ಶುಕ್ರವಾರ, ಅಕ್ಟೋಬರ್ 23, 2020
21 °C

ಮಾರ್ಚ್‌ ಒಳಗೆ 16,600 ಗ್ರಾಮಗಳಲ್ಲಿ ಸ್ವಾಮಿತ್ವ ಕಾರ್ಡ್‌ ಹಂಚಿಕೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಆಸ್ತಿ ಹಕ್ಕು ಕಾರ್ಡ್‌ ವಿತರಿಸುವ ‘ಸ್ವಾಮಿತ್ವ’ ಯೋಜನೆಯಡಿ ಮೊದಲ ಹಂತದಲ್ಲಿ 16 ಜಿಲ್ಲೆಗಳ 16,600 ಗ್ರಾಮಗಳಲ್ಲಿ ಕಾರ್ಡ್‌ ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಆಸ್ತಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೊಳಿಸುವ ಈ ಯೋಜನೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದು, ಗ್ರಾಮಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರವಾದ ಹಕ್ಕು ದಾಖಲೆಗಳನ್ನು ಒದಗಿಸಲಾಗುವುದು ಎಂದು ಅವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ರಾಮನಗರ, ಮೈಸೂರು, ಹಾಸನ, ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳ 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 83 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಕಾರ್ಡ್‌ ವಿತರಣೆ ಮಾಡಲಾಗಿದೆ. ಅಲ್ಲದೆ, ಇದೇ 11 ರಿಂದ 763 ಗ್ರಾಮಗಳಲ್ಲಿ ಆಸ್ತಿ ಮಾಲೀಕರಿಗೆ ಆಸ್ತಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ಈ ಯೋಜನೆಯ ಮೊದಲನೇ ಹಂತದಲ್ಲಿ 16 ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ದಕ್ಷಿಣಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ಉತ್ತರಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 2021 ಮಾರ್ಚ್‌ ಅಂತ್ಯದೊಳಗೆ 16,600 ಗ್ರಾಮಗಳಲ್ಲಿ ಕಾರ್ಡ್‌ ವಿತರಣೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಉಳಿದ 14 ಜಿಲ್ಲೆಗಳಲ್ಲಿ ಕಾರ್ಡ್‌ ವಿತರಣೆ 2021 ರ ಏಪ್ರಿಲ್‌ನಲ್ಲಿ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಇದೇ ಅಕ್ಟೋಬರ್‌ 2 ನೇ ವಾರದಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿನ ಎಲ್ಲ ಗ್ರಾಮಗಳಲ್ಲಿ ಸ್ವಾಮಿತ್ವ ಯೋಜನೆ ಕುರಿತು ಗ್ರಾಮಸಭೆಗಳನ್ನು ಆಯೋಜಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿಯ ಮಾಲೀಕರ ಸಮ್ಮುಖದಲ್ಲಿ ಆಸ್ತಿಗಳನ್ನು ಪರಿಶೀಲಿಸಿ ಆಸ್ತಿ ಗುರುತು ಮಾಡುವ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಜನವಸತಿ ಪ್ರದೇಶದಲ್ಲಿರುವ ಆಸ್ತಿಗಳನ್ನು ಗುರುತಿಸಲು 12 ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಆಸ್ತಿ ಮಾಲೀಕರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಭೂಮಾಪಕರ ಜಂಟಿ ಸಹಿ ಇರುವ ನಕ್ಷೆ ಸಹಿತ ಆಸ್ತಿ ಪ್ರಮಾಣ ಪತ್ರವನ್ನು ಸರ್ಕಾರದ ನಿರ್ದೇಶನದಂತೆ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಸಹಕಾರಿ ಆಗಲಿದೆ. ಇದರಿಂದ ಗ್ರಾಮಪಂಚಾಯಿತಿ ಆಸ್ತಿ ತೆರಿಗೆಯ ಸಂಪನ್ಮೂಲ ಸಂಗ್ರಹ ಹೆಚ್ಚಾಗಲಿದ್ದು, ಸ್ಥಳೀಯ ಮೂಲಭೂತ ಸೌಕರ್ಯಗಳನ್ನು ಸಮಪರ್ಕವಾಗಿ ಒದಗಿಸಬಹುದು. ಇದರಿಂದ ಗ್ರಾಮಪಂಚಾಯಿತಿಗಳ ಸಬಲೀಕರಣ ಸಾಧ್ಯ ಎಂದು ಈಶ್ವರಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು