ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌| ಲಾಕ್‌ಡೌನ್‌ ಇನ್ನಷ್ಟು ಸಡಿಲ: ಇಂದಿನಿಂದ ಚಿತ್ರಮಂದಿರಗಳು ಶುರು

ಲಾಕ್‌ಡೌನ್‌ ಇನ್ನಷ್ಟು ಸಡಿಲ: ಇದೇ 26ರಿಂದ ಪದವಿ ತರಗತಿ ಆರಂಭಕ್ಕೆ ಹಸಿರು ನಿಶಾನೆ
Last Updated 18 ಜುಲೈ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಿಸಿದ್ದು, ಸೋಮವಾರದಿಂದಲೇ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಿಸಲು ಮತ್ತು ಇದೇ 26ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಒಪ್ಪಿಗೆ ನೀಡಿದೆ.

ಕೋವಿಡ್‌ ನಿಯಂತ್ರಣ ಮತ್ತು ಲಾಕ್‌ಡೌನ್‌ ಸಡಿಲಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸದಲ್ಲಿ ಭಾನುವಾರ ನಡೆದ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಉನ್ನತಮಟ್ಟದಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಬಳಿಕ ಅದಕ್ಕೆ ಪೂರಕವಾಗಿ ನಿರ್ಬಂಧಗಳನ್ನು ಸಡಿಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶವನ್ನೂ ಹೊರಡಿಸಿದ್ದಾರೆ.

ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ರಂಗಮಂದಿರಗಳು, ಸಭಾಂಗಣಗಳಲ್ಲಿ ಸಾಮರ್ಥ್ಯದ ಶೇಕಡ 50 ರಷ್ಟು ವೀಕ್ಷಕರಿಗೆ ಅವಕಾಶ ಕಲ್ಪಿಸಿ ಸೋಮವಾರದಿಂದಲೇ ಪ್ರದರ್ಶನ ಆರಂಭಿಸಬಹುದು. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಹೊರಡಿಸಿರುವ ನಿಗದಿತ ಕಾರ್ಯನಿರ್ವಹಣಾ ಪ್ರಕ್ರಿಯೆಗಳನ್ನು (ಎಸ್‌ಒಪಿ) ಆಧರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತರಗತಿ ಆರಂಭಕ್ಕೆ ಒಪ್ಪಿಗೆ: 2020ರಲ್ಲಿ ಜಾರಿಯಾದ ಮೊದಲ ಲಾಕ್‌ಡೌನ್‌ಸಮಯದಿಂದಲೇ ಬಹುತೇಕ ಶಾಲಾ, ಕಾಲೇಜುಗಳು ಆನ್‌ಲೈನ್‌ ತರಗತಿಗಳ ಮೂಲಕವೇ ನಡೆಯುತ್ತಿವೆ. ಕೆಲವು ಹಂತ ಮತ್ತು ಕೋರ್ಸ್‌ಗಳಿಗೆ ಸೀಮಿತವಾಗಿ ಅಲ್ಪಾವಧಿಗೆ ಭೌತಿಕ ತರಗತಿಗಳು ನಡೆ ದಿದ್ದವು. ಕೋವಿಡ್‌ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖ ವಾಗಿರುವುದರಿಂದ ಜುಲೈ 26 ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.

ತರಗತಿ ಆರಂಭಕ್ಕೂ ಮುನ್ನ ಸಂಬಂಧಿಸಿದ ಇಲಾಖೆಗಳು ಹೊರಡಿಸಿ ರುವ ಸುತ್ತೋಲೆಯ ಪ್ರಕಾರ ಸಾಮಾನ್ಯ ಕಾರ್ಯನಿರ್ವಹಣಾ ವಿಧಾನ ಮತ್ತು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಾತ್ರ ಕಾಲೇಜುಗಳಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೀರ್ಘಾವಧಿಯ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳೂ ಸೇರಿದಂತೆ ಎಲ್ಲ ಬಗೆಯ ಕೌಶಲ ಅಭಿವೃದ್ಧಿ ತರಬೇತಿ ಸಂಸ್ಥೆಗಳು ಜುಲೈ 26 ರಿಂದ ಭೌತಿಕ ತರಗತಿ ಆರಂಭಿಸಲು ಅವಕಾಶ ನೀಡಲಾಗಿದೆ. ಪದವಿ ತರಗತಿಗಳ ಆರಂಭಕ್ಕೆ ಅನ್ವಯವಾಗುವ ಎಲ್ಲ ಷರತ್ತು ಹಾಗೂ ಮಾರ್ಗಸೂಚಿಗಳು ಈ ತರಗತಿಗಳಿಗೂ ಅನ್ವಯಿಸುತ್ತವೆ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಕಣ್ಗಾವಲು ಮುಂದುವರಿಕೆ: ಮಹಾ ರಾಷ್ಟ್ರ ಮತ್ತು ಕೇರಳದಿಂದ ರಾಜ್ಯಕ್ಕೆ ಬರುವವರಿಗೆ 72 ಗಂಟೆಗಳಿಗೂ ಮುನ್ನ ಆರ್‌ಟಿ–ಪಿಸಿಆರ್‌ ವಿಧಾನದಲ್ಲಿ ಪಡೆದ ‘ಕೋವಿಡ್‌ ನೆಗೆಟಿವ್‌’ ವರದಿ ಹಾಜರುಪಡಿಸಿರುವುದನ್ನು ಕಡ್ಡಾಯಗೊ ಳಿಸಿರುವ ಆದೇಶವನ್ನು ಮುಂದುವರಿಸ
ಲಾಗಿದೆ. ಅಂತರ ರಾಜ್ಯ ಗಡಿಗಳಲ್ಲಿ ಕಣ್ಗಾವಲು ಮುಂದುವರಿಯಲಿದೆ.

ಪಬ್‌ಗಳನ್ನು ತೆರೆಯುವುದರ ಮೇಲಿನ ನಿಷೇಧ ಮುಂದುವರಿಯಲಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳನ್ನೂ ನಡೆಸುವಂತಿಲ್ಲ. ಕ್ರೀಡಾಕೂಟಗಳಲ್ಲಿ ಪ್ರೇಕ್ಷಕರ ಹಾಜರಿ ನಿರ್ಬಂಧವೂ ಮುಂದುವರಿಯಲಿದೆ.

ರಾತ್ರಿ ಕರ್ಫ್ಯೂ ಸಡಿಲಿಕೆ

ರಾತ್ರಿ ಕರ್ಫ್ಯೂ ಅವಧಿಯನ್ನು ಸಡಿಲಿಕೆ ಮಾಡಲಾಗಿದೆ. ಸೋಮವಾರದಿಂದ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೆ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೂ ಅವಕಾಶ ದೊರೆಯಲಿದೆ.

ಸಭೆಗೆ ಮೂವರು ಸಚಿವರ ಗೈರು

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಕೋವಿಡ್‌ ನಿಯಂತ್ರಣ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯವರ ನೇತೃತ್ವದ ಸಭೆಗೆ ಗೈರಾಗಿದ್ದರು.

ಶೆಟ್ಟರ್‌ ಗುಜರಾತ್‌ ಪ್ರವಾಸದಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಕೂಡ ಶನಿವಾರ ಹೂವಿನ ಹಡಗಲಿಗೆ ತೆರಳಿದ್ದರು ಈ ಕಾರಣದಿಂದ ಸಭೆಗೆ ಬಂದಿರಲಿಲ್ಲ. ಸುಧಾಕರ್‌ ಖಾಸಗಿ ಕಾರ್ಯಕ್ರಮದ ಕಾರಣ ನೀಡಿ ಸಭೆಯಿಂದ ದೂರ ಉಳಿದಿದ್ದರು.

***

ಆರೋಗ್ಯ ಕ್ಷೇತ್ರದ ತಜ್ಞರ ಸಲಹೆಯನ್ನು ಆಧರಿಸಿ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿ, ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಬರಲಾಗಿದೆ

- ಪಿ. ರವಿಕುಮಾರ್‌, ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT