ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಉತ್ತಮ ಮಳೆ: ಸಿಡಿಲಿಗೆ ವ್ಯಕ್ತಿ ಸಾವು

Last Updated 13 ಮೇ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮೈಸೂರು, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರಿನಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ಆದಿಗದ್ದೆಯಲ್ಲಿ ಸಿಡಿಲು ಬಡಿದು ಕೂಲಿಕಾರ್ಮಿಕ ಎಚ್.ಎಲ್.ಉಮೇಶ್ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗರಕಹಳ್ಳಿಯಲ್ಲಿ ಹೆಂಚಿನ ಮನೆ ಕುಸಿದಿದ್ದು, ಮನೆಯವರು ಪಾರಾಗಿದ್ದಾರೆ. ಕೊಡಗು ಜಿಲ್ಲೆ ಹೆಬ್ಬಾಲೆಯಲ್ಲಿ ಶಾಲೆಯ ತಡೆಗೋಡೆಯೊಂದು ಕುಸಿದಿದೆ.

ಮೈಸೂರು ನಗರ, ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕಿನಲ್ಲಿ ಬಿರುಸಿನ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಬಿರುಸಿನ ಮಳೆಯಾಗಿದೆ.

ಕೊಡಗಿನ ಸುಂಟಿಕೊಪ್ಪ, ಮಡಿಕೇರಿ, ಗೋಣಿಕೊಪ್ಪಲು, ನಾಪೋಕ್ಲುದಲ್ಲಿ ಧಾರಾಕಾರ ಮಳೆಯಾಗಿದ್ದು, ಹೆಬ್ಬಾಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆ ಕುಸಿದಿದೆ. ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆಯಿದ್ದು, ಆತಂಕದ ಸ್ಥಳಗಳಲ್ಲಿ ವಾಸವಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ, ಹೊಸನಗರ, ರಿಪ್ಪನ್‌ಪೇಟೆ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೀರೂರು, ಶೃಂಗೇರಿ, ಕೊಪ್ಪ, ಎನ್.ಆರ್‌.ಪುರ, ಬಾಳೆಹೊನ್ನೂರು ಭಾಗದಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಯಿತು. ಹೊನ್ನಾವರ ಮತ್ತು ಕುಮಟಾದಲ್ಲಿ ಬುಧವಾರ ರಾತ್ರಿ ಮಳೆ ಸುರಿಯಿತು.

ಮೂರು ದಿನ ಮಳೆ ಸಾಧ್ಯತೆ
ಕಾರವಾರ:
ಅರಬ್ಬಿ ಸಮುದ್ರದಲ್ಲಿ ಲಕ್ಷದ್ವೀಪ ಭಾಗದಲ್ಲಿ ಗುರುವಾರ ಬೆಳಿಗ್ಗೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಮೇ 14ರಂದು ಬೆಳಿಗ್ಗೆ ಅಲ್ಲಿ ವಾಯುಭಾರ ಕುಸಿತವಾಗುವ ಲಕ್ಷಣಗಳಿವೆ. 15ರಂದು ಮತ್ತಷ್ಟು ವೇಗ ಪಡೆದು ಚಂಡಮಾರುತವಾಗಿ ಬದಲಾಗಬಹುದು. ಬಳಿಕ ಮೂರು ದಿನ ಪಶ್ಚಿಮ ಕರಾವಳಿ ಮೂಲಕ ಸಾಗಲಿದ್ದು, ಭಾರಿ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಮೇ 14ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’, 15 ಮತ್ತು 16ರಂದು ಕರಾವಳಿ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’, 17ರಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT