೇ ಪ್ರವರ್ಗದ ಅಡಿಯಲ್ಲಿ ತರುವಂತೆ ಸಲಹೆ ನೀಡಲಾಗಿತ್ತು. ಈ ಎರಡೂ ವರದಿಗಳನ್ನೂ ಗಣನೆಗೆ ತೆಗೆದುಕೊಂಡು, ಲಿಂಗಾಯತ, ವೀರಶೈವ ಪರಂಪರೆಯನ್ನು ಅನುಸರಿಸುತ್ತಿರುವುದನ್ನು ದೃಢೀಕರಿಸಿಕೊಂಡು ಈ ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಸೇರಿಸುವಂತೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು’ ಎಂದೂ ವರದಿಯಲ್ಲಿದೆ.

22 ಲಿಂಗಾಯತ/ವೀರಶೈವ ಉಪ ಜಾತಿ

1. ಕುಡುಒಕ್ಕಲಿಗ/ಕುಡುಒಕ್ಕಲ 2. ಆದಿಬಣಜಿಗ, 3. ನೊಳಂಬ, 4.ಮಲ್ಲವ/ಮಲೆಗೌಡ, 5. ಲಿಂಗಾಯತ ರಡ್ಡಿ/ಶೈವರಡ್ಡಿ, 6. ಗೌಡ ಲಿಂಗಾಯತ, 7. ಶಿವಸಿಂಪಿ, 8. ಬಣಗಾರ, 9. ಶಿವಚಾರ ನಗರ್ತ, 10. ಲಾಳಗೊಂಡ,11. ಹೂಗಾರ, 12. ಜಂಗಮ, 13. ಬೇಡುವ ಜಂಗಮ, 14. ಬಣಜಿಗ,15. ಗಾಣಿಗ, 16. ನಗರ್ತ, 17. ಆದಿ ವೀರಶೈವ, 18. ಕುರುಹಿನಶೆಟ್ಟ/
ನೇಯ್ಗೆ/ನೇಕಾರ/ಜಾಡ, 19. ರೆಡ್ಡಿ, 20. ಸಾದರ, 21. ಆರಾಧ್ಯ, 22. ಗುರುವ/ಗುರವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT