ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರಕ್ಕಾಗಿ ದೊಡ್ಡ ಖಾತೆ ಬೇಕೆ: ರೇಣುಕಾಚಾರ್ಯ ಪ್ರಶ್ನೆ

‘ತೆಂಗಿನ ಗಿಡ ನೆಟ್ಟವರು ಯಾರೋ ಎಳನೀರು ಯಾರಿಗೋ’
Last Updated 14 ಜನವರಿ 2022, 16:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲವು ಸಚಿವರು ಎರಡು– ಮೂರು ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಕೆಲವರು ನಿರ್ದಿಷ್ಟ ಖಾತೆಗೆ ಬೇಡಿಕೆ ಪಟ್ಟು ಹಿಡಿದಿದ್ದಾರೆ. ವ್ಯಾಪಾರಕ್ಕಾಗಿ ದೊಡ್ಡ ಸಚಿವ ಸ್ಥಾನ ಬೇಕಾ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಸಚಿವ ಸ್ಥಾನ ನೀಡುವುದು ಗೌರವಕ್ಕಾಗಿ. ದೊಡ್ಡ ಖಾತೆಯೇ ಏಕೆ ಬೇಕು? ಕೆಲವು ಸಚಿವರು ಬಹಳ ಉದ್ಧಟತನ ಮಾಡುತ್ತಿದ್ದಾರೆ. ಅಂತಹವರಿಂದ ಸರ್ಕಾರದ ವರ್ಚಸ್ಸಿಗೆ ಹಾನಿಯಾಗುತ್ತಿದೆ’ ಎಂದು ತಮ್ಮದೇ ಪಕ್ಷದ ಸರ್ಕಾರದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಪಕ್ಷಕ್ಕಾಗಿ ಹಮಾಲಿ ಕೆಲಸ ಮಾಡಿದವರು ನಾವು. ನಮ್ಮ ಪೂರ್ವಜರು ತೆಂಗಿನ ಗಿಡ ನೆಟ್ಟಿದ್ದರು. ಬೇರೆಯವರು ಈಗ ಎಳನೀರು ಕುಡಿಯುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಸಂಘಟನೆಯಿಂದ ಕೆಲಸ ಮಾಡಲಾಗಿತ್ತು. ಆದರೆ, ಈಗ ಬೇರೆಯವರು ಅಧಿಕಾರ ಅನುಭವಿಸುತ್ತಿದ್ದಾರೆ’ ಎಂದರು.

ಬಿಜೆಪಿಯ ಕೆಲವು ಶಾಸಕರು ಸಭೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ‘ಸಮಾನ ಮನಸ್ಕ ಶಾಸಕರು ಸೇರಿದ್ದೆವು. ನನ್ನ ನೇತೃತ್ವದಲ್ಲಿ ಸಭೆ ನಡೆದಿದೆ ಎಂದೇನೂ ಇಲ್ಲ. ಪಕ್ಷ ಮತ್ತು ಮುಖ್ಯಮಂತ್ರಿಯವರಿಗೆ ಮುಜುಗರ ಆಗಬಾರದು ಎಂಬ ಭಾವನೆ ಹೊಂದಿರುವ ಶಾಸಕರು ಸೇರಿ ಚರ್ಚಿಸಿದ್ದೇವೆ’ ಎಂದು ಹೇಳಿದರು.

‘ಅವಧಿ ಪೂರ್ಣಗೊಳ್ಳುವವರೆಗೂ ಸ್ಥಿರ ಸರ್ಕಾರ ನೀಡಬೇಕು ಎಂಬುದು ನಮ್ಮ ಆಸೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅದರ ವಿರುದ್ಧ ನಿಲ್ಲುತ್ತೇನೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರು ಆನಂದ್‌ ಸಿಂಗ್‌. ನಿಮ್ಮ ಪರವಾಗಿ ಇದ್ದೇವೆ ಎಂದು ಅವರಿಗೆ ನಾವೆಲ್ಲರೂ ಹೇಳಿದ್ದೇವೆ’ ಎಂದರು.

‘ಕ್ಷೇತ್ರದ ಜನರು ಮೂರು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅಬಕಾರಿ ಖಾತೆ ನೀಡಿದ್ದಾಗ ಉತ್ತಮವಾಗಿ ನಿಭಾಯಿಸಿದ್ದೇನೆ. ಕಳೆದ ವಾರ ನಡೆದ ಘಟನೆ ನನಗೆ ನೋವು ತಂದಿದೆ. ನಾವು ಹಿರಿಯರಲ್ಲವೆ? ನಮಗಿಂತಲೂ ಹಿರಿಯರು ಇಲ್ಲವೆ? ಈಗ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ಮುಖ್ಯಮಂತ್ರಿಯವರು ಶಾಸಕಾಂಗ ಪಕ್ಷದ ಸಭೆ ಕರೆದಾಗ ನೇರವಾಗಿ ಅಲ್ಲಿಯೇ ಹೇಳುತ್ತೇನೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಯವರ ಬಳಿಯೂ ಹೇಳುತ್ತೇನೆ’ ಎಂದು ಹೇಳಿದರು.

ಸಂಪುಟ ಬದಲಾಗಲಿದೆ: ‘ರಾಜ್ಯ ರಾಜಕೀಯಲ್ಲಿ ಬದಲಾವಣೆ ಆಗಲಿದೆ’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ಕೇಳಿದಾಗ, ‘ಮುಖ್ಯಮಂತ್ರಿಯವರ ಹೊರತಾಗಿ ಉಳಿದ ಎಲ್ಲ ಸಚಿವರ ಬದಲಾವಣೆಯೂ ನಿಶ್ಚಿತ. ಅದೇ ಮುಖಗಳನ್ನು ಜನರು ಎಷ್ಟು ಬಾರಿ ನೋಡುತ್ತಾರೆ. ಗುಜರಾತ್‌ ಮಾದರಿಯಲ್ಲಿ ಬದಲಾವಣೆ ಆಗಲಿ’ ಎಂದರು.

‘ಕೊಠಡಿ, ಕುರ್ಚಿಗೆ ಸೀಮಿತ’

‘ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಕೊಠಡಿ ಮತ್ತು ಕುರ್ಚಿ ಬಿಟ್ಟರೆ ಏನೂ ಇಲ್ಲ. ಹೋದ ಪುಟ್ಟ, ಬಂದಾ ಪುಟ್ಟ ಎಂಬಂತಾಗಿದೆ ಈ ಹುದ್ದೆ ಸ್ಥಿತಿ. ನನಗೆ ಈ ಹುದ್ದೆ ಇದ್ದರೂ, ಇಲ್ಲದಿದ್ದರೂ ಒಂದೇ’ ಎಂದು ಎಂ.ಪಿ. ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT