ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ನಡೆಸಲು ಕೇಂದ್ರದ ಮೇಲೆ ಒತ್ತಡ ಹಾಕಿ: ಒತ್ತಾಯ

Last Updated 12 ಜುಲೈ 2021, 14:43 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮೀಣ ಬ್ಯಾಂಕ್‌ಗಳಲ್ಲಿ ನಡೆಯುವ ನೇಮಕಾತಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಪದ್ಧತಿಯನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿಗೂ ಅನ್ವಯಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು ‘ಈ ಬಾರಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲೇ ಪರೀಕ್ಷೆ ನಡೆಸಲು ಐಬಿಪಿಎಸ್‌ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೋದ ವರ್ಷ ಸಂಸತ್ತಿನಲ್ಲಿ ನೀಡಿದ್ದ ಭರವಸೆಗೆ ತದ್ವಿರುದ್ಧವಾದ ನಡೆ ಇದಾಗಿದೆ. ಇದರಿಂದ ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆ ಮತ್ತು ಭಾಷಿಕರಿಗೆ ಅನ್ಯಾಯವಾಗುತ್ತದೆ. ಕೇವಲ ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡುವ ದುರುದ್ದೇಶ ಇದರ ಹಿಂದೆ ಅಡಕವಾಗಿದೆ. ಕೇಂದ್ರ ಸರ್ಕಾರವು ಹೀಗೆ ನಿರಂತರವಾಗಿ ಹಿಂದಿ ಹೇರುತ್ತಿರುವುದು ಖಂಡನಾರ್ಹ’ ಎಂದಿದ್ದಾರೆ.

‘ನಾಡಿನ ವಿವಿಧ ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯ ಹೆಚ್ಚಿದೆ. ಪ್ರಾದೇಶಿಕ ಭಾಷೆ ಬಲ್ಲವರನ್ನೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೇಮಿಸಿಕೊಳ್ಳಬೇಕು ಎಂಬ ನಿಯಮವೂ ಗಾಳಿಗೆ ತೂರಿದಂತಾಗಿದೆ. ನಿರ್ಮಲಾ ಸೀತಾರಾಮನ್‌ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಒಂದರ್ಥದಲ್ಲಿ ಅವರೂ ಕೂಡ ಕನ್ನಡಿಗರೇ. ಹೀಗಿರುವಾಗ ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯವನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ನಿರ್ಮಲಾ ಸೀತಾರಾಮನ್‌ ಅವರಿಗೂ ಪ್ರತ್ಯೇಕ ಪತ್ರ ರವಾನಿಸಿರುವುದಾಗಿ ಮನು ಬಳಿಗಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT