ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ-2020: ವರ್ಷದ ಕೊನೆಯಲ್ಲಿ ವಿವಾದಿತ ಮಸೂದೆಗಳ ಸದ್ದು

Last Updated 28 ಡಿಸೆಂಬರ್ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾರಣದಿಂದ ಈ ಬಾರಿ ವಿಧಾನಮಂಡಲ ಅಧಿವೇಶನ ನಡೆದದ್ದೇ ಬಹಳ ಕಡಿಮೆ. ಕೋವಿಡ್‌ ಪೂರ್ವದಲ್ಲಿ ಎರಡು ಬಾರಿ ಮತ್ತು ನಂತರದಲ್ಲಿ ಎರಡು ಬಾರಿ ಅಧಿವೇಶನ ನಡೆದಿದೆ. ಈ ಅಧಿವೇಶನಗಳಲ್ಲಿ ರಾಜ್ಯ ಸರ್ಕಾರ 76 ಮಸೂದೆಗಳನ್ನು ಮಂಡಿಸಿದ್ದು, 72ಕ್ಕೆ ಒಪ್ಪಿಗೆ ಪಡೆದಿದೆ. ಮೊದಲ ಎರಡು ಅಧಿವೇಶನಗಳಲ್ಲಿ ಮಸೂದೆಗಳ ಮಂಡನೆ, ಅಂಗೀಕಾರ ಸಲೀಸಾಗಿ ನಡೆಯಿತು. ಕೋವಿಡ್‌ ನಡುವೆಯೇ ನಡೆದ ಕೊನೆಯ ಎರಡು ಅಧಿವೇಶನಗಳಲ್ಲಿ ಮಾತ್ರ ವಿವಾದಿತ ಮಸೂದೆಗಳೇ ಹೆಚ್ಚು ಸದ್ದು ಮಾಡಿದವು.

ಪಂಚಾಯತ್‌ ರಾಜ್‌ ಸಂಸ್ಥೆಗಳ ಅಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ವಿಸ್ತರಿಸಿ ಮತ್ತು ಕ್ಷೇತ್ರಗಳ ಮೀಸಲಾತಿಯನ್ನು ಎರಡು ಅವಧಿಗೆ ವಿಸ್ತರಿಸಿದ್ದ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಬದಲಿಸುವ ತಿದ್ದುಪಡಿ ಮಸೂದೆಯನ್ನು ಬಿಜೆಪಿ ಸರ್ಕಾರ, ಮಾರ್ಚ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲೇ ಮಂಡಿಸಿತ್ತು. ಐದು ವರ್ಷಕ್ಕೊಮ್ಮೆ (ಒಂದು ಅವಧಿ) ಮೀಸಲಾತಿ ನಿಗದಿ ಮಾಡುವ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರದ ಅವಧಿಯನ್ನು ಎರಡೂವರೆ ವರ್ಷಗಳಿಗೆ ಸೀಮಿತಗೊಳಿಸುವ ಮಸೂದೆಗೆ ಒಪ್ಪಿಗೆ ಪ‍ಡೆಯುವಲ್ಲಿ ಯಶಸ್ವಿಯಾಗಿತ್ತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಯನ್ನೂ ಅದೇ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಿದ್ದ ಮಸೂದೆಗೆ ಡಿಸೆಂಬರ್‌ ಅಧಿವೇಶನಲ್ಲಿ ಒಪ್ಪಿಗೆ ದೊರಕಿದೆ.

ಕೊನೆಯ ಎರಡು ಅಧಿವೇಶನಗಳಲ್ಲಿ ಮಂಡಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಹಾಗೂ ಗೋಹತ್ಯೆ ನಿಷೇಧ ಮಸೂದೆಗಳು ಹೆಚ್ಚು ಸದ್ದು ಮಾಡಿವೆ. ಈ ಪೈಕಿ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನ ಪರಿಷತ್ತಿನ ಒಪ್ಪಿಗೆ ದೊರೆಯುವುದು ಬಾಕಿ ಇದೆ. ಕೃಷಿಯೇತರರಿಗೂ ಕೃಷಿ ಜಮೀನು ಖರೀದಿಗೆ ಅವಕಾಶ ಕಲ್ಪಿಸುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಸೂದೆಗೆ ಜೆಡಿಎಸ್‌ ಬೆಂಬಲದಿಂದ ವಿಧಾನ ಪರಿಷತ್‌ನಲ್ಲೂ ಒಪ್ಪಿಗೆ ದೊರಕಿದೆ. ಕೇಂದ್ರ ಸರ್ಕಾರ ಕೃಷಿ ಸಂಬಂಧಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳ ವಿರುದ್ಧ ರಾಷ್ಟ್ರವ್ಯಾಪಿ ಹೋರಾಟ ನಡೆಯುತ್ತಿರುವಾಗಲೇ ರಾಜ್ಯದಲ್ಲೂ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಈ ವಿಚಾರಗಳು ವಿಧಾನಮಂಡಲದ ಒಳಗೆ ಮತ್ತು ಹೊರಗೆ ದೊಡ್ಡ ಸದ್ದು ಮಾಡಿದವು. ಎರಡು ಬಾರಿ ಸುಗ್ರೀವಾಜ್ಞೆ ಜಾರಿಗೊಳಿಸಿದ ಬಳಿಕ ಈ ಮಸೂದೆಗಳಿಗೆ ವಿಧಾನಮಂಡಲದ ಅಂಗೀಕಾರ ದೊರಕಿದೆ.

ಉತ್ತರ ಪ್ರದೇಶದ ಮಾದರಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ವರ್ಷದ ಕೊನೆಯಅಧಿವೇಶನದಲ್ಲಿ ರಾಜ್ಯ ಸರ್ಕಾರ ಪ್ರಯತ್ನಿಸಿತು. ವಿಧಾನಸಭೆಯಲ್ಲಿ ಗದ್ದಲದ ನಡುವೆಯೇ ಮಸೂದೆಯನ್ನು ದಿಢೀರ್‌ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ವಿಧಾನ ಪರಿಷತ್‌ನಲ್ಲಿ ಮಸೂದೆಗೆ ಒಪ್ಪಿಗೆ ದೊರಕಿಲ್ಲ. ಸಭಾಪತಿ ವಿರುದ್ಧದ ಅವಿಶ್ವಾಸ ನೋಟಿಸ್‌ ಕುರಿತ ಚರ್ಚೆಯ ಕಾರಣದಿಂದ ಒಂದು ದಿನದ ಪ್ರತ್ಯೇಕ ಅಧಿವೇಶನ ನಡೆಸಿದರೂ ಈ ಮಸೂದೆ ಮಂಡನೆಗೆ ಅವಕಾಶ ದೊರಕಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT