ಬುಧವಾರ, ಆಗಸ್ಟ್ 17, 2022
27 °C

ಎರಡು ವರ್ಷಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ: ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಿಷನ್ ಬೆಂಗಳೂರು- 2022’ ಅಡಿಯಲ್ಲಿ ಎಂಟು ಕ್ಷೇತ್ರಗಳಲ್ಲಿ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳಲ್ಲಿ ಬೆಂಗಳೂರಿನ ಸಂಪೂರ್ಣ ಚಹರೆ ಬದಲಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ‘ಮಿಷನ್ ಬೆಂಗಳೂರು- 2022’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಸುಗಮ ಸಾರಿಗೆ, ಸ್ವಚ್ಛ ಪರಿಸರ, ವೈಜ್ಞಾನಿಕ ವಿಧಾನದಲ್ಲಿ ಘನ ತ್ಯಾಜ್ಯ ವಿಲೇವಾರಿ, ರಾಜ ಕಾಲುವೆಗಳ ಸಮಗ್ರ ನಿರ್ವಹಣೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಹೊಸ ಉದ್ಯಾನಗಳು ಮತ್ತು ಬೃಹತ್ ವೃಕ್ಷೋದ್ಯಾನಗಳನ್ನೂ ನಿರ್ಮಿಸಲಾಗುವುದು ಎಂದು ಹೇಳಿದರು.

ನಗರದ ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಮತ್ತು ಎನ್ ಜಿಇಎಫ್ ಕಾರ್ಖಾನೆಗಳ ಜಮೀನಿನಲ್ಲಿ ಕಲೆ, ರಂಗಭೂಮಿಗೆ ಸಂಬಂಧಿಸಿದ ಮ್ಯೂಸಿಯಂ ನಿರ್ಮಿಸಲಾಗುವುದು. ಬೆಂಗಳೂರಿನ ಇತಿಹಾಸ ದಾಖಲಿಸುವ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ ಎಂದು ಪ್ರಕಟಿಸಿದರು.

ವಾಹನ ದಟ್ಟಣೆ ತಪ್ಪಿಸಲು ನಗರದ ಪ್ರಮುಖ 12 ಮಾರ್ಗಗಳನ್ನು ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುವುದು. 400 ಕಿ. ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿಗೆ ‘ನನ್ ಕಸ- ನನ್ನ ಜವಾಬ್ದಾರಿ’ ಎಂಬ ಯೋಜನೆ‌ ರೂಪಿಸಲಾಗಿದೆ.‌ ಘನ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಿಗೆ ತರಬೇತಿಯನ್ನೂ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥ ನಾರಾಯಣ, ಸಚಿವರಾದ ಆರ್. ಅಶೋಕ, ಬೈರತಿ ಬಸವರಾಜ, ಕೆ. ಗೋಪಾಲಯ್ಯ, ಡಾ.ಕೆ.‌ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.‌ವಿಜಯ ಭಾಸ್ಕರ್ ಉಪಸ್ಥಿತರಿದ್ದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಯೋಜನೆ ಕುರಿತು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು