ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಜಿಲೆಟಿನ್‌ ಕಡ್ಡಿಗಾಗಿ ಹುಡುಕಾಟ

Last Updated 24 ಫೆಬ್ರುವರಿ 2021, 20:20 IST
ಅಕ್ಷರ ಗಾತ್ರ

ಮಂಡ್ಯ: ಹುಣಸೋಡಿನಲ್ಲಿ ನಡೆದ ಸ್ಫೋಟ ಪ್ರಕರಣದ ನಂತರ, ಜಿಲ್ಲೆಯಾದ್ಯಂತ ಅಕ್ರಮ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಣಿ ಕಂಪನಿಗಳ ಬಳಿ ಅಪಾರ ಪ್ರಮಾಣದ ಜಿಲೆಟಿನ್‌ ಕಡ್ಡಿ ಹಾಗೂ ಇತರ ಸ್ಫೋಟಕ ಸಂಗ್ರಹವಿದೆ ಎಂಬ ಮಾಹಿತಿ ಇದ್ದು, ಪೊಲೀಸರು ಸ್ಫೋಟಕಗಳ ಹುಡುಕಾಟ ನಡೆಸಿದ್ದಾರೆ.

ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ ಸೇರಿ ಶ್ರೀರಂಗಪಟ್ಟಣ, ನಾಗಮಂಗಲ ತಾಲ್ಲೂಕಿನ ಕಲ್ಲು ಗಣಿ ಪ್ರದೇಶಗಳಲ್ಲಿ ಜಿಲೆಟಿನ್‌ ಕಡ್ಡಿಗಳು ರಸ್ತೆಯಲ್ಲೂ ಚೆಲ್ಲಾಡುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಈಚೆಗೆ ಜಿಲೆಟಿನ್‌ ಸ್ಫೋಟಗೊಳ್ಳುತ್ತಿರುವ ಕಾರಣ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಫೋಟಕಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

‘ಗಣಿ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು ಅಕ್ರಮ ಗಣಿ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ. ಶಿವಮೊಗ್ಗ ಘಟನೆಯ ನಂತರ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಅವರಿಗೆ ಸಹಕಾರ ನೀಡುತ್ತಿದ್ದೇವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ತಿಳಿಸಿದರು.

ಮಧ್ಯಂತರ ತಡೆಯಾಜ್ಞೆ: ಗಣಿಗಾರಿಕೆ ನಿಷೇಧ ಆದೇಶದ ವಿರುದ್ಧ ಕಾನೂನುಬದ್ಧವಾಗಿ ಅನುಮತಿ ಪಡೆದ ಕಲ್ಲು ಗಣಿ ಮಾಲೀಕರು, ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

‘ಮಾರ್ಚ್‌ 1ರಂದು ಅಂತಿಮ ಆದೇಶ ಬರುವ ನಿರೀಕ್ಷೆ ಇದೆ. ಗಣಿ ಚಟುವಟಿಕೆಗೆ ಹಾಗೂ ಗುತ್ತಿಗೆ ವಿಸ್ತರಣೆಗೂ ಮಾಲೀಕರು ಒತ್ತಾಯಿಸುತ್ತಿದ್ದು, ಅಂತಿಮ ಆದೇಶದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ಡಿಬಿಎಲ್‌ಸಿಗೆ ₹ 21 ಕೋಟಿ ದಂಡ

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ ನಡೆಸುತ್ತಿರುವ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ (ಡಿಬಿಎಲ್‌ಸಿ) ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದು ಸಾಬೀತಾಗಿದ್ದರಿಂದ, ಕಂಪನಿಗೆ ₹ 21 ಕೋಟಿ ದಂಡ ವಿಧಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಸ್ಥಳಕ್ಕೆ ಭೇಟಿ ನೀಡಿ, ಮರುಸಮೀಕ್ಷೆಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಮರು ಸಮೀಕ್ಷೆ ನಡೆಯುತ್ತಿದೆ.

ಜಿಲೆಟಿನ್‌ ಸಾಗಣೆ, ಸಂಗ್ರಹಕ್ಕೆ ನಿರ್ಬಂಧ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲೂ ಬಿಳಿ ಕಲ್ಲು ಕ್ವಾರಿಗಳ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳು ನಿಗಾ ಇಟ್ಟಿದ್ದು, ಎಲ್ಲ ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ 38 ಬಿಳಿಕಲ್ಲು ಕ್ವಾರಿಗಳಿವೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹನೂರು ತಾಲ್ಲೂಕಿನಲ್ಲಿ ಒಂದು ಕ್ರಷರ್‌ ಹಾಗೂ ಟಾರು ಮಿಶ್ರಣ ಘಟಕವೊಂದು ಪರವಾನಗಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿತ್ತು. ಎರಡನ್ನೂ ಜಪ್ತಿ ಮಾಡಲಾಗಿದೆ.

‘ಜಿಲ್ಲೆಯಲ್ಲಿ ಜಿಲೆಟಿನ್‌ ಸಾಗಾಟ ಹಾಗೂ ಸಂಗ್ರಹಕ್ಕೆ ನಿರ್ಬಂಧ ವಿಧಿಸಲಾಗಿದೆ. ಕ್ವಾರಿ ಮಾಲೀಕರ ಸಭೆ ನಡೆಸಲಾಗಿದ್ದು, ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ’ ಎಂದು ಗಣಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT