ಬೆಂಗಳೂರು: ‘ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಬೇಕು. ಶಾಲೆಗಳಲ್ಲೂ ಸಾತ್ವಿಕ ಆಹಾರ ನೀಡಬೇಕು ಮತ್ತು ಮಕ್ಕಳು ಇರುವಲ್ಲಿ ಪ್ರಾಣಿಗಳ ವಧೆ ಮಾಡಬಾರದು ಹಾಗೂ ಅಂಗಡಿಗಳಲ್ಲಿ ಮಾಂಸ ನೇತು ಹಾಕುವುದನ್ನು ನಿಲ್ಲಿಸಬೇಕು, ಪುನರ್ಜನ್ಮದ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಬೇಕು....’

ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮಠಾಧೀಶರು ನೀಡಿದ ಸಲಹೆಗಳು ಇವು.

ಸಾತ್ವಿಕ ಆಹಾರ ಬಗ್ಗೆ ಪ್ರತಿಪಾದಿಸಿದ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ’ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಮುಕ್ತವಾಗಿ ಬೋಧಿಸಬೇಕು ಮತ್ತು ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡಬೇಕು. ಆಹಾರಕ್ಕೂ ವ್ಯಕ್ತಿತ್ವಕ್ಕೂ ಸಂಬಂಧ ಇದೆ. ಕೆಲವು ಆಹಾರಗಳು ಮಕ್ಕಳಲ್ಲಿ ನಕಾರಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ಹೀಗಾಗಿ, ಶಾಲೆಗಳಲ್ಲಿ ಗೋಕ್ಷೀರ ಮತ್ತು ತುಪ್ಪ ನೀಡಬೇಕು. ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಾಲು ಮತ್ತು ತುಪ್ಪವನ್ನು ಹೆಚ್ಚು ಬಳಸಬೇಕು’ ಎಂದು ಹೇಳಿದರು.

ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ‘ಮಕ್ಕಳಿಗೆ ಸತ್ಯ, ಅಹಿಂಸೆ, ದಾನದ ಬಗ್ಗೆ ತಿಳಿವಳಿಕೆ ನೀಡಬೇಕು. ಮತ್ತೊಬ್ಬರಿಗೆ ಗೌರವ ನೀಡುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ. ಶಿಕ್ಷಕರ ಮತ್ತು ತಂದೆ-ತಾಯಿ, ಸಮಾಜದ ಉತ್ತಮ ನಡುವಳಿಕೆಗಳಿಂದ ಮಕ್ಕಳಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಪಂಚತಂತ್ರದ ಕಥೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಮತ್ತೆ ಅದು ಆರಂಭವಾಗಬೇಕು. ನಾಟಕಗಳ ಮೂಲಕ ನಡೆ–ನುಡಿಗಳನ್ನು ಕಲಿಸಬೇಕು. ಟಿವಿಯಲ್ಲಿ ಹಿಂಸೆಯ ವೈಭವ ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅದಮ್ಯ ಚೇತನ ಪ್ರತಿಷ್ಠಾನದ ತೇಜಸ್ವಿನಿ ಅನಂತ ಕುಮಾರ್ ಮಾತನಾಡಿ, ‘ಮಕ್ಕಳಿಗೆ ಸಾತ್ವಿಕ ಆಹಾರ ನೀಡುವುದು ಮುಖ್ಯ. ಮೊಟ್ಟೆ ಸೇವಿಸುವ ಬಗ್ಗೆ ನಾನು ವೈಯಕ್ತಿಕವಾಗಿ ವಿರೋಧಿಸಿದ್ದೆ. ಈಗ ಹಲವು ಮಠಾಧೀಶರು ಸಹ ಸಾತ್ವಿಕ ಆಹಾರವನ್ನು ಪ್ರತಿಪಾದಿಸಿದ್ದಾರೆ. ಮಕ್ಕಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಕಡಿಮೆ ಇರುವುದು ನಿಜ. ಆದರೆ, ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತವಲ್ಲ’ ಎಂದು ಪ್ರತಿಪಾದಿಸಿದರು.

ಶಿಕ್ಷಕರಲ್ಲಿ ಜಾಗೃತಿ ಮೂಡಲಿ: ಸಭೆಯಲ್ಲಿ ಭಾಗವಹಿಸಿದ್ದ ಮಠಾಧೀಶರು, ಪಾದ್ರಿಗಳು, ಮುಸ್ಲಿಂ ಮುಖಂಡರು ಮತ್ತು ಶಿಕ್ಷಣ ತಜ್ಞರು, ಶಿಕ್ಷಕರ ವ್ಯಕ್ತಿತ್ವದ ಬಗ್ಗೆ ಪರಾಮರ್ಶಿಸಿದರು.

‘ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಬೋಧಿಸುವ ತುರ್ತು ಅಗತ್ಯವಿದೆ ಎಂದು ಒಕ್ಕೊರಲಿನಿಂದ ಪ್ರತಿಪಾದಿಸಿದ ಅವರು, ಮೊದಲು ಶಿಕ್ಷಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಸ್ತುತ ಜೀವನದ ಮೌಲ್ಯಗಳು ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಶಿಕ್ಷಣದ ಮೂಲಕವೇ ಬದುಕಿನ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಕಲಿಸಬೇಕು ಹಾಗೂ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ಮೌಲ್ಯಯುತ ಶಿಕ್ಷಣ ಅನುಷ್ಠಾನಕ್ಕೆ ಸಮಿತಿ’
‘ಪಠ್ಯದಲ್ಲಿ ಮೌಲ್ಯಯುತ ಶಿಕ್ಷಣ ಅನುಷ್ಠಾನಕ್ಕೆ ಸಮಿತಿ ರಚಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ನೈತಿಕ ಮೌಲ್ಯಗಳ ಶಿಕ್ಷಣವನ್ನು ಜಾರಿಗೊಳಿಸಲಾಗುವುದು’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಸಾತ್ವಿಕ ಆಹಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಆಹಾರ ಸೇವಿಸುವ ಬಗ್ಗೆ ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಾತ್ವಿಕ ಆಹಾರ ಮಾತ್ರ ನೀಡುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ. ಆದರೆ, ಮಗುವಿನ ಬೆಳವಣಿಗೆ ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರುವ ಆಹಾರದ ಬಗ್ಗೆಯೂ ಯೋಚಿಸುತ್ತೇವೆ’ ಎಂದು ತಿಳಿಸಿದರು.

‘ಕೆಲವು ದೇಶಗಳು ಹಾಲು ಸೇವಿಸುವುದನ್ನು ಸಹ ಕಡಿಮೆ ಮಾಡಬೇಕು ಎಂದು ಸಲಹೆ ನೀಡುತ್ತಿವೆ’ ಎಂದರು.

ನೈತಿಕ ಶಿಕ್ಷಣ ಬೋಧಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ. ಆದರೆ, ಮೊದಲು ಶಿಕ್ಷಕರು ಸಹ ಸರಿಯಾಗಬೇಕು ಎನ್ನುವ ಅಭಿಪ್ರಾಯಗಳು ದುಂಡು ಮೇಜಿನ ಸಭೆಯಲ್ಲಿ ವ್ಯಕ್ತವಾದವು.

ಮಾಂಸ ನೇತು ಹಾಕುವುದು ನಿಲ್ಲಲಿ
ಮಕ್ಕಳ ಮೇಲೆ ಹಿಂಸೆಯ ಪ್ರಭಾವವನ್ನು ಕಡಿಮೆ ಮಾಡಬೇಕಾಗಿದೆ. ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು ಮತ್ತು ಮಾಂಸವನ್ನು ಅಂಗಡಿಗಳ ಮುಂದೆ ನೇತುಹಾಕುವುದನ್ನು ಸ್ಥಗಿತಗೊಳಿಸಬೇಕು ಅಥವಾ ಇದನ್ನು ಮರೆಮಾಚಬೇಕು.
–ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ

‘ಧರ್ಮಾತೀತವಾಗಿ ಮೌಲ್ಯಗಳ ಬೋಧನೆಯಾಗಲಿ’
ಮೌಲ್ಯಗಳನ್ನು ಧರ್ಮಾತೀತವಾಗಿ ಬೋಧಿಸಬೇಕು. ಬಿ.ಇಡಿ. ಹಂತದಲ್ಲೇ ಮೌಲ್ಯಯುತ ಶಿಕ್ಷಣ ನೀಡಬೇಕು. ಇದರಿಂದ ಶಿಕ್ಷಕರಾಗುವವರ ವ್ಯಕ್ತಿತ್ವದಲ್ಲೂ ಬದಲಾವಣೆ ತರಲು ಸಾಧ್ಯ. ಮಕ್ಕಳಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಬಗ್ಗೆ ಅರಿವು ಮೂಡಿಸಬೇಕು
–ರೆವರೆಂಡ್ ಪೀಟರ್ ಮಚಾಡೊ, ಆರ್ಚ್ ಬಿಷಪ್, ಬೆಂಗಳೂರು

‘ಶಿಕ್ಷಣ ಒಗ್ಗೂಡಿಸುವ ಕಾರ್ಯ ಮಾಡಲಿ’
’ಮನುಷ್ಯರಲ್ಲಿ ಪ್ರಜ್ಞೆ ಅರಳದ ವಿದ್ಯೆಯಿಂದ ಯಾವುದೇ ಪ್ರಯೋಜನವಿಲ್ಲ. ತಂತ್ರಜ್ಞಾನದಿಂದ ಮನುಷ್ಯ ಸಂಬಂಧಗಳು ದೂರವಾಗುತ್ತಿವೆ. ಶಿಕ್ಷಣ ಎನ್ನುವುದು ಎಲ್ಲರನ್ನೂ ಒಗ್ಗೂಡಿಸಬೇಕೇ ಹೊರತು ವಿಭಜಿಸುವ ಕಾರ್ಯ ಮಾಡಬಾರದು. ಸಂಬಂಧಗಳು ಗಟ್ಟಿಗೊಳಿಸುವ ಅಧ್ಯಾತ್ಮ ಅಥವಾ ನೈತಿಕ ಶಿಕ್ಷಣವನ್ನು ಹಂತ ಹಂತವಾಗಿ ಮಕ್ಕಳಿಗೆ ಕಲಿಸಬೇಕು
–ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ಪುನರ್ಜನ್ಮದ ಬಗ್ಗೆಯೂ ತಿಳಿಸಿ
‘ಸಾವು ಮತ್ತು ಪುನರ್ಜನ್ಮದ ಬಗ್ಗೆ ವೈಜ್ಞಾನಿಕವಾಗಿ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ವಸ್ತುಸಂಗ್ರಹಾಲಯಕ್ಕೆ ಶಿಕ್ಷಕರು ಭೇಟಿ ನೀಡುವಂತೆ ಸರ್ಕಾರ ಸಲಹೆ ನೀಡಬೇಕು. ಈ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಲು ನಾಲ್ಕು ಗಂಟೆಗಳು ಬೇಕು’
–ಬಸವರಾಜ ರಾಜಋಷಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ

‘ನೀತಿ ಬೋಧಿಸುವವರು ಮೊದಲು ಆಚರಿಸಲಿ’
‘ನೀತಿ ಬೋಧಿಸುವವರು ಮೊದಲು ಆಚರಿಸಬೇಕು. ಶಿಕ್ಷಕರು ಮತ್ತು ಪೋಷಕರಿಗೆ ನೈತಿಕತೆ ಬಗ್ಗೆ ಕಲಿಸಬೇಕಾದ ಪರಿಸ್ಥಿತಿ ಇಂದು ಸೃಷ್ಟಿಯಾಗಿದೆ. ನೈತಿಕತೆಯ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಬದಲಾವಣೆ ತರಬಹುದು. ಮುಖ್ಯವಾಗಿ ಮಕ್ಕಳನ್ನು ಮೊಬೈಲ್ ಜಗತ್ತಿನಿಂದ ಹೊರತರಬೇಕಾಗಿದೆ
–ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

‘ಹೀರೊಯಿಸಂ ಹಿಂಸೆಯ ಪ್ರತಿರೂಪವಾಗಬಾರದು’
‘ಅಮೆರಿಕದಲ್ಲಿ ಒಂದು ವರ್ಷದಲ್ಲಿ 600 ಗುಂಡಿನ ದಾಳಿಯ ಪ್ರಕರಣಗಳು ನಡೆದಿವೆ. ಹೀಗಾಗಿ, ಜಗತ್ತಿನಾದ್ಯಂತ ನೈತಿಕ ಶಿಕ್ಷಣ ಅಗತ್ಯವಿದೆ. ಮಕ್ಕಳನ್ನು ಮಾಹಿತಿಯ ಬೂತ್‌ಗಳನ್ನಾಗಿ ಮಾಡಬಾರದು. ಹಿರೋಯಿಸಂ ಎನ್ನುವುದು ಹಿಂಸೆಯ ಪ್ರತಿರೂಪವಾಗಬಾರದು.
–ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್

‘ಶಿಕ್ಷಕರನ್ನು ಸರಿಪಡಿಸಿದರೆ ಎಲ್ಲವೂ ಸರಿಯಾಗುತ್ತದೆ’
ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ. ವಿದ್ಯಾರ್ಥಿಗಳಿಗೆ ಇಂದು ವ್ಯವಹಾರಿಕ ಮತ್ತು ಔದ್ಯೋಗಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ. ಆದರೆ, ಅಧ್ಯಾತ್ಮಿಕ ಶಿಕ್ಷಣ ಶೂನ್ಯ. ನೈತಿಕ ಶಿಕ್ಷಣ ನೀಡುವ ಶಿಕ್ಷಕರಿಗೆ ಮೊದಲು ಮೌಲ್ಯಗಳನ್ನು ಬೋಧಿಸಬೇಕಾಗಿದೆ. ಶಿಕ್ಷಕರನ್ನು ಸರಿಪಡಿಸಿದರೆ ಎಲ್ಲವೂ ಸರಿಯಾಗುತ್ತದೆ. ಶಿಕ್ಷಕರ ಜತೆಗೆ ರಾಜಕೀಯ ಧುರೀಣರಿಗೂ ನೈತಿಕ ಶಿಕ್ಷಣ ಬೋಧಿಸಬೇಕಾಗಿದೆ. ರಾಜಕಾರಣಿಗಳು ವೈಯಕ್ತಿಕ ನಿಂದನೆಯಲ್ಲಿ ತೊಡಗುವುದನ್ನು ತಡೆಯಲು ಹೊಸ ಕಾಯ್ದೆ ರೂಪಿಸಿ ಮೂಗುದಾರ ಹಾಕಬೇಕು.
–ಶಿವಮೂರ್ತಿ ಶಿವಾಚಾರ್ಯ  ಸ್ವಾಮೀಜಿ,ತರಳಬಾಳು ಮಠ, ಸಿರಿಗೆರೆ

‘ನೈತಿಕ ಶಿಕ್ಷಣ ಮುಖ್ಯ’
‘ನೈತಿಕ ಶಿಕ್ಷಣವನ್ನು ಚಟುವಟಿಕೆ ಆಧಾರಿತ ಕಲಿಕೆಯಾಗಬೇಕು. ಆದರೆ, ಮೌಲ್ಯಗಳು ಸಾರ್ವತ್ರಿಕವಾಗಿರಬೇಕೇ ಹೊರತು ಬಣ್ಣ ಹಚ್ಚುವ ಪ್ರಯತ್ನ ಮಾಡಬಾರದು. ಪ್ರೀತಿ, ಸೌಹಾರ್ದ ಮೂಡಿಸುವ ಶಿಕ್ಷಣ ಇಂದಿನ ತುರ್ತು ಅಗತ್ಯವಿದೆ. ನೈತಿಕ ಶಿಕ್ಷಣ ಎನ್ನುವುದು ಅಕಾಡೆಮಿಕ್ ಸಹ ಆಗಿರಬೇಕು’
–ಅಬ್ದುಲ್ ರಹೀಂ

‘ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲಿ’
ಶೇ 70ರಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇದರಿಂದ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಮನೋಭಾವ ಬೆಳೆ ಯುತ್ತಿದೆ. ಇದನ್ನು ದೂರ ಮಾಡುವ ಪ್ರಯತ್ನಗಳು ನಡೆಯಬೇಕು. ನೀತಿ ಬೋಧಿಸುವವರು ಮೊದಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. 10 ವರ್ಷಗಳಿಗೊಮ್ಮೆ ಶಿಕ್ಷಣ ಪದ್ಧತಿ ಬದಲಾಗಬೇಕು.
–ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ

‘ಶಿಕ್ಷಕರು ಪರೀಕ್ಷೆಗೆ ಒಳಗಾಗಲಿ’
‘ಜೀವನೋಪಾಯಕ್ಕೆ ಶಿಕ್ಷಣ ಸೀಮಿತವಾಗಬಾರದು. ಈಗ ಪಿಯುಸಿ ನಂತರವೇ ಕಲಿಯಬೇಕಾದ ಆಯುರ್ವೇದದಂತಹ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಬೋಧಿಸಬೇಕು. ಆಗ ಮಕ್ಕಳಲ್ಲಿಯೂ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತದೆ. ಶಿಕ್ಷಕರು ಆದರ್ಶರಾಗಿದ್ದರೆ ಅವರನ್ನು ಮಕ್ಕಳು ಅನುಸರಿಸುತ್ತಾರೆ. ಹೀಗಾಗಿ, ಶಿಕ್ಷಕರಿಗೂ ನಿಯಮಿತವಾಗಿ ಪರೀಕ್ಷೆಗಳನ್ನು ಮಾಡಬೇಕು.
–ರಾಘವೇಶ್ವರ ಭಾರತೀ ಸ್ವಾಮೀಜಿ, ಮಚಂದ್ರಾಪುರ ಮಠ

‘ಶಿಕ್ಷಕರು ಮೊದಲು ಬದಲಾಗಲಿ’
‘ಮಕ್ಕಳ ಮನಸ್ಸು ಬದಲಾಯಿಸಬೇಕಾದರೆ ಶಿಕ್ಷಕರು ಮೊದಲು ಬದಲಾಗಬೇಕು. ಸೇನೆಯ ಕ್ಯಾಪ್ಟನ್‌ಗಳಿಗೆ ನೀಡುವ ತರಬೇತಿ ರೀತಿಯಲ್ಲಿ ಶಿಕ್ಷಕರಿಗೂ ಸಹ ಮೌಲ್ಯಾಧಾರಿತ ಅಂಶಗಳ ಬಗ್ಗೆ ತರಬೇತಿ ನೀಡಬೇಕು’
–ಮುಕ್ತಿದಾನಂದಜೀ ಮಹಾರಾಜ್,ರಾಮಕೃಷ್ಣಾಶ್ರಮ

ಶಿಕ್ಷಣ ಕ್ಷೇತ್ರದಿಂದಲೇ ನೈತಿಕ ಮೌಲ್ಯ ಅಳವಡಿಸುವ ಕಾರ್ಯ ಆರಂಭ ಆಗಬೇಕು. ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಮಾಧ್ಯಮಗಳಿಗೂ ದೊಡ್ಡ ಜವಾಬ್ದಾರಿ ಇದೆ ಎನ್ನುವುದನ್ನು ಅರಿತುಕೊಳ್ಳಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾ ಅಧ್ಯಕ್ಷ

‘ಏಕರೂಪದ ಶಿಕ್ಷಣ ಜಾರಿಯಾಗಲಿ’
‘ಪ್ರಸ್ತುತ ಪರಿಸ್ಥಿತಿಯಲ್ಲಿ ನನಗೆ ಎಂಎಲ್‌ಎ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಈಗ ಶಿಕ್ಷಣ ಮತ್ತು ನಾಗರಿಕತೆ ಅಭಿವೃದ್ಧಿಯಾಗಿದ್ದರೂ ಮೌಲ್ಯಗಳು ಕುಸಿದಿವೆ. ನೈತಿಕತೆಯನ್ನು ಮಕ್ಕಳಿಂದಲೇ ನಿರೀಕ್ಷಿಸುವುದು ತಪ್ಪು. ಅದು ಮೊದಲು ದೊಡ್ಡವರಿಂದಲೇ ಆರಂಭವಾಗಬೇಕು. ಜತೆಗೆ, ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು.
–ಎ.ಟಿ. ರಾಮಸ್ವಾಮಿ, ಶಾಸಕ, ಜೆಡಿಎಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.