ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಫೆಲೋಶಿಪ್‌ ಕಡಿತ

ಕೊರೊನಾ ಬಿಕ್ಕಟ್ಟು ನೆಪದಲ್ಲಿ ತಾರತಮ್ಯ– ವಿದ್ಯಾರ್ಥಿಗಳ ಆರೋಪ
Last Updated 14 ನವೆಂಬರ್ 2020, 18:07 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಚ್‌ಡಿ ಮತ್ತು ಎಂ.ಫಿಲ್‌ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋಶಿಪ್‌ ಮೊತ್ತವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿದೆ.

‘ಪಿಎಚ್‌ಡಿ ಮತ್ತು ಎಂ.ಫಿಲ್‌ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯಸರ್ಕಾರವು ವರ್ಷಕ್ಕೆ ₹3 ಲಕ್ಷ ಫೆಲೋಶಿಪ್‌ ನೀಡುತ್ತಿತ್ತು. ಈಗ ಕೋವಿಡ್‌ ಕಾರಣ ನೀಡಿ ಈ ಮೊತ್ತವನ್ನು ₹1 ಲಕ್ಷಕ್ಕೆ ಇಳಿಸಿದೆ’ ಎಂದು ಸಂಶೋಧನಾ ವಿದ್ಯಾರ್ಥಿನಿ ಶಾಫಿಯಾ ಫರ್‌ಹಿನ್‌ ಹೇಳಿದರು.

ಪಿಎಚ್‌ಡಿ ಮಾಡುವವರಿಗೆ 3 ವರ್ಷ, ಎಂ.ಫಿಲ್‌ ಮಾಡುವವರಿಗೆ ಎರಡು ವರ್ಷ ಈ ಫೆಲೋಶಿಪ್ ಅನ್ನು ಸರ್ಕಾರ ನೀಡುತ್ತದೆ.

‘ತಿಂಗಳಿಗೆ ₹25 ಸಾವಿರ ನೀಡುತ್ತಿದ್ದರು. ಕಳೆದ ಹತ್ತು ತಿಂಗಳಿನಿಂದ ಈ ಮೊತ್ತವನ್ನೂ ಪಾವತಿಸಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಮೊತ್ತ ಕಡಿತಗೊಳಿಸುವುದಾಗಿ ಆದೇಶ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ನಮ್ಮಂತೆ ಸಂಶೋಧನಾ ವಿದ್ಯಾರ್ಥಿಗಳಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತಿಂಗಳಿಗೆ ₹23 ಸಾವಿರ ಪಾವತಿಸುತ್ತಿದ್ದಾರೆ. ಕೊರೊನಾ ಬಿಕ್ಕಟ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ’ ಎಂದು ಅವರು ಪ್ರಶ್ನಿಸುತ್ತಾರೆ.

‘ಮಾಡುತ್ತಿದ್ದ ಉದ್ಯೋಗ ಬಿಟ್ಟು ಸಂಶೋಧನೆಯಲ್ಲಿ ತೊಡಗಿದ್ದೇವೆ. ಫೆಲೊಶಿಪ್‌ ಮೊತ್ತದಿಂದಲೇ ಶುಲ್ಕ ಪಾವತಿ ಮಾಡುವುದಲ್ಲದೆ, ಪುಸ್ತಕಗಳನ್ನು ಕೊಳ್ಳಬೇಕು. ಜೀವನ ನಿರ್ವಹಣೆಯೂ ಇದೇ ಹಣದಿಂದ ಮಾಡುತ್ತಿದ್ದೇವೆ. ಈಗ ತಿಂಗಳಿಗೆ ₹10 ಸಾವಿರ ಪಾವತಿಸುವುದಾಗಿ (ವರ್ಷಕ್ಕೆ ₹1ಲಕ್ಷ ಮೀರುವಂತಿಲ್ಲ) ಹೇಳುತ್ತಾರೆ. ಇಷ್ಟು ಕಡಿಮೆ ಹಣ ಜೀವನ ನಿರ್ವಹಣೆಗೂ ಆಗುವುದಿಲ್ಲ, ವ್ಯಾಸಂಗದ ಕಡೆಗೆ ಗಮನ ನೀಡುವುದು ಕಷ್ಟವಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ರಾಜ್ಯದಲ್ಲಿ 150ರಿಂದ 160 ಜನ ಅಲಸ್ಪಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅವರೆಲ್ಲರಿಗೂ ತೊಂದರೆಯಾಗಿದೆ’ ಎಂದು ಹೇಳಿದರು.

ಶೇ 1 ಮಾತ್ರ:

‘ರಾಜ್ಯದ ಒಟ್ಟು ಮುಸ್ಲಿಮರಲ್ಲಿ ಪದವಿ ಹಂತಕ್ಕೆ ಹೋಗುವವರ ಪ್ರಮಾಣ ಶೇ 3ರಷ್ಟಿದೆ. ಪಿಎಚ್‌ಡಿ, ಎಂ.ಫಿಲ್‌ನಂತಹ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರ ಪ್ರಮಾಣ ಶೇ 1ರಷ್ಟು ಮಾತ್ರ. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಉತ್ತೇಜನ ನೀಡುವ ಬದಲು, ಕೊಟ್ಟಿರುವ ಸೌಲಭ್ಯವನ್ನೂ ಕಿತ್ತುಕೊಳ್ಳುವ ಸರ್ಕಾರದ ಈ ನಿರ್ಧಾರ ಸರಿಯಲ್ಲ’ ಎಂದು ಮುಸ್ಲಿಂ ಸಮುದಾಯದ ಮುಖಂಡ ಸೈಯದ್ ಮುಜೀಬ್‌ ಹೇಳಿದರು.

‘ಬಿಜೆಪಿ ಸರ್ಕಾರ ಬಂದಾಗಿನಿಂದ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕಡಿತಗೊಳಿಸಲಾಗುತ್ತಿದೆ. 2020–21ನೇ ಸಾಲಿನಲ್ಲಿಯೇ ಶೇ 44ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಈಗ ಉನ್ನತ ಶಿಕ್ಷಣಕ್ಕೆ ನೀಡುವ ನೆರವನ್ನೂ ಕಡಿಮೆ ಮಾಡಲಾಗಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಗೆ ಮನವಿ’

‘ಕೋವಿಡ್‌ ಬಿಕ್ಕಟ್ಟು ಮತ್ತಿತರ ಕಾರಣಗಳಿಂದಾಗಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಶಿಕ್ಷಣದ ವಿಷಯವಾಗಿರುವುದರಿಂದ ಫೆಲೋಶಿಪ್ ಮೊತ್ತ ಕಡಿತಗೊಳಿಸಬಾರದು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ’ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಹೇಳಿದರು.

‘ಮುಂದಿನ ಬಜೆಟ್‌ ಮಂಡನೆಗೆ ಮೂರು–ನಾಲ್ಕು ತಿಂಗಳಷ್ಟೇ ಬಾಕಿ ಇದೆ. ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿರುವ ಬಗ್ಗೆ, ಸ್ಥಗಿತಗೊಳಿಸಿರುವ ಯೋಜನೆ ಪುನರಾರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT