ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಶ್ವವಿದ್ಯಾಲಯ: ಏಕಕಾಲದಲ್ಲಿ ಎರಡು ಪದವಿ ಕಲಿಕೆಗೆ ಅವಕಾಶ

ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ * ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ
Last Updated 27 ಸೆಪ್ಟೆಂಬರ್ 2022, 15:56 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ (2023–24) ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆಯಲು ಸಾಧ್ಯವಾಗಲಿದೆ. ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿರುವಂತೆಕಲಿಕೆಯ ಅವಕಾಶಗಳನ್ನು ಹೆಚ್ಚಿಸಬೇಕು ಎಂಬ ಪ್ರಸ್ತಾವದನ್ವಯ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಮಾರ್ಗಸೂಚಿಗಳನ್ವಯ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿ ಪಡೆಯುವುದಕ್ಕೆ ಮಂಗಳೂರು ವಿಶ್ವವಿದ್ಯಾಲಯವೂ ಅವಕಾಶ ಕಲ್ಪಿಸಲಿದೆ.

ಏಕಕಾಲದಲ್ಲಿ ಎರಡು ಪದವಿ ಪಡೆಯುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳಗೆವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಯಿತು.

ಅನುಮೋದನೆಗೊಂಡ ಮಾರ್ಗಸೂಚಿಗಳನ್ವಯ ವಿದ್ಯಾರ್ಥಿಗಳು ಏಕಕಾಲದಲ್ಲಿ ಭೌತಿಕ ತರಗತಿಗಳಿಗೆ ಹಾಜರಾಗುವ ಮೂಲಕ ಎರಡು ಸ್ನಾತಕ ಅಥವಾ ಸ್ನಾತಕೋತ್ತರ ಪದವಿಗಳನ್ನು ಅಥವಾ ಆನ್‌ಲೈನ್‌/ಮುಕ್ತ ಮತ್ತು ದೂರಶಿಕ್ಷಣದ ಕಲಿಕೆಯ ಮೂಲಕವೂ ಏಕಕಾಲಕ್ಕೆ ಕಲಿಯಬಹುದು. ವಿಜ್ಞಾನ, ಸಮಾಜ ವಿಜ್ಞಾನ, ಕಲಾ, ಮಾನವಿಕ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದಂತೆ ಬಹುಶಿಸ್ತೀಯ, ಪರಿಪೂರ್ಣ ಶಿಕ್ಷಣ ಒದಗಿಸುವ ಉದ್ದೇಶದಿಂದ ಏಕಕಾಲಕ್ಕೆ ಎರಡು ಪದವಿ ಗಳಿಸುವುದಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಬಹುಶಿಸ್ತೀಯ ಜಗತ್ತಿನಲ್ಲಿ ಜ್ಞಾನಾರ್ಜನೆಯ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವುದೂ ಇದರ ಉದ್ದೇಶ. ಇದು ವಿದ್ಯಾರ್ಥಿಗಳಿಗೆ ವಿಜ್ಞಾನ, ಸಮಾಜ ವಿಜ್ಞಾನ, ಕಲೆಗಳು, ಮಾನವಿಕ ವಿಷಯಗಳು, ಭಾಷಾ, ವೃತ್ತಿಪರ ಹಾಗೂ ತಾಂತ್ರಿಕ ವಿಷಯಗಳಲ್ಲಿ ಕಲಿಕೆ ಮುಂದುವರಿಸಲು ಅವಕಾಶಗಳನ್ನು ಒದಗಿಸಲಿದೆ.

‘ವಿದ್ಯಾರ್ಥಿಗಳು ಎರಡು ಸ್ನಾತಕ ಪದವಿಗಳನ್ನು, ಎರಡು ಡಿಪ್ಲೊಮಾ, ಎರಡು ಸ್ನಾತಕೋತ್ತರ ಪದವಿಗಳನ್ನು ಅಥವಾ ಸ್ನಾತಕೋತ್ತರ ಪದವಿ ಜೊತೆ ಒಂದು ಸ್ನಾತಕ ಪದವಿಯನ್ನು ಕಲಿಯಬಹುದು. ಆದರೆ ಅವರು ಆಯಾ ಕೋರ್ಸ್‌ನ ಪ್ರವೇಶಾತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ’ ಎಂದು ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ತಿಳಿಸಿದರು.

ಯುಜಿಸಿ ಮಾರ್ಗಸೂಚಿಗಳನ್ವಯ ವಿದ್ಯಾರ್ಥಿನಿಯರು 240 ದಿನಗಳ ಮಾತೃತ್ವ ರಜೆ ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೂ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮಂಗಳೂರು ವಿಶ್ವವಿದ್ಯಾಲಯವು ಬಿ.ಎಸ್ಸಿ (ಬೇಸಿಕ್ಸ್‌/ ಆನರ್ಸ್‌) ಜೈವಿಕ ತಂತ್ರಜ್ಞಾನ (ಬಹುಶಿಸ್ತೀಯ) ಸ್ನಾತಕ ಪದವಿಯನ್ನು ಮಂಗಳಗಂಗೋತ್ರಿಯ ಪ್ರಾಂಗಣದಲ್ಲಿ 2023–24ರಿಂದ ಆರಂಭಿಸಲಿದೆ.ಈ ಪ್ರಾಂಗಣದಲ್ಲಿ ಬಿ.ಎಸ್ಸಿ ಯೋಗ ವಿಜ್ಞಾನ (ಬಹುಶಿಸ್ತೀಯ) ಮತ್ತು ಬಿ.ಎಸ್ಸಿ ಭೂಗೋಳ ವಿಜ್ಞಾನ (ಬಹುಶಿಸ್ತೀಯ) ಪದವಿಗಳನ್ನು ಈ ವರ್ಷದಿಂದಲೇ ಆರಂಭಿಸಿದೆ.

ಮೈಸೂರಿನ ಸಹಜ ಮಾರ್ಗ ಆಧ್ಯಾತ್ಮಿಕ ಪ್ರತಿಷ್ಠಾನದ ‘ಹಾರ್ಟ್‌ಫುಲ್‌ನೆಸ್‌ ಪೀಠ’ ಸ್ಥಾಪನೆಗೆ ಸಂಬಂಧಿಸಿದ ಕರಡು ನಿಯಮಗಳಿಗೂ ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು. ಪ್ರತಿಷ್ಠಾನವು ಈ ಸಲುವಾಗಿ ಈಗಾಗಲೇ ₹ 25 ಲಕ್ಷವನ್ನು ಠೇವಣಿ ಮಾಡಿದೆ.

ಗಣಿತ ಎಂಎಸ್ಸಿ:ಬಿ.ಇ, ಬಿ.ಟೆಕ್‌ ಪದವೀಧರರಿಗೂ ಅವಕಾಶ

ಎಂ.ಎಸ್ಸಿ ಗಣಿತ ಪದವಿಯ ಅರ್ಹತಾ ಮಾನದಂಡಗಳನ್ನು ತಿದ್ದುಪಡಿ ಮಾಡಲಾಗಿದ್ದು, ಮಾನ್ಯತೆ ಪಡೆದ ಯಾವುದೇವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಪದವಿ (ಬಿ.ಇ) ಅಥವಾ ತಂತ್ರಜ್ಞಾನ ಪದವಿ (ಬಿ.ಟೆಕ್‌) ಪಡೆದ ವಿದ್ಯಾರ್ಥಿಗಳೂ ಇನ್ನು ಗಣಿತ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆಯಬಹುದು. ವಿದ್ಯಾರ್ಥಿಗಳು ಗಣಿತ ಎಂಎಸ್ಸಿಗೆ ಪ್ರವೇಶ ಪಡೆಯಲು ಬಿ.ಇ ಅಥವಾ ಬಿ.ಟೆಕ್‌ನ ನಾಲ್ಕು ಸೆಮಿಸ್ಟರ್‌ಗಳಲ್ಲಿ ಗಣಿತವನ್ನು ಒಂದು ವಿಷಯವಾಗಿ ಕಲಿತಿರುವುದು ಹಾಗೂ ಕನಿಷ್ಠ ಶೇ 45 ಅಂಕ ಗಳಿಸಿ ಉತ್ತೀರ್ಣರಾಗಿರುವುದು ಕಡ್ಡಾಯ.

ಶೈಕ್ಷಣಿಕ ಮಂಡಳಿ ಅನುಮೋದನೆ ಪಡೆದ ಪ್ರಸ್ತಾವಗಳು

* ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಎಂಎಸ್ಸಿ ದತ್ತಾಂಶ ವಿಜ್ಞಾನ ಕೋರ್ಸ್‌ ಆರಂಭ (30 ವಿದ್ಯಾರ್ಥಿಗಳಿಗೆ ಪ್ರವೇಶಾತಿ)

* ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಶಿಕ್ಷಣ, ಕಂಪ್ಯೂಟರ್‌ ಆನಿಮೇಷನ್‌ಗೆ ಸಂಬಂಧಿಸಿದ ಬಿ.ಎ ಮತ್ತು ಬಿಎಸ್ಸಿ ಪದವಿ ಆರಂಭ

* ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ ಬಿಗ್‌ ಡೇಟಾ ಅನಾಲಿಟಿಕ್ಸ್‌ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಪ್ರವೇಶಾತಿ 30ಕ್ಕೆ ಹೆಚ್ಚಳ

* ಸೇಂಟ್‌ ಆಗ್ನೆಸ್‌ ಕಾಲೇಜಿನಲ್ಲಿ 2022–23ನೇ ಸಾಲಿನಿಂದ ಎಂಬಿಎ ಮತ್ತು ಎಂಸಿಎ ಪದವಿ ಆರಂಭ (60 ವಿದ್ಯಾರ್ಥಿಗಳಿಗೆ ಪ್ರವೇಶಾತಿ. ಈ ಪ್ರಸ್ತಾವಕ್ಕೆ ಎಐಸಿಟಿಇ ಅನುಮೋದನೆ ಈಗಾಗಲೇ ಸಿಕ್ಕಿದೆ)

* ರೋಶಿನಿನಿಲಯದ ಸ್ಕೂಲ್‌ ಆಫ್‌ ಸೊಷಿಯಲ್ ವರ್ಕ್‌ನಲ್ಲಿ ಬಿ.ಕಾಂ ಪದವಿ ಆರಂಭ (60 ವಿದ್ಯಾರ್ಥಿಗಳಿಗೆ ಪ್ರವೇಶಾತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT