ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ನಲ್ಲಿ ವಿ.ವಿಗಳ ಸಭೆ ಪ್ರಸಾರಕ್ಕೆ ನಾಳೆ ಚಾಲನೆ: ಅಶ್ವತ್ಥ ನಾರಾಯಣ

ಉನ್ನತ ಶಿಕ್ಷಣ, ಐಟಿ-ಬಿಟಿ, ಕೌಶಲಾಭಿವೃದ್ಧಿ ಇಲಾಖೆಯಲ್ಲಿ ‘ಸುಶಾಸನ ಮಾಸ’: ಸಚಿವ ಅಶ್ವತ್ಥನಾರಾಯಣ
Last Updated 29 ನವೆಂಬರ್ 2022, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾಜಿ ಪ್ರಧಾನಿ ವಾಜಪೇಯಿ ನೆನಪಿನಲ್ಲಿ ಡಿಸೆಂಬರ್ ತಿಂಗಳನ್ನು ‘ಸುಶಾಸನ ಮಾಸ’ವಾಗಿ ಆಚರಿಸುತ್ತಿದ್ದು, ಅದರ ಭಾಗವಾಗಿ ವೆಬ್‌ಸೈಟ್‌ ಮೂಲಕ ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಹಣಕಾಸು ಸಮಿತಿ, ಸಿಂಡಿಕೇಟ್ ಸಭೆಯ ನೇರ ಪ್ರಸಾರ ವ್ಯವಸ್ಥೆಗೆ ಚಾಲನೆ ನೀಡಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ವಾಜಪೇಯಿ ಜನ್ಮದಿನವಾದ ಡಿ. 25ರಂದು ‘ಸುಶಾಸನ ದಿನ’ ಆಚರಿಸಲಾಗುತ್ತಿತ್ತು. ಈ ವರ್ಷ ಡಿಸೆಂಬರ್ ತಿಂಗಳಿಡೀ ‘ಸುಶಾಸನ ಮಾಸ’ವಾಗಿ ಆಚರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ. 1ರಂದು ಚಾಲನೆ ನೀಡಲಿದ್ದಾರೆ’ ಎಂದರು.

‘ವಿಶ್ವವಿದ್ಯಾಲಯಗಳಿಗೆ ಸಂಬಂಧ ಪಟ್ಟ ಎಲ್ಲ ಮಾಹಿತಿಗಳನ್ನು ಡಿ. 10ರೊಳಗೆ ಆಯಾಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ನಿರ್ದೇಶನ ನೀಡಲಾಗಿದೆ. ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಇದನ್ನು ಪಾಲಿಸಬೇಕು. ಶುಲ್ಕ ವಿವರದಿಂದ ಹಿಡಿದು ವಿಶ್ವವಿದ್ಯಾಲಯಗಳಿಗೆ ಮಂಜೂರಾದ ಅನುದಾನದ ಮೊತ್ತ, ಕೈಗೊಂಡಿರುವ ಪ್ರಾಜೆಕ್ಟ್‌ಗಳು, ಬೋಧಕ, ಬೋಧಕೇತರ ಸಿಬ್ಬಂದಿ ಸಂಖ್ಯೆ ಹೀಗೆ ಪ್ರತಿಯೊಂದು ಮಾಹಿತಿಯನ್ನೂ ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು. ಒಂದೊಮ್ಮೆ ಘಟಕ ಕಾಲೇಜುಗಳಲ್ಲಿ ವೆಬ್‌ಸೈಟ್‌ ಇಲ್ಲದಿದ್ದರೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಕೌಶಲಾಭಿವೃದ್ಧಿ ಇಲಾಖೆಯ 'ಸ್ಕಿಲ್ ಕನೆಕ್ಟ್' ಪೋರ್ಟಲ್‌ ಅನ್ನು ಪರಿಷ್ಕರಿಸಲಾಗಿದ್ದು,‌ ಅದನ್ನೂ ಡಿ. 1ರಂದು ಮುಖ್ಯಮಂತ್ರಿ ‌ ಲೋಕಾರ್ಪಣೆ ಮಾಡಲಿದ್ದಾರೆ. ಸ್ವಸಹಾಯ ಗುಂಪುಗಳ ಮಹಿಳೆಯರ ಜೀವನೋಪಾಯ ಸಾಮರ್ಥ್ಯ ವೃದ್ದಿಗಾಗಿ ತಂತ್ರಾಂಶ ಅಳವಡಿಕೆ, ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಕಟ್ಟಡದ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ಬಹು ಕೌಶಲ್ಯ ಕೇಂದ್ರದ ಉದ್ಘಾಟನೆ ಕೂಡಾ ಇದೇ ಸಂದರ್ಭದಲ್ಲಿ ನಡೆಯಲಿದೆ. ಎನ್ಇಪಿ ಅನುಷ್ಠಾನಕ್ಕೆ ಪೂರಕವಾಗಿ ಐದು ವರ್ಷಗಳ ಗುರಿಯಿರಿಸಿ ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಸಿದ್ಧಪಡಿಸಲು ವಿಶ್ವವಿದ್ಯಾಲಯ ಗಳಿಗೆ ಸೂಚಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯಾಗಾರ ಆಯೋಜಿಸಲಿದೆ’ ಎಂದರು.

‌‘ಉಳಿದಂತೆ, ಡಿ. 1ರಿಂದ ಪ್ರತಿದಿನವೂ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪೋಸ್ಟರ್ ರಚನೆ ಸ್ಪರ್ಧೆ, ಉದ್ಯಮಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಗಾರಗಳು, ವಿದ್ವತ್ ಗೋಷ್ಠಿಗಳು ‌ನಡೆಯಲಿವೆ. ಜೊತೆಗೆ, ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT