ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿಗೆ ಕೈಕೊಟ್ಟಿದ್ದರ ಹಿಂದೆ ತಂತ್ರವಿದೆಯೇ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Last Updated 10 ಜನವರಿ 2022, 10:02 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ರಾಜ್ಯ ಬಿಜೆಪಿ ಹರಿಹಾಯ್ದಿದೆ.

ಈ ಕುರಿತು ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕವು, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ, ಮನುಷ್ಯನಿಗೆ ದೇಹ ಸ್ವಾಸ್ಥ್ಯ ಹಾಗೂ ಚಿತ್ತ ಸ್ವಾಸ್ಥ್ಯ ಎರಡು ಮುಖ್ಯ. ಕೋವಿಡ್ ವಿಚಾರದಲ್ಲಿ ನೀವು ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿದ್ದೀರೋ ಅಥವಾ ನಿಮ್ಮ ರಾಷ್ಟ್ರೀಯ ನಾಯಕರೋ?’ ಎಂದು ಪ್ರಶ್ನಿಸಿದೆ.

‘ಮೇಕೆದಾಟು ವಿಚಾರದಲ್ಲಿ ಸುಳ್ಳಿನ ಜಾತ್ರೆ ಹೊರಟಿರುವ ಡಿ.ಕೆ.ಶಿವಕುಮಾರ್‌ ಅವರು ದೇಶದಲ್ಲಿ ಕೋವಿಡ್ ಇಲ್ಲ, ಎಲ್ಲವೂ ಬಿಜೆಪಿ ಸೃಷ್ಟಿ ಎನ್ನುತ್ತಿದ್ದಾರೆ. ಆದರೆ, ಅವರದೇ ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸವಾರಿಗೆ ಹೊರಟಿದೆ. ಹಾಗಾದರೆ ಯಾರ ಮಾತು ಸರಿ?’ ಎಂದು ಬಿಜೆಪಿ ಕೇಳಿದೆ.

‘ಡಿಕೆಶಿಯವರೇ, ಕೋವಿಡ್ ನಿಯಮ ಪಾಲನೆಯೊಂದಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೀರಿ. ಆದರೆ, ಮಾಸ್ಕ್ ಧರಿಸದೇ ನೀವು ಪಾದಯಾತ್ರೆ ನಡೆಸಿದ್ದೀರಿ. ವಿಪರೀತ ಕೆಮ್ಮಿನ ನಡುವೆಯೂ ಕೋವಿಡ್‌ ಪರೀಕ್ಷೆಗೆ ನಿರಾಕರಿಸಿದ್ದೀರಿ. ನೆಲದ ಕಾನೂನಿನ ಬಗ್ಗೆ ನಿಮಗೆ ಕಿಂಚಿತ್ ಗೌರವ ಇದೆಯೇ?’ ಎಂದು ಬಿಜೆಪಿ ಟ್ವೀಟಿಸಿದೆ.

‘ಅಂದ ಹಾಗೆ, ವಿಪಕ್ಷ ನಾಯಕ ಸಿದ್ದರಾಮಯ್ಯನವರೇ, ನಿಮ್ಮ ಆರೋಗ್ಯ ಹೇಗಿದೆ? ನಾವಿಬ್ಬರೇ ನಡೆಯುತ್ತೇವೆ ಎಂದು ಸವಾಲು ಹಾಕಿದ್ದ ನೀವು ನಾಲ್ಕೇ‌ ಕಿ.ಮೀ ನಡೆದು ಸುಸ್ತಾದರೆ ಹೇಗೆ? ಸುಳ್ಳಿನ ಜಾತ್ರೆಯಲ್ಲಿ ಡಿಕೆಶಿ ಅವರಿಗೆ ಅರ್ಧದಲ್ಲೇ ಕೈ ಕೊಟ್ಟಿದ್ದರ ಹಿಂದೆ ನಿಮ್ಮ ಪೂರ್ವ ನಿಯೋಜಿತ ತಂತ್ರವಿದೆಯೇ?’ ಎಂದು ಕೇಸರಿ ಪಕ್ಷವು ಪ್ರಶ್ನಿಸಿದೆ.

‘ಹೋರಾಟದ ಕಿಚ್ಚು ಕಾಂಗ್ರೆಸ್ ಪಕ್ಷಕ್ಕೆ ರಕ್ತಗತವಾಗಿ ಬಂದಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅಬ್ಬರಿಸಿದ್ದಾರೆ‌. ಆದರೆ, ಒಂದು ವೈಜ್ಞಾನಿಕ ಸತ್ಯವನ್ನು ಕಾಂಗ್ರೆಸ್ಸಿಗರು ನೆನಪಿಟ್ಟುಕೊಳ್ಳಬೇಕು. ರಕ್ತಗತವಾಗಿ ಬರುವುದು ಖಾಯಿಲೆ ಮಾತ್ರ. ಹೋರಾಟ ರಕ್ತಗತವೋ ಮತ್ತೊಂದೋ, ಆದರೆ ಕೋವಿಡ್‌ ಮಾತ್ರ ಸುಳ್ಳಿನ ಜಾತ್ರೆ‌ ಮೂಲಕ ಹಬ್ಬುವುದು ನಿಶ್ಚಿತ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT