ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ‘ಕೃಷಿ ಸಂಜೀವಿನಿ’ ಲೋಕಾರ್ಪಣೆ

Last Updated 7 ಜನವರಿ 2021, 6:13 IST
ಅಕ್ಷರ ಗಾತ್ರ

ಬೆಂಗಳೂರು:‌ ರೈತರಿಗಾಗಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ ವಾಹನ ‘ಕೃಷಿ ಸಂಜೀವಿನಿ’ಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುರುವಾರ ಲೋಕಾರ್ಪಣೆ ಮಾಡಿದರು.

ವಿಧಾನಸೌಧದ ಮೆಟ್ಟಿಲುಗಳ ದ್ವಾರದ ಬಳಿ ಗುರುವಾರ ಬೆಳಿಗ್ಗೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ರೈತರ ಹೊಲಗಳಿಗೆ ಹೋಗಿ ಮಣ್ಣು ನೀರು ರೋಗ ಪರೀಕ್ಷೆ ಮಾಡುವ ವಾಹನವಿದು. 40 ವಾಹನಗಳನ್ನು ಇಂದು ಲೋಕಾರ್ಪಣೆ ಮಾಡಿದ್ದೇನೆ. ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆ ಇದೆ’ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ‘40 ಕೃಷಿ ಸಂಜೀವಿನಿ ವಾಹನಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದ್ದಾರೆ. ಪ್ರತಿಯೊಂದು ರೈತ ಸಂಪರ್ಕ ಕೇಂದ್ರಕ್ಕೂ ಒಂದೊಂದು ಕೃಷಿ ಸಂಜೀವಿ ವಾಹನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

‘ಕೃಷಿ ಸಂಜೀವಿನಿ’ ವಾಹನ ಚಲಾಯಿಸಿ ಚಾಲಕರು ಪ್ರಾತ್ಯಕ್ಷಿಕೆ ತೋರಿಸಿದರು. ಈ ವಾಹನಕ್ಕೆ ಆ್ಯಂಬ್ಯುಲೆನ್ಸ್ ಮಾದರಿಯಲ್ಲಿ ಸೈರನ್ ಅಳವಡಿಸಲಾಗಿದೆ.

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್.ಟಿ‌. ಸೋಮಶೇರ್, ಶಾಸಕ ಬೈಯ್ಯಾರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏನಿದು ‘ಕೃಷಿ ಸಂಜೀವಿನಿ’: ಬೆಳೆಗಳಿಗೆ ಕಾಡುವ ಕೀಟ ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗು ಸಮರ್ಪಕ ನಿರ್ವಹಣೆ ಕುರಿತಂತೆ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೊಪಾಯಗಳನ್ನು ಒದಗಿಸಲು ‘ಕೃಷಿ ಸಂಜೀವಿನಿ’ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ.

‘ಕೃಷಿ ಸಂಜೀವಿನಿ’ ಸ್ಥಾಪನೆಯಿಂದ ರೋಗ ಸರ್ವೇಕ್ಷಣಾ ಮತ್ತು ಸಲಹಾ ಘಟಕಗಳು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ. ಸಂಚಾರಿ ವಾಹನದ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ರೈತರ ತಾಕುಗಳಿಗೆ ತಾಂತ್ರಿಕ ತಂಡವು ಭೇಟಿ ನೀಡಲು ಸಹಕಾರಿಯಾಗಲಿದೆ. ರೈತರು ತಮ್ಮ ಮಟ್ಟದಲ್ಲಿ ರಸಗೊಬ್ಬರಗಳ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಕಂಡುಕೊಂಡು ಗುಣಮಟ್ಟದ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ರಸಗೊಬ್ಬರಗಳು ಕಲಬೆರಕೆಯಾಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂದು ತಿಳಿಯಲು ಸುಲಭ ಪರೀಕ್ಷೆಯ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ನೀಡಲಾಗುವುದು. ನಂತರ ರೈತರು ತಮ್ಮ ಹಂತದಲ್ಲಿಯೇ ರಸಗೊಬ್ಬರಗಳ ಗುಣಮಟ್ಟವನ್ನು ಮೊದಲೇ ತಿಳಿದು ಖರೀದಿಸಬಹುದಾಗಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?: ಕೃಷಿ ಸಂಜೀವಿನಿ ಟೋಲ್ ಫ್ರೀ (155313) ಸಹಾಯವಾಣಿಯಾಗಿದೆ. ಈ ಸಂಖ್ಯೆಗೆ ಯಾವುದಾದರೂ ಜಿಲ್ಲೆಯಿಂದ ಕರೆ ಮಾಡಿದರೆ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಬಹುದಾಗಿದೆ. ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್‌ನಂತೆ ಈ ಸಹಾಯವಾಣಿ ಕೆಲಸ ಮಾಡಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT