ಗುರುವಾರ , ಅಕ್ಟೋಬರ್ 28, 2021
19 °C
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭರವಸೆ

ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಸಭೆ: ಸಚಿವ ಬಿ.ಸಿ. ನಾಗೇಶ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲಾ ಶಿಕ್ಷಕರಾಗಿ ಮತ್ತು ಪ್ರೌಢಶಾಲಾ ಶಿಕ್ಷಕರ ಹುದ್ದೆಯಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ಹೊಂದಿವರಿಗೆ ಕಾಲಮಿತಿ ವೇತನ ಬಡ್ತಿ ನೀಡಲು ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಭರವಸೆ ನೀಡಿದರು.

ಬಡ್ತಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕಾಲಮಿತಿಯ ಬಡ್ತಿ ಮಂಜೂರು ಮಾಡದಿರುವ ಕುರಿತು ಗುರುವಾರ ವಿಧಾನ ಪರಿಷತ್‌ನಲ್ಲಿ ಗುರುವಾರ ನಿಯಮ 330ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ನಿಯಮಗಳ ಪ್ರಕಾರ ಬಡ್ತಿ ಪಡೆದು ಮೇಲಿನ ಹಂತಕ್ಕೆ ಹೋಗಿರುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕಾಲಮಿತಿ ವೇತನ ಬಡ್ತಿ ನೀಡಲು ಅವಕಾಶವಿಲ್ಲ. ಆದರೆ, ವೇತನದಲ್ಲಿ ತಾರತಮ್ಯ ಇರುವುದನ್ನು ಸರಿಪಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲೇ ಆರ್ಥಿಕ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು’ ಎಂದರು.

ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿಯ ಶಶೀಲ್ ಜಿ. ನಮೋಶಿ, ‘ಬಡ್ತಿ ಪಡೆದಿರುವವರು ಬಡ್ತಿ ಪಡೆಯದವರಿಗಿಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ವೇತನ ಆಯೋಗದ ಶಿಫಾರಸನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರಿಂದ ಶಿಕ್ಷಕ ಸಮುದಾಯ ನಷ್ಟ ಅನುಭವಿಸುತ್ತಿದೆ’ ಎಂದು ದೂರಿದರು.

‘ಬಡ್ತಿ ಪಡೆದವರಿಗೆ ಸಹಜವಾಗಿಯೇ ವೇತನ ಮತ್ತು ಭತ್ಯೆಗಳು ಹೆಚ್ಚಾಗಬೇಕು. ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ಇದು ತದ್ವಿರುದ್ದ. ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಬಡ್ತಿ ಪಡೆದಿರುವವರಿಗೆ ವೇತನ ನಿಗದಿ ಮಾಡಲು ಇರುವ ನಿಯಮಗಳೇ ಅವೈಜ್ಞಾನಿಕ’ ಎಂದು ಬಿಜೆಪಿ ಆಯನೂರು ಮಂಜುನಾಥ್‌ ಟೀಕಿಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ವೇತನ ತಾರತಮ್ಯವು ಬಡ್ತಿ ಉಪನ್ಯಾಸಕರು ಮತ್ತು ಶಿಕ್ಷಕರಲ್ಲಿ ಕೀಳರಿಮೆ ಸೃಷ್ಟಿಸುತ್ತಿದೆ. ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಬಡ್ತಿ ಪಡೆದು ಪ್ರೌಢ ಶಾಲೆ ಶಿಕ್ಷಕರಾದವರಿಗಿಂತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚು ವೇತನವಿದೆ. ಇದೇ ರೀತಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾದವರಿಗಿಂತ ಪ್ರೌಢಶಾಲೆ ಶಿಕ್ಷಕರಿಗೆ ಹೆಚ್ಚು ವೇತನವಿದೆ. ಹೆಚ್ಚು ಓದಿ ಬಡ್ತಿ ಪಡೆಯುವುದು ಅಪರಾಧವೆ’ ಎಂದು ಕೇಳಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಅ. ದೇವೇಗೌಡ, ಪ್ರೊ.ಎಸ್‌.ವಿ. ಸಂಕನೂರ ಮಾತನಾಡಿ, ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿದರು.

‘ಅಧಿಕಾರಿಗಳು ಕಡತ ಮುಚ್ಚಿಡುತ್ತಾರೆ’

‘ಶಿಕ್ಷಕರ ವೇತನ ತಾರತಮ್ಯ ಸಮಸ್ಯೆ ನಿವಾರಣೆ ಆಗದಿರುವುದಕ್ಕೆ ಸಚಿವರು ಮತ್ತು ರಾಜಕಾರಣಿಗಳು ಕಾರಣವಲ್ಲ. ಐಎಎಸ್‌ ಅಧಿಕಾರಿಗಳೇ ಇದಕ್ಕೆ ಕಾರಣ. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ಸಮಸ್ಯೆ ಪರಿಹಾರಕ್ಕೆ ಯತ್ನಿಸಿದ್ದೆ. ಆಗ, ಕಡತ ಮುಚ್ಚಿಟ್ಟು ಅಧಿಕಾರಿಗಳು ನಮ್ಮ ಪ್ರಯತ್ನ ವಿಫಲಗೊಳಿಸಿದ್ದರು’ ಎಂದು ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು