ಶುಕ್ರವಾರ, ಜನವರಿ 27, 2023
26 °C

ಕಾಣಿಯೂರು ಗುಂಪು ಹಲ್ಲೆ ಪ್ರಕರಣ– ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇರೆಗೆ ಯುವಕರಿಬ್ಬರಿಗೆ ಸಾರ್ವಜನಿಕರ ಗುಂಪು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಪುನೀತ್‌, ರಾಜು, ಪ್ರಸಾದ್‌, ಕಿಶೋರ್, ಭವಿತ್‌, ರಂಜಿತ್‌ ಬಂಧಿತ ಆರೋಪಿಗಳು.

‘ಯುವಕರಿಗೆ ಥಳಿಸುತ್ತಿರುವುದನ್ನು ಯಾರೊ ವಿಡಿಯೊ ಮಾಡಿದ್ದರು. ಆ ವಿಡಿಯೊ ಆಧಾರದಲ್ಲಿ ಆರು ಮಂದಿಯನ್ನು ಸದ್ಯಕ್ಕೆ ಬಂಧಿಸಿದ್ದೇವೆ. ಬಂಧಿತರೆಲ್ಲರೂ ಸ್ಥಳೀಯರು. ಪ್ರಕರಣದ ತನಿಖೆ ಮುಂದುವರಿದಿದೆ‘ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ‘ಪ್ರಜಾವಾಣಿ‘ಗೆ ತಿಳಿಸಿದರು. 

ಮಂಗಳೂರು ತಾಲ್ಲೂಕಿನ ಅಡ್ಡೂರು ಗ್ರಾಮದ ರಮೀಜು‌ದ್ದೀನ್ ಹಾಗೂ ಆತನ ಸಂಬಂಧಿ ಮಹಮ್ಮದ್‌ ರಫೀಕ್‌ ಬೆಡ್‌ ಶೀಟ್‌ ವ್ಯಪಾರಿಗಳು. ಬೆಡ್‌ಶೀಟ್‌ ವ್ಯಾಪಾರದ ಸಲುವಾಗಿ ಅವರು ಕಾಣಿಯೂರು ಗ್ರಾಮದಲ್ಲಿ ಕಾರಿನಲ್ಲಿ ಸಾಗುತ್ತಿದ್ದಾಗ ಸ್ಥಳೀಯರ ಗುಂಪು ವಾಹನವನ್ನು ಅಡ್ಡಗಟ್ಟಿ, ಯುವಕರಿಬ್ಬರಿಗೆ ಗುರುವಾರ  (ಅ.20)ಮಧ್ಯಾಹ್ನ ಥಳಿಸಿತ್ತು. ತೀವ್ರ ಗಾಯಗೊಂಡ ಅವರು ಮಂಗಳೂರಿನ ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಬಗ್ಗೆ ರಮೀಜುದ್ದೀನ್‌ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದರು. 

ಯುವಕರಿಬ್ಬರ ಮೇಲೆ : ‘ಬೆಡ್‌ಶೀಟ್‌ ಮಾರಾಟದ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಯುವಕರು ಮನೆಯಲ್ಲಿ ಒಬ್ಬಳೇ ಇದ್ದ ನನ್ನ ಅತ್ಯಾಚಾರಕ್ಕೆ ಯತ್ನಿಸಿದರು’ ಎಂದು ಆರೋಪಿಸಿ ಪರಿಶಿಷ್ಟ ಜಾತಿಯ ಮಹಿಳೆ
ಯೊಬ್ಬರು ಕಡಬ ಠಾಣೆಗೆ ದೂರು ನೀಡಿದ್ದಾರೆ. ರಮೀಜು‌ದ್ದೀನ್ ಹಾಗೂ ಮಹಮ್ಮದ್‌ ರಫೀಕ್‌ ವಿರುದ್ಧ ಮನೆಗೆ ಅಕ್ರಮ ಪ್ರವೇಶ, ಅತ್ಯಾಚಾರ ಯತ್ನ, ದುರುದ್ದೇಶಪೂರಿತ ಹಲ್ಲೆ ಹಾಗೂ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ.

‘ಅತ್ಯಾಚಾರ ಯತ್ನ ಪ್ರಕರಣದಲ್ಲಿ ರಮೀಜು‌ದ್ದೀನ್ ಹಾಗೂ ಮಹಮ್ಮದ್‌ ರಫೀಕ್‌ ಆರೋಪಿಗಳು. ಅದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕಾವಲಿಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು