ಭಾನುವಾರ, ಏಪ್ರಿಲ್ 11, 2021
27 °C

ಮೀಸಲಾತಿ ಹೋರಾಟದಲ್ಲಿ ಸಚಿವರು, ಶಾಸಕರು ಭಾಗಿ: ಬಿಜೆಪಿ ಸಭೆಯಲ್ಲಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಸಚಿವರು ಹಾಗೂ  ಶಾಸಕರು ಪಾಲ್ಗೊಳ್ಳುತ್ತಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ಅಭಿಪ್ರಾಯ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಮೀಸಲಾತಿ ಹೋರಾಟಗಳ ಬಗ್ಗೆ ಪದಾಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ.

ಮೀಸಲಾತಿಗಾಗಿ ಇದೇ ರೀತಿಯ ಹೋರಾಟ ಮುಂದುವರಿದರೆ ಪಕ್ಷದ ನಿಲುವಿನ ಬಗ್ಗೆ ಗೊಂದಲ ಸೃಷ್ಟಿಯಾಗಿ, ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಈ ವಿಷಯದಲ್ಲಿ ಸರ್ಕಾರ ಹಾಗೂ ಪಕ್ಷದ ನಿಲುವು ಏನಾಗಿರಬೇಕು ಎಂಬ ತೀರ್ಮಾನಕ್ಕೆ ಬರುವುದು ಸೂಕ್ತ ಎಂಬ ಸಲಹೆಯೂ ಬಂದಿತು ಎಂದು ಮೂಲಗಳು ಹೇಳಿವೆ.

ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಈಗ ಕೈ ಮೀರಿದೆ ಹೋಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ನಮ್ಮದೇ ಪಕ್ಷ ಅಧಿಕಾರ ಇರುವಾಗ ಈ ರೀತಿಯ ಹೋರಾಟ ಅನೇಕ ತಪ್ಪು ಸಂದೇಶಗಳು ರವಾನೆಯಾಗಲು ದಾರಿ ಮಾಡಿಕೊಡಲಿವೆ. ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಣಯಗಳು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಈ ವಿಷಯದಲ್ಲಿ ಪಕ್ಷ ಮತ್ತು ವರಿಷ್ಠರು ಮಧ್ಯ ಪ್ರವೇಶ ಮಾಡಬೇಕು ಎಂಬ ಸಲಹೆಯನ್ನು ಕೆಲವು ಪದಾಧಿಕಾರಿಗಳು ನೀಡಿದರು ಎಂದು ಮೂಲಗಳು ವಿವರಿಸಿವೆ.

ಈ ಹಂತದಲ್ಲಿ ಮಾತನಾಡಿದ ನಳಿನ್‌ ಕುಮಾರ್ ಕಟೀಲ್‌, ’ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಸಂಘ ಪರಿವಾರ, ಪಕ್ಷ ಹಾಗೂ ಸರ್ಕಾರದ ಪ್ರಮುಖರ ಜತೆ ಸಭೆ ನಡೆಸಿ ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದು. ಈ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಸ್ಪಷ್ಟ ಸೂಚನೆಯನ್ನೂ ಬಳಿಕ ನೀಡುವುದಾಗಿ ಹೇಳಿದರು’ ಎಂದು ಗೊತ್ತಾಗಿದೆ.

ಅಧಿಕಾರ ಅನುಭವಿಸಿದವರು, ಅನುಭವಿಸುತ್ತಿರುವವರು ಪಕ್ಷ ಮತ್ತು ಸಂಘಟನೆ ವಿಷಯ ಬಂದಾಗ ಮುಂದೆ ಬರುವುದಿಲ್ಲ. ಕೆಲವರಿಗೆ ಅಧಿಕಾರ ಮಾತ್ರ ಬೇಕಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಬಚ್ಚೇಗೌಡರ ಮಗನಾದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಜತೆ ಕೈಜೋಡಿಸಿದ್ದಾರೆ. ಬಚ್ಚೇಗೌಡರಿಂದ ಈ ಬಗ್ಗೆ ವಿವರಣೆ ಪಡೆಯಬೇಕಿತ್ತು. ಆ ಕೆಲಸ ಏಕೆ ಮಾಡಿಲ್ಲ ಎಂದು ಪದಾಧಿಕಾರಿಯೊಬ್ಬರು ಪ್ರಶ್ನೆ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ಚುನಾವಣೆ ಸಿದ್ಧತೆ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿಗೆಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಬೂತ್ ಪ್ರಮುಖ್, ಪೇಜ್ ಪ್ರಮುಖ್‌ ಮುಂದುವರಿದ ರೂಪವಾಗಿ ಬೂತ್ ಅಧ್ಯಕ್ಷರಾಗಿರುವವರಿಗೆ ಹೆಚ್ಚಿನ ಜವಾಬ್ದಾರಿ ಕೊಡಲು ಚರ್ಚೆ ನಡೆಯಿತು. ಬೂತ್ ಸಮಸ್ಯೆಗಳ ಪಟ್ಟಿ ಮಾಡುವುದು, ರಾಜಕೀಯ ಬೆಳವಣಿಗೆಗಳ ಬಗ್ಗೆ ವರದಿ ಸಿದ್ಧಪಡಿಸುವುದು, ಸರ್ಕಾರದ ಜತೆಗೆ ನಿಂತು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯಕ್ರಮ ರೂಪಿಸುವ ಜವಾಬ್ದಾರಿಯನ್ನು ಬೂತ್ ಅಧ್ಯಕ್ಷರಿಗೆ ನೀಡುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದು ಮೂಲಗಳು ವಿವರಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು