ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲು ಸಚಿವ ವಿ.ಸೋಮಣ್ಣ ಸೂಚನೆ

ಅಧ್ಯಕ್ಷತೆಯಲ್ಲಿ ಸಭೆ; ಕೋವಿಡ್‌ ಪ್ರಕರಣ ಸೊನ್ನೆಗೆ ತರಲು ನಿರ್ದೇಶನ
Last Updated 11 ಜೂನ್ 2021, 14:12 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಹಾಗೂ ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ತರಬೇಕು. ಹೋಂಐಸೋಲೇಷನ್‌ ಬಿಟ್ಟು ಪಾಸಿಟಿವ್‌ ಬಂದವರನ್ನು ಕೋವಿಡ್‌ ಕೇರ್‌ನಲ್ಲಿಯೇ ಉಪಚರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕೊಡಗು ವಿಭಿನ್ನವಾದ ಜಿಲ್ಲೆ. ಇಲ್ಲಿಯೂ ಪ್ರಕರಣಗಳು ಹೆಚ್ಚಾದ ವೇಳೆ, ನನ್ನ ಮನಸ್ಸಿಗೆ ನೋವಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದ ಸಭೆಯಲ್ಲಿ ಸ್ಥಿತಿ ಗದ್ಗಿತನಾಗಿದ್ದೆ. ಕೆಲಸ ಮಾಡದ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಹೊಸ ಅಧೀಕ್ಷಕರ ನೇಮಕವಾಗಿದೆ. ಅವರ ಭರವಸೆಯಿದೆ’ ಎಂದು ಹೇಳಿದರು.

‘ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ಗ್ರಾಮಕ್ಕೆ ತೆರಳಿದಾಗ ಅವರ ಮೇಲೆ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಅಂತಹ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಬೇಕು’ ಎಂದು ಸೂಚನೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಹೋಂಐಸೋಲೇಷನ್‌ ನೆಪದಲ್ಲಿ ಪಾಸಿಟಿವ್‌ ಬಂದವರು ಗ್ರಾಮದಲ್ಲಿ ಓಡಾಟ ನಡೆಸುತ್ತಿದ್ದಾರೆ. ಅಂಥವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಕಾನೂನಿನಲ್ಲಿ ಅದಕ್ಕೆ ಅವಕಾಶವಿದೆ’ ಎಂದು ಹೇಳಿದರು.

‘ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿರುವುದನ್ನು ಬಿಡಬೇಕು. ಒಳ್ಳೆಯ ಕೆಲಸ ಮಾಡಿದರೆ ನಿಮ್ಮ ಹೆಸರನ್ನು ಜನರು, ನಿಮ್ಮ ಅವಧಿ ಮುಗಿದ ನಂತರವೂ ನೆನಪು ಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು.

ಕೋವಿಡ್-19 ನಿಯಂತ್ರಿಸುವಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಸೋಂಕಿತ ಪ್ರಕರಣ ಮತ್ತು ಮರಣ ಪ್ರಮಾಣವನ್ನು ಇನ್ನು ಒಂದು ವಾರದಲ್ಲಿ ಸೊನ್ನೆಗೆ ತರಬೇಕು ಎಂದು ನಿರ್ದೇಶನ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿ ನೇಮಕಗೊಂಡಿರುವ ಸಿಬ್ಬಂದಿಗೆ ಕಾಲ ಕಾಲಕ್ಕೆ ವೇತನ ಪಾವತಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಆ ದಿಸೆಯಲ್ಲಿ ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್ ಅನುದಾನವನ್ನು ಬಳಸಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.

ತಜ್ಞ ವೈದ್ಯರು, ವೈದ್ಯರು, ಶ್ರುಶ್ರೂಷಕರು, ಎಎನ್‍ಎಂಗಳು... ಹೀಗೆ ಹಲವು ಸಿಬ್ಬಂದಿಯನ್ನು ನೇರ ಸಂದರ್ಶನದ ಮೂಲಕ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಕೋವಿಡ್ ಸಂಕಷ್ಟದಿಂದ ಪ್ರತಿಯೊಬ್ಬರೂ ಹೊರಬರಬೇಕಿದೆ. ಸಂಕಷ್ಟದಲ್ಲಿರುವವರನ್ನು ಮೇಲೆತ್ತುವ ಕೆಲಸವಾಗಬೇಕು ಎಂದು ಸಚಿವರು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಮತ್ತಷ್ಟು ಎಚ್ಚರ ವಹಿಸಬೇಕಿದೆ. ‘ವೈದ್ಯರ ನಡೆ ಗ್ರಾಮದ ಕಡೆಗೆ’ ಎಂಬಂತೆ ‘ಶಾಸಕರ ನಡೆ ಹಳ್ಳಿಯ ಕಡೆಗೆ’ ಎಂಬ ಕಾರ್ಯಕ್ರಮದಡಿ ಪ್ರತಿ ಗ್ರಾ.ಪಂ.ಗೆ ಭೇಟಿ ನೀಡಿ ಕಾರ್ಯಪಡೆ ಸಮಿತಿ ಸಭೆ ನಡೆಸಲಾಗಿದೆ. 50 ಮನೆಗಳಿಗೆ ಒಂದರಂತೆ ಕಾರ್ಯಪಡೆ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ‘ಲೈನ್‍ಮನೆಗಳಲ್ಲಿ ವಾಸಿಸುವ ಕೂಲಿಕಾರ್ಮಿಕರು ಹಾಗೂ ಹಾಡಿಗಳಲ್ಲಿ ವಾಸಿಸುವ ಆದಿವಾಸಿಗಳು ಗೃಹ ಸಂಪರ್ಕ ತಡೆಯಲು ಇರಲು ಸಾಧ್ಯವೇ. ಆದ್ದರಿಂದ ಪ್ರತಿಯೊಬ್ಬರನ್ನು ಮನವರಿಕೆ ಮಾಡಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸೇರ್ಪಡೆ ಮಾಡಬೇಕು’ ಎಂದು ಅವರು ಸೂಚಿಸಿದರು.

ನಾಪೋಕ್ಲು ಭಾಗದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಲು ಖಾಸಗಿ ಕ್ಲಿನಿಕ್ ನಡೆಸುವವರು ಕೋವಿಡ್ ನಿಯಮಗಳನ್ನು ಪಾಲಿಸದಿರುವುದೇ ಕಾರಣ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಉತ್ತಮವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ‘ಆಧಾರ್ ಕಾರ್ಡ್ ಇಲ್ಲದವರಿಗೂ ಸಹ ಲಸಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

ಬ್ಯಾಡಗೊಟ್ಟ, ಗೌಡಳ್ಳಿ ಸೇರಿದಂತೆ ಜಿಲ್ಲೆಯ ಹಲವು ಕಡೆ ಬಿಎಸ್‍ಎನ್‍ಎಲ್ ನೆಟ್‍ವರ್ಕ್‌ ಸಂಪರ್ಕ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ‘ಜಿಲ್ಲೆಯ 77 ಗ್ರಾಮಗಳನ್ನು ಸೂಕ್ಷ್ಮ ಗ್ರಾಮಗಳೆಂದು ಗುರುತಿಸಲಾಗಿದೆ. ಆ ದಿಸೆಯಲ್ಲಿ ಗ್ರಾಮಕ್ಕೆ ಒಂದರಂತೆ ಪರಿಹಾರ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಹಾಗೆಯೇ 618 ಜಾನುವಾರುಗಳನ್ನು ಗೋಶಾಲೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ. 10,522 ಕುಟುಂಬಗಳನ್ನು ಸ್ಥಳಾಂತರಿಸಬೇಕಿದೆ’ ಎಂದು ವಿವರಿಸಿದರು.

ಇಲಾಖೆ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ಸೀಮೆಎಣ್ಣೆ ಪೂರೈಕೆ ಸಂಬಂಧಿಸಿದಂತೆ ಮಾಹಿತಿ ನೀಡಿ, ‘ಜಿಲ್ಲೆಗೆ 68,000 ಲೀಟರ್‌ ಸೀಮೆಎಣ್ಣೆ ಪೂರೈಕೆಯಾಗಬೇಕಿದ್ದು, ಇದರಲ್ಲಿ 58,000 ಲೀ. ಸೀಮೆಎಣ್ಣೆ ಪೂರೈಕೆಯಾಗುತ್ತಿದೆ’ ಎಂದು ಸಚಿವರ ಗಮನಕ್ಕೆ ತಂದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT