ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ವ್ಯವಸ್ಥೆ ರದ್ದಾಗದು

ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಭರವಸೆ
Last Updated 2 ಅಕ್ಟೋಬರ್ 2020, 18:28 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಕೃಷಿ ಸಂಬಂಧಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವುದರಿಂದ ಈಗ ಇರುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ. ಅಂತಹ ಯಾವ ಪ್ರಸ್ತಾವವೂ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದರು.

ಶುಕ್ರವಾರ ವಿಕಾಸೌಧದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರೊಂದಿಗೆ ಜಂಟಿ ಪ‍ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸುತ್ತಿರುವ ವಿರೋಧ ಪಕ್ಷಗಳು ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದು ಮಾಡಲಾಗುತ್ತಿದೆ ಎಂಬ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಅದರ ಮೂಲಕ ರೈತರನ್ನು ಎತ್ತಿಕಟ್ಟಲು ಯತ್ನಿಸುತ್ತಿದ್ದಾರೆ. ಬೆಂಬಲ ಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ. ಅದನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ’ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ರದ್ದು ಮಾಡಲಾಗುತ್ತದೆ ಎಂಬ ಆರೋಪದಲ್ಲೂ ಸತ್ಯಾಂಶವಿಲ್ಲ. ಕಾಯ್ದೆಗಳ ತಿದ್ದುಪಡಿಯಲ್ಲಿ ಎಳ್ಳಷ್ಟೂ ರೈತವಿರೋಧ ಅಂಶಗಳಿಲ್ಲ. ಟೀಕಿಸಲು ಅಸ್ತ್ರಗಳು ದೊರೆಯದ ಕಾರಣದಿಂದ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತು 2012ರ ಡಿಸೆಂಬರ್‌ನಲ್ಲಿ ಆಗಿನ ಯುಪಿಎ ಸರ್ಕಾರವೇ ಪ್ರಸ್ತಾಪ ಮಾಡಿತ್ತು ಎಂದು ಹೇಳಿದರು.

ಕೃಷಿ ಅಭಿವೃದ್ಧಿಗೆ ಪೂರಕ: ಬಿ.ಸಿ. ಪಾಟೀಲ್‌ ಮಾತನಾಡಿ, ‘ರಾಜ್ಯದಲ್ಲಿ ಕೃಷಿಯನ್ನು ಉದ್ದಿಮೆಯ ಸ್ವರೂಪದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ತಿದ್ದುಪಡಿ ಕಾಯ್ದೆಗಳು ಪೂರಕವಾಗಲಿವೆ. ಕೃಷಿ ವಿಜ್ಞಾನ ಪದವೀಧರರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ಕೃಷಿ ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ’ ಎಂದರು.

ಈ ಕಾಯ್ದೆಗಳ ತಿದ್ದುಪಡಿಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಹಿಂದೆ ಪ್ರಯತ್ನಿಸಿತ್ತು. ಅವರಿಂದ ಸಾಧ್ಯವಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಇದರಿಂದ ವಿಚಲಿತರಾಗಿರುವ ಕಾಂಗ್ರೆಸ್‌ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಪಾಟೀಲ ಟೀಕಿಸಿದರು.

‘ಈ ಬಾರಿ ವಾಡಿಕೆಯ ಶೇಕಡ 104 ರಷ್ಟು ಬಿತ್ತನೆಯಾಗಿದೆ. ಇದರಿಂದಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೇಂದ್ರ ಸರ್ಕಾರದ ಬೇಡಿಕೆಯಷ್ಟು ಗೊಬ್ಬರ ಒದಗಿಸಿದೆ. ರಾಜ್ಯದ ಯಾವುದೇ ಭಾಗದಲ್ಲೂ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೊರತೆ ಉದ್ಭವಿಸಿಲ್ಲ’ ಎಂದರು.

ಕಾಂಗ್ರೆಸ್‌ ರಾಜಕಾರಣ:‘ಹಾಥರಸ್‌ ಘಟನೆಯ ವಿಷಯದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

‘ಕಾಂಗ್ರೆಸ್‌ ಅಧಿಕಾರಕ್ಕಾಗಿ ಹಪಹಪಿಸುತ್ತಿದೆ. ಆ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಪ್ರತಿಯೊಂದಕ್ಕೂ ರಾಜಕೀಯ ಬೆರೆಸುತ್ತಿದೆ. ಘಟನೆಯ ಪೂರ್ವಾಪರ ತಿಳಿದುಕೊಳ್ಳದೇ ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಅಲ್ಲಿನ ಘಟನೆಯ ಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದಿಲ್ಲ. ಮೃತ ಯುವತಿಯ ಕುಟುಂಬಕ್ಕೆ ಗೊತ್ತಿಲ್ಲದೇ ಏನಾದರೂ ಆಗಿದ್ದರೆ, ಆ ಬಗ್ಗೆ ಅಲ್ಲಿನ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

‘ಸಮುದ್ರ ಮತ್ತು ಹೊಳೆಗೆ ಹೋದರೂ ಕಾಂಗ್ರೆಸ್‌ ಬಲೆಗೆ ಮೀನುಗಳು ಬೀಳುತ್ತಿಲ್ಲ. ಆದ್ದರಿಂದ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಬೆರೆಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT