ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿವೇತನ ಬಾಕಿ ಬಿಡುಗಡೆಗೆ ಆದೇಶ

Last Updated 12 ಅಕ್ಟೋಬರ್ 2021, 16:10 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಬಾಕಿ ಇರಿಸಿಕೊಂಡಿರುವ ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಪ್ರೋತ್ಸಾಹಧನದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.

ಎರಡೂ ಇಲಾಖೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಿರುವ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನಗಳನ್ನು ಬಾಕಿ ಇರಿಸಿಕೊಂಡಿರುವ ಕುರಿತು ದೂರುಗಳು ಕೇಳಿಬಂದಿದ್ದವು. ಈ ಸಂಬಂಧ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಸಚಿವರು, ತಕ್ಷಣ ಬಾಕಿ ಪಾವತಿಸುವಂತೆ ನಿರ್ದೇಶನ ನೀಡಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ 2020–21ನೇ ಸಾಲಿನ ಪ್ರೋತ್ಸಾಹ ಧನ ₹ 55 ಕೋಟಿ ಪಾವತಿ ಬಾಕಿ ಇದೆ. ಅದನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದೇನೆ’ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 60 ರಿಂದ 70ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದರೆ ₹ 2,000 ಮತ್ತು ಶೇ 70ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದರೆ ತಲಾ ₹ 15,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 1.90 ಲಕ್ಷ ವಿದ್ಯಾರ್ಥಿಗಳಿಗೆ 2019–20 ಮತ್ತು 2020–21ನೇ ಸಾಲಿನ ಪ್ರೋತ್ಸಾಹ ಧನ ಹಾಗೂ ವಿದ್ಯಾರ್ಥಿವೇತನ ಪಾವತಿ ಬಾಕಿ ಇದೆ. ಈ ಮೊತ್ತವನ್ನು ವಾರದೊಳಗೆ ಬಿಡುಗಡೆ ಮಾಡಿ, ವಿದ್ಯಾರ್ಥಿಗಳಿಗೆ ಪಾವತಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದರು.

ಖಾಸಗಿ ಕೋಟಾದವರಿಗೂ ವಿದ್ಯಾರ್ಥಿ ವೇತನ: ಎಂಜಿನಿಯರಿಂಗ್‌ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ತಮಗೂ ಇಲಾಖೆಯಿಂದ ವಿದ್ಯಾರ್ಥಿವೇತನ ನೀಡುವಂತೆ ಮನವಿ ಸಲ್ಲಿಸಿದ್ದರು. ಈವರೆಗೂ ಖಾಸಗಿ ಕೋಟಾದವರಿಗೆ ಈ ಸೌಲಭ್ಯವಿರಲಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೂ ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಲಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

ಪ್ರತಿ ವಿದ್ಯಾರ್ಥಿಗೆ ₹ 1 ಲಕ್ಷದವರೆಗೂ ವಿದ್ಯಾರ್ಥಿವೇತನ ದೊರೆಯಲಿದೆ. ಇದಕ್ಕಾಗಿ ₹ 9 ಕೋಟಿಯಷ್ಟು ಹೆಚ್ಚುವರಿ ವೆಚ್ಚವಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT