ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಹರಿವು ಹೆಚ್ಚಳ: ತುಂಬುವ ಹಂತಕ್ಕೆ ತುಂಗಭದ್ರಾ

Last Updated 14 ಆಗಸ್ಟ್ 2020, 19:53 IST
ಅಕ್ಷರ ಗಾತ್ರ
ADVERTISEMENT
""

ಹುಬ್ಬಳ್ಳಿ:ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ತುಂಬುವ ಹಂತಕ್ಕೆ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿರುವ ಆಲಮಟ್ಟಿಗೆ ಒಳಹರಿವಿಗಿಂತ ಹೊರಹರಿವು ಹೆಚ್ಚಳವಾಗಿದೆ.

‘ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಜಾನುವಾರುಗಳನ್ನು ಮೇಯಿಸಲು ನದಿ ಪಾತ್ರ ಹಾಗೂ ನದಿಯ ಆಳ ಪ್ರದೇಶದಲ್ಲಿ ಓಡಾಡಬಾರದು. ಈ ಕುರಿತು ಬಳ್ಳಾರಿ, ಕೊಪ್ಪಳ, ರಾಯಚೂರು, ಅವಿಭಜಿತ ಆಂಧ್ರ ಪ್ರದೇಶದ ಕರ್ನೂಲ್‌, ಮೆಹಬೂಬ್‌ ನಗರದ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ತಿಳಿಸಿದೆ.

ಭಾರಿ ಮಳೆ: ಕರಾವಳಿಯ ಜಿಲ್ಲೆಗಳಲ್ಲಿ ಇದೇ 15ರಿಂದ 19ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಅವಧಿಯಲ್ಲಿ 6.5 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ ಎಂದು ಎಚ್ಚರಿಕೆ ನೀಡಿದೆ.

ಸಾಧಾರಣ ಮಳೆ: ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಕಡೆ ಶುಕ್ರವಾರ ಸಾಧಾರಣ ಮಳೆಯಾಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು.ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದೆ. ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ. ನದಿಗಳ ಮಟ್ಟ ತಗ್ಗಿದೆ. ದಾವಣಗೆರೆ ನಗರ ಹಾಗೂ ಜಿಲ್ಲೆಯ ಕೆಲವೆಡೆ ಸಾಧಾರಣವಾಗಿ ಮಳೆಯಾಗಿದೆ.ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಹಾಸನ ದಲ್ಲಿಯೂ ಸಾಧಾರಣ ಮಳೆಯಾಗಿದೆ.

ಕೆಆರ್‌ಎಸ್‌ ಭರ್ತಿಗೆ ಅರ್ಧ ಅಡಿ ಬಾಕಿ
ಮಂಡ್ಯ: ಕೆಆರ್‌ಎಸ್‌ ಜಲಾಶಯದ ಭರ್ತಿಗೆ ಅರ್ಧ ಅಡಿ ಮಾತ್ರವೇ ಬಾಕಿ ಉಳಿದಿದ್ದು, ಶುಕ್ರವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 124.25ಕ್ಕೆ ತಲು‍ಪಿತ್ತು.ಶನಿವಾರ ಬೆಳಿಗ್ಗೆ ವೇಳೆಗೆ ಗರಿಷ್ಠ ಮಟ್ಟ (124.80 ಅಡಿ) ತಲುಪುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದ ಮಳೆ ಸುರಿದ ಕಾರಣ 10 ದಿನದಿಂದೀಚೆಗೆ 16 ಅಡಿ ನೀರು ಹರಿದು ಬಂದಿದೆ. ಶುಕ್ರವಾರ ಸಂಜೆ 10,941 ಕ್ಯುಸೆಕ್ ಒಳಹರಿವು, 3,864 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು.

ತಲಕಾವೇರಿಯಲ್ಲಿ ಪೂಜೆ ಆರಂಭ
ಮಡಿಕೇರಿ:
ಕಾವೇರಿ ನದಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ, ಎಂಟು ದಿನಗಳ ಬಳಿಕ ಶುಕ್ರವಾರ ನಿತ್ಯದ ಪೂಜಾ ಕೈಂಕರ್ಯಗಳು ಆರಂಭವಾದವು. ಬ್ರಹ್ಮಗಿರಿ ಪಕ್ಕದ ಗಜಗಿರಿ ಬೆಟ್ಟ ಕುಸಿದ ಬಳಿಕ ಕ್ಷೇತ್ರದಲ್ಲಿ ಪೂಜೆ ಸ್ಥಗಿತವಾಗಿತ್ತು.

ನೀಲೇಶ್ವರ ಪದ್ಮನಾಭ ಅವರ ನೇತೃತ್ವದಲ್ಲಿ ಗಣಪತಿ ಪೂಜೆ, ದೋಷ ಪರಿಹಾರ ಪೂಜೆಯ ಮೂಲಕ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಕಾವೇರಿಯ ತೀರ್ಥ ಕುಂಡಿಕೆ ಬಳಿ ಪೂಜೆ ನೆರವೇರಿತು. ಅಗಸ್ತೇಶ್ವರನಿಗೂ ಪೂಜೆ ಸಲ್ಲಿಸಲಾಯಿತು.

ಶಾಸಕ ಕೆ.ಜಿ.ಬೋಪಯ್ಯ, ಭಾಗಮಂಡಲ–ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್‌.ತಮ್ಮಯ್ಯ, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಹಾಜರಿದ್ದರು. ಬೆಟ್ಟ ಕುಸಿದ ಸ್ಥಳದಿಂದ ಕಣ್ಮರೆಯಾದ ಉಳಿದ ಮೂವರಿಗೆ ಶುಕ್ರವಾರವೂ ಶೋಧ ನಡೆಯಿತು. ಸುಳಿವು ಸಿಕ್ಕಿಲ್ಲ.

ಕರಾವಳಿ ಜಿಲ್ಲೆಗಳಲ್ಲಿ 5 ದಿನ 'ಯೆಲ್ಲೊ ಅಲರ್ಟ್'
ಬೆಂಗಳೂರು:
ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ.15ರಿಂದ 19ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಮಳೆ-ಎಲ್ಲಿ,ಎಷ್ಟು?: ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 6 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಸಿಂಧನೂರು, ಆಗುಂಬೆ 5, ಬೆಳ್ತಂಗಡಿ, ಚಿಂಚೋಳಿ 3, ಅಂಕೋಲಾ, ಆಳಂದ, ಕಮಲಾಪುರ, ಕಲಬುರ್ಗಿ 2, ಮಂಗಳೂರು, ಮೂಡುಬಿದರೆ, ಉಪ್ಪಿನಂಗಡಿ, ಕಾರ್ಕಳ, ಬೀದರ್, ಬೆಳಗಾವಿ, ರಾಯಚೂರು, ಭಾಗಮಂಡಲ, ಕೊಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT