ಭಾನುವಾರ, ಜೂನ್ 13, 2021
24 °C

ಡಿಕೆಶಿ ಫೋನ್‌ ಕದ್ದಾಲಿಕೆ ಮಾಡುವ ದರಿದ್ರ ಸ್ಥಿತಿ ಸರ್ಕಾರಕ್ಕೆ ಬಂದಿಲ್ಲ: ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಫೋನ್‌ ಕದ್ದಾಲಿಕೆ ಮಾಡುವಂತಹ ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ. 

ನಿನ್ನೆಯಿಂದ ನನ್ನ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದ್ದೆ ಎಂಬ ಡಿ.ಕೆ.ಶಿವಕುಮಾರ್‌ ಆರೋಪ ಕುರಿತು ಸುಧಾಕರ್‌ ಸರಣಿ ಟ್ವೀಟ್‌ ಮಾಡಿದ್ದಾರೆ.

‘ಡಿ.ಕೆ. ಶಿವಕುಮಾರ್‌ ಅವರೇ, ನೀವು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಧರ್ಮ-ಸಂಸ್ಕೃತಿಯ ಪ್ರತೀಕ, ಪವಿತ್ರವಾದ ಮನಸ್ಸುಳ್ಳ ಆದಿಚುಂಚನಗಿರಿ, ರಂಭಾಪುರಿ, ಸಿದ್ಧಗಂಗಾ ಮಠದ, ಸಿರಿಗೆರೆ ಮಠ, ಸುತ್ತೂರು ಮಠ ಶ್ರೀಗಳು ಸೇರಿದಂತೆ 7 ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಅದು ನೆನಪಿದೆಯಾ? ಎಂದು ಪ್ರಶ್ನಿಸಿದ್ದಾರೆ. 

‘ನಿಮ್ಮ (ಡಿ.ಕೆ.ಶಿವಕುಮಾರ್‌) ಫೋನ್‌ ಕದ್ದಾಲಿಕೆ ಮಾಡುವಂತಹ ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ. ನಿಮ್ಮ ಹೇಳಿಕೆ ಹಾಸ್ಯಾಸ್ಪದ. ಪ್ರತಿ ಮಾತಿನಲ್ಲೂ ಪ್ರಚಾರ ಬಯಸುತ್ತೀರಲ್ಲ. ನಾವು ಅಧಿಕಾರದಲ್ಲಿದ್ದಾಗ ಅನೇಕ ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಮಾಡಿದ್ದೆವುʼ ಎಂಬ ಸತ್ಯ ಹೇಳಿಬಿಡಿ’ ಎಂದು ಆಗ್ರಹಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷರಿಗೆ ದೈವಾಧೀನರಾದ ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇಲ್ಲ. ನಿರ್ದಿಷ್ಟವಾದ ಮಾಹಿತಿ ಪಡೆದುಕೊಂಡು ಮಾಧ್ಯಮಗಳ ಮುಂದೆ ಮಾತನಾಡಿದರೆ ಒಳ್ಳೆಯದಿತ್ತು. ಜವಾಬ್ದಾರಿ ಸ್ಥಾನದಲ್ಲಿ ಇದ್ದೀನಿ ಎಂದು ಹೇಳಿದ್ದೀರಿ. ಜನರಿಗೆ ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದಿದ್ದಾರೆ.

ನಾನೂ ಕೂಡ ಒಬ್ಬ ವೈದ್ಯನಾಗಿ, ಸರ್ಕಾರದ ಪ್ರತಿನಿಧಿಯಾಗಿ, ಈ ಸಂಕಷ್ಟ ಕಾಲದಲ್ಲಿ ನಾಗೇಂದ್ರ ಅವರ ಕುಟುಂಬಕ್ಕೆ ಮತ್ತು ವೈದ್ಯಸಮೂಹಕ್ಕೆ ಸಹಾನುಭೂತಿ, ನೈತಿಕ ಸ್ಥೈರ್ಯ ತುಂಬಲಿಕ್ಕೆ ಹೋಗಿದ್ದು, ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ ನನಗೆ ಅಭ್ಯಾಸವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈಗಾಗಲೇ ಸಿಎಂ ಯಡಿಯೂರಪ್ಪ, ನಾಗೇಂದ್ರ ಅವರ ಕುಟುಂಬಕ್ಕೆ ₹50 ಲಕ್ಷ  ಪರಿಹಾರ ಧನ ಹಾಗೂ ಮೃತರ ಶ್ರೀಮತಿಯವರಿಗೆ ಸಬ್ ರಿಜಿಸ್ಟ್ರಾರ್ ಉದ್ಯೋಗ ನೀಡಲು ಭರವಸೆ ನೀಡಿದ್ದಾರೆ. ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ. 

ಕೋವಿಡ್‌ ಸಂಕಷ್ಟದಲ್ಲಿ ವೈದ್ಯರ ಸಂಕಷ್ಟ ಏನು ಎಂದು ನಮಗೆ ಗೊತ್ತು. ಎಲ್ಲಾ ವೈದ್ಯರ ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆಮಾಡುತ್ತಿದ್ದೇವೆ. ಪ್ರಚಾರಕ್ಕೋಸ್ಕರ ಮಾತನಾಡಬೇಡಿ. ‘ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಲ್ಲುವವರು ಅದು ಯಾವ ಜಾತಿಯ ಮರವೆಂದು ನೋಡುವುದಿಲ್ಲ. ಸಾವಿನ ವಿಷಯದಲ್ಲಿ ರಾಜಕೀಯ ಮಾಡೋದು ತರವಲ್ಲʼ ಎಂದು ವ್ಯಂಗ್ಯವಾಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು