ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಕೆಲಸಕ್ಕೆ ಧಕ್ಕೆ ಇಲ್ಲ: ಸಚಿವ ಹಾಲಪ್ಪ ಆಚಾರ

ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಅಳವಡಿಕೆಗೆ ತರಬೇತಿ: ಸಚಿವ
Last Updated 13 ಸೆಪ್ಟೆಂಬರ್ 2022, 19:07 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚಿನ ವಿದ್ಯಾರ್ಹತೆ ಹೊಂದಿಲ್ಲ ಎನ್ನುವ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದು ಹಾಕುವ ಪ್ರಶ್ನೆಯೇ ಇಲ್ಲ’ ಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರಸ್ಪಷ್ಟಪಡಿಸಿದರು.

ವಿಧಾನಪರಿಷತ್ತಿನಲ್ಲಿ ಮಂಗಳ ವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅಂಗನವಾಡಿ ಕೇಂದ್ರಗಳಲ್ಲೂ ಜಾರಿಗೊಳಿಸಲಾಗುತ್ತಿದೆ. ಶಾಲಾ ಪೂರ್ವ ಶಿಕ್ಷಣಕ್ಕಾಗಿ ಈಗಾಗಲೇ ಆರು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ನೀಡುವ ಶಿಫಾರಸ್ಸಿನಂತೆ ಪಠ್ಯಕ್ರಮ ರಚಿಸಲಾಗುವುದು. ಪಠ್ಯ ಕ್ರಮದ ಅನುಸಾರ ಕೈಪಿಡಿಗಳನ್ನು ರೂಪಿಸಿ ಕಾರ್ಯಕರ್ತೆಯರಿಗೆ ಒದಗಿಸಲಾಗುವುದು’ ಎಂದು ವಿವರಿಸಿದರು.

‘ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರಲ್ಲಿ 732 ಮಂದಿ ಸ್ನಾತಕೋತ್ತರ ಪದವೀಧರರಿದ್ದಾರೆ. 6,017 ಪದವೀಧರರು, 14,303 ಪಿಯುಸಿ ಮತ್ತು 40,786 ಅಂಗನವಾಡಿ ಕಾರ್ಯಕರ್ತೆಯರು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಪಿಯುಸಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ ಕಾರ್ಯಕರ್ತೆಯರು ಇರುವಸುಮಾರು 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಎನ್‌ಇಪಿ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.

‘ಉಳಿದ ಅಂಗನವಾಡಿ ಕೇಂದ್ರಗಳಲ್ಲಿನ ಕಾರ್ಯಕರ್ತೆಯರು ಕಡಿಮೆ ವಿದ್ಯಾರ್ಹತೆ ಹೊಂದಿದ್ದು, ಅವರಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಆ ಕೇಂದ್ರಗಳಲ್ಲೂ ನೂತನ ಪಠ್ಯಕ್ರಮ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಸಂದರ್ಭದಲ್ಲಿ ಆರು ತಿಂಗಳಿನಿಂದ ಒಂದು ವರ್ಷದವರೆಗಿನ ಡಿಪ್ಲೊಮಾ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆದರೆ, ಎನ್‌ಇಪಿ ಪಠ್ಯಕ್ರಮವನ್ನು ಬೋಧಿಸಲು ಹೊಸ ಶಿಕ್ಷಕರನ್ನು ಅಂಗನವಾಡಿ ಕೇಂದ್ರಗಳಿಗೆ ನೇಮಕ ಮಾಡಿಕೊಳ್ಳುವುದಿಲ್ಲ’ ಎಂದು ವಿವರಿಸಿದರು.

‘ಹೊಸದಾಗಿ ಆರಂಭಿಸುತ್ತಿರುವ 4,244 ಅಂಗನವಾಡಿ ಕೇಂದ್ರಗಳ ನೇಮಕಾತಿಯ ಸಂಧರ್ಭದಲ್ಲಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು
ತಿಳಿಸಿದರು.

ಮಾತೃಪೂರ್ಣ ಯೋಜನೆ: ಮನೆಗೆ ರೇಷನ್‌

‘ಮಾತೃಪೂರ್ಣ ಯೋಜನೆ ಅಡಿಯಲ್ಲಿ ಗುಡ್ಡಗಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮನೆಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ’ ಎಂದು ಸಚಿವ ಹಾಲಪ್ಪ ಆಚಾರ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ವರ್ಷದ ಮಳೆಗಾಲ ಮುಗಿಯುವವರೆಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಈ ಯೋಜನೆ ಅಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲೇ
ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ನೀಡಲಾಗುತ್ತಿದೆ. ವೈದ್ಯಕೀಯ ಕಾರಣಕ್ಕೆ ಅಂಗನವಾಡಿ ಕೇಂದ್ರಗಳಿಗೆ ಬರುವುದು ಸಾಧ್ಯವಾಗದಿದ್ದರೆ ಬಿಸಿಯೂಟವನ್ನು ಕುಟುಂಬದ ಸದಸ್ಯರ ಮೂಲಕಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಬಿಸಿಯೂಟ ಪೂರೈಸುವ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಬಿಜೆಪಿಯ ಭಾರತಿ ಶೆಟ್ಟಿ, ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ಜೆಡಿಎಸ್‌ನ ಟಿ.ಎ. ಶರವಣ ಅವರು, ‘ಊಟಕ್ಕಾಗಿ ಗರ್ಭಿಣಿಯರು ಅಲೆದಾಡುವುದು ಎಷ್ಟು ಸರಿ. ಪೌಷ್ಟಿಕ ಆಹಾರ ಪದಾರ್ಥವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿ. ಬಿಸಿಯೂಟದ ಬದಲು ಮನೆಗೆ ರೇಷನ್‌ ಕೊಡಿ’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಅವರು, ‘ಯಾವ ವ್ಯವಸ್ಥೆ ಸರಿ ಎನ್ನುವುದನ್ನು ಗರ್ಭಿಣಿಯರೇ ಆಯ್ಕೆ ಮಾಡಿಕೊಳ್ಳಲಿ’ ಎಂದು ಸಲಹೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಮನೆಗೆ ಆಹಾರ ಪದಾರ್ಥಗಳನ್ನು ತಲುಪಿಸಿದರೆ ಗರ್ಭಿಣಿಯರಿಗೆ ದೊರೆಯುವುದಿಲ್ಲ. ಇದರಿಂದ, ಅಪೌಷ್ಠಿಕತೆಯಿಂದ ಬಳಲುತ್ತಾರೆ ಎನ್ನುವ ದೂರುಗಳಿದ್ದವು. ಹೀಗಾಗಿಯೇ ಅಂಗನವಾಡಿ ಕೇಂದ್ರಗಳಲ್ಲೇ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ಸಲಹೆ ಪರಿಶೀಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT