ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಂಡಾಲ್‌ ಆರ್ಡರ್‌ ಕೊಡಿಸದಿದ್ದಕ್ಕೆ ಪುರುಷೋತ್ತಮ ಬಿಳಿಮಲೆ ಟೀಕೆ: ಮಹೇಶ ಜೋಶಿ

Last Updated 29 ಡಿಸೆಂಬರ್ 2022, 15:56 IST
ಅಕ್ಷರ ಗಾತ್ರ

ಹಾವೇರಿ:ಲೇಖಕ ಪುರುಷೋತ್ತಮ ಬಿಳಿಮಲೆ ಅವರು ದೂರವಾಣಿ ಕರೆ ಮಾಡಿ, ‘ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಂಡಾಲ್‌ (ಪೆಂಡಾಲ್‌)ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಕೊಡಿಸಿ’ ಎಂದು ಕೇಳಿದ್ದರು. ಅದಕ್ಕೆ ನಾನು ‘ಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಅದು ನನ್ನ ಕ್ಷೇತ್ರವಲ್ಲ’ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು,ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೇನೆ ಎಂದು ಒಪ್ಪಿಕೊಂಡಿದ್ದ ಬಿಳಿಮಲೆ ಅವರು ಕೊನೇ ಕ್ಷಣದಲ್ಲಿ ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಂದೇಶ ಕಳುಹಿಸಿದ್ದಾರೆ. ಹಾಗಾದರೆ, ಜ.8ರಂದು ನಡೆಯುವ ಜನಸಾಹಿತ್ಯ ಸಮ್ಮೇಳನ ನಡೆಸಲು ಆರೋಗ್ಯ ಬಂತಾ? ಸ್ವಂತ ಲಾಭ, ಸ್ವಹಿತಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಬಿಳಿಮಲೆಯವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರೂ ಎದುರಿಸಲು ಸಿದ್ಧವಿದ್ದೇನೆ ಎಂದು ಜೋಶಿ ಹೇಳಿದರು.

ಪುರುಷೋತ್ತಮ ಬಿಳಿಮಲೆ, ಬಿ.ಎಂ.ಹನೀಫ್‌, ಆರ್‌.ಜಿ.ಹಳ್ಳಿ ನಾಗರಾಜ್‌ ಈ ಮೂವರು ಜನಸಾಹಿತ್ಯ ಸಮ್ಮೇಳನದ ಮುಂದಾಳತ್ವ ವಹಿಸಿದ್ದಾರೆ. ಇವರು ವಾಸ್ತವ ಸಂಗತಿ ತಿಳಿದುಕೊಳ್ಳದೆ, ಪೂರ್ವಗ್ರಹ ಪೀಡಿತರಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಕಲೆ ಮತ್ತು ಪ್ರತಿಭೆಯನ್ನು ಜಾತಿ–ಧರ್ಮದ ದುರ್ಬೀನುನಿಂದ ನೋಡಬಾರದು. ಮನೋರೋಗದಿಂದ ನರಳುತ್ತಿರುವ ಪ್ರಗತಿಪರ ಚಿಂತಕರು ಅದರಿಂದ ಹೊರಬರಬೇಕು ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಕಪೋಲಕಲ್ಪಿತ ಸಂಗತಿಯನ್ನು ಹರಡಿ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೃತ್ಯ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿ ಕನ್ನಡದ ಹಬ್ಬದಲ್ಲಿ ಧರ್ಮ–ಧರ್ಮಗಳ ನಡುವೆ ಕಿಚ್ಚು ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನ ಜಾತಿ ಮತ್ತು ಧರ್ಮಗಳನ್ನು ಮೀರಿದ ಸಮ್ಮೇಳನವಾಗಿದ್ದು, ಕನ್ನಡವೇ ಇಲ್ಲಿ ಮಾನದಂಡವಾಗಿದೆ ಎಂದು ತಿಳಿಸಿದರು.

ನಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ. ನನಗಿಂತ ಜಾತ್ಯತೀತ ವ್ಯಕ್ತಿ ಬೇಕಾ? ಯಾರೂ ದ್ವೇಷ ಬಿತ್ತುವ ಕೆಲಸ ಮಾಡಬೇಡಿ. ಕನ್ನಡ ಹಬ್ಬವನ್ನು ಹಾಳು ಮಾಡಬೇಡಿ. ಕನ್ನಡದ ಅಸ್ಮಿತೆಯನ್ನು ಧ್ವಂಸ ಮಾಡುವವರನ್ನು ಕನ್ನಡಿಗರು ದೂರವಿಡಬೇಕು ಎಂದು ಜೋಶಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT